S Shorts

ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಸೌಹಾರ್ದಯುತ ಪರಿಹಾರಕ್ಕೆ ಆದ್ಯತೆ; CM ಡಿ.ಕೆ. ಶಿವಕುಮಾರ್

ಕಾವೇರಿ ನೀರು ಹಂಚಿಕೆ ಸಮಸ್ಯೆಗೆ ಸೌಹಾರ್ದಯುತ ಪರಿಹಾರಕ್ಕೆ ಆದ್ಯತೆ; CM ಡಿ.ಕೆ. ಶಿವಕುಮಾರ್
Author: Sagaradventure
Posted By: Sagaradventure
Updated: Aug 2, 2026 | 4:43 PM

ಬೆಂಗಳೂರು: ನದಿ ನೀರಿನ ಹಂಚಿಕೆ ವಿಚಾರದಲ್ಲಿ ಸೌಹಾರ್ದಯುತವಾಗಿ ಸಮಸ್ಯೆ ಬಗೆಹರಿಸಿಕೊಳ್ಳುವುದೇ ರಾಜ್ಯ ಸರ್ಕಾರದ ಮುಖ್ಯ ಆದ್ಯತೆಯಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ತಿಳಿಸಿದ್ದಾರೆ. 

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಕಾವೇರಿ ನೀರಿನ ವಿಚಾರದ ಸರ್ವಪಕ್ಷ ಸಭೆಯ ಬಳಿಕ ಮಾತನಾಡಿದ ಅವರು, ರಾಜ್ಯದ ಜಲಾನಯನ ಪ್ರದೇಶಗಳಲ್ಲಿ, ವಿಶೇಷವಾಗಿ ಕೊಡಗು ಭಾಗದಲ್ಲಿ ಉತ್ತಮ ಮಳೆಯಾಗುತ್ತಿದ್ದು ಪರಿಸ್ಥಿತಿ ಸುಧಾರಿಸುತ್ತಿದೆ. ಪ್ರಸ್ತುತ ಜಲಾಶಯಗಳಲ್ಲಿ 57 ಟಿಎಂಸಿ ನೀರು ಲಭ್ಯವಿದ್ದು ಒಳಹರಿವು ಹೆಚ್ಚಾಗಿದೆ. ಕಬಿನಿ ಜಲಾಶಯ ಸಂಪೂರ್ಣ ಭರ್ತಿಯಾಗಿದ್ದು, ರಾಜ್ಯದ ಕುಡಿಯುವ ನೀರಿನ ಅಗತ್ಯವನ್ನು ಭದ್ರಪಡಿಸುವುದರ ಜೊತೆಗೆ ರೈತರ ಬಿತ್ತನೆ ಬೆಳೆಗಳ ರಕ್ಷಣೆಗಾಗಿ ಕೆಆರ್‌ಎಸ್ ಹಾಗೂ ಕಬಿನಿ ನಾಲೆಗಳಿಗೆ ಈಗಾಗಲೇ ನೀರು ಹರಿಸಲಾಗಿದೆ ಎಂದು ಮಾಹಿತಿ ನೀಡಿದರು.

ಕಾವೇರಿ ವಿಚಾರವಾಗಿ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರು ಮಾತುಕತೆಗೆ ಬರಲು ಸಿದ್ಧ ಎಂದು ತಿಳಿಸಿದ್ದರು, ಆದರೆ ಕಾವೇರಿ ಪರಿಸ್ಥಿತಿ ತಿಳಿಯಾದ ನಂತರ ಬರುವಂತೆ ಅವರಿಗೆ ಸೂಚಿಸಲಾಗಿದೆ ಎಂದು ತಿಳಿಸಿದರು. ರಾಜ್ಯದಲ್ಲಿದ್ದ ಭೀಕರ ಬರ ಪರಿಸ್ಥಿತಿಯನ್ನು ಪರಿಗಣಿಸದೆ ತಮಿಳುನಾಡು 9.9 ಟಿಎಂಸಿ ನೀರು ಬಿಡುಗಡೆಗೆ ಕೋರಿದಾಗ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA) ನೀರು ಬಿಡಲು ಸೂಚಿಸಿತ್ತು. 

ಆದರೆ ರಾಜ್ಯದ ಹಿತದೃಷ್ಟಿಯಿಂದ ಇದರ ವಿರುದ್ಧ ಈಗಾಗಲೇ ಮೇಲ್ಮನವಿ ಸಲ್ಲಿಸಲಾಗಿದೆ. ಪ್ರಸ್ತುತ ನಿತ್ಯ 3,500 ಕ್ಯೂಸೆಕ್ ಕಾವೇರಿ ನೀರು ಬಿಡಲು ಆದೇಶವಿದ್ದರೂ, ಒಳಹರಿವು ಹೆಚ್ಚಿರುವುದರಿಂದ ಹೆಚ್ಚುವರಿ ನೀರು ಸಹಜವಾಗಿ ಹರಿದು ಹೋಗುತ್ತಿದೆಯೇ ಹೊರತು ನೀರನ್ನು ಹಿಡಿದಿಟ್ಟುಕೊಳ್ಳಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

ಇದೇ ವೇಳೆ ಕೇಂದ್ರ ಜಲಶಕ್ತಿ ಸಚಿವ ಸಿ.ಆರ್. ಪಾಟೀಲ್ ಅವರು ಕರ್ನಾಟಕಕ್ಕೆ ನೀಡುತ್ತಿರುವ ಸಹಕಾರವನ್ನು ಸ್ಮರಿಸಿದ ಅವರು, ಕೃಷ್ಣಾ ನದಿ ನೀರು ಹಂಚಿಕೆ, ತುಂಗಭದ್ರಾ ಅಣೆಕಟ್ಟಿನ ಕ್ರಸ್ಟ್ ಗೇಟ್‌ಗಳ ಮರುಸ್ಥಾಪನೆ ಹಾಗೂ ನವಿಲೆ ಸಮತೋಲನ ಅಣೆಕಟ್ಟು ನಿರ್ಮಾಣದ ಪ್ರಸ್ತಾಪಕ್ಕೆ ಕೇಂದ್ರ ಸರ್ಕಾರ ಸಮ್ಮತಿ ಸೂಚಿಸಿದೆ ಎಂದರು. ಅಲ್ಲದೆ ಕೃಷ್ಣಾ-ಗೋದಾವರಿ-ಕಾವೇರಿ ನದಿಗಳ ಜೋಡಣೆ ಪ್ರಕ್ರಿಯೆಯಲ್ಲೂ ಕೇಂದ್ರದಿಂದ ಉತ್ತಮ ನೆರವು ಸಿಗುತ್ತಿದೆ ಎಂದು ತಿಳಿಸಿದರು.

ಈ ಸಭೆಯಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯ, ಶ್ರೀ ಬಿ.ಎಸ್.ಯಡಿಯೂರಪ್ಪ, ಶ್ರೀ ಸದಾನಂದಗೌಡ, ಶ್ರೀ ಬಸವರಾಜ ಬೊಮ್ಮಾಯಿ, ಕೇಂದ್ರ ಸಚಿವರಾದ ಶ್ರೀ ಹೆಚ್.ಡಿ.ಕುಮಾರಸ್ವಾಮಿ, ಶ್ರೀ ವಿ.ಸೋಮಣ್ಣ, ಶೋಭಾ ಕರಂದ್ಲಾಜೆ, ಉಪಮುಖ್ಯಮಂತ್ರಿಗಳಾದ ಡಾ. ಜಿ.ಪರಮೇಶ್ವರ, ಸಚಿವರಾದ ಶ್ರೀ ರಾಮಲಿಂಗಾ ರೆಡ್ಡಿ, ಶ್ರೀ ಕೃಷ್ಣ ಬೈರೇಗೌಡ, ಶ್ರೀ ಎಂ.ಬಿ.ಪಾಟೀಲ್, ಶ್ರೀ ಕೆ.ಜೆ.ಜಾರ್ಜ್, ನವದೆಹಲಿಯ ಕರ್ನಾಟಕದ ವಿಶೇಷ ಪ್ರತಿನಿಧಿ ಶ್ರೀ ಟಿ.ಬಿ.ಜಯಚಂದ್ರ, ಸಂಸತ್ ಸದಸ್ಯ ಶ್ರೀ ಗೋವಿಂದ ಕಾರಜೋಳ, ವಿರೋಧ ಪಕ್ಷದ ನಾಯಕ ಶ್ರೀ ಆರ್‌. ಅಶೋಕ್, ಶ್ರೀ ಛಲವಾದಿ ನಾರಾಯಣಸ್ವಾಮಿ, ಮಾಜಿ ಸಚಿವ ಶ್ರೀ ಹೆಚ್.ಕೆ.ಪಾಟೀಲ್, ಶ್ರೀ ಬಿ.ಕೆ.ಹರಿಪ್ರಸಾದ್, ನಿವೃತ್ತ ನ್ಯಾಯಾಧೀಶರಾದ ನಾಗಮೋಹನದಾಸ್, ಅಡ್ವೋಕೇಟ್‌ ಜನರಲ್ ಶಶಿಕಿರಣ್ ಶೆಟ್ಟಿ, ಆರ್ಥಿಕ ಸಲಹೆಗಾರ ಎಲ್.ಕೆ.ಅತೀಕ್, ಅಪರ ಮುಖ್ಯಕಾರ್ಯದರ್ಶಿ ತುಷಾರ್ ಗಿರಿನಾಥ್ ಸೇರಿದಂತೆ ಹಿರಿಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.