ಇಂಡೋನೇಷ್ಯಾದ ನಡು ಸಮುದ್ರದಲ್ಲಿ ಪ್ರಯಾಣಿಕರ ಫೆರಿಯೊಂದಕ್ಕೆ ಬೆಂಕಿ ಹೊತ್ತಿಕೊಂಡ ಪರಿಣಾಮ ಐವರು ಮೃ*ತಪಟ್ಟು, 41 ಮಂದಿ ನಾಪತ್ತೆಯಾಗಿರುವ ಭೀಕರ ಘಟನೆ ಭಾನುವಾರ ನಡೆದಿದೆ. ಈ ಫೆರಿಯಲ್ಲಿ ಒಟ್ಟು 271 ಮಂದಿ ಪ್ರಯಾಣಿಕರು ಹಾಗೂ ಸಿಬ್ಬಂದಿ ಇದ್ದರು. ಈ ಪೈಕಿ 225 ಜನರನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ ಎಂದು ಶೋಧ ಮತ್ತು ರಕ್ಷಣಾ ಅಧಿಕಾರಿಗಳನ್ನು ಉಲ್ಲೇಖಿಸಿ ವರದಿಗಳು ತಿಳಿಸಿವೆ. ಪೂರ್ವ ಜಾವಾದ ಪ್ರಮುಖ ನಗರವಾದ ಸುರಬಾಯಾದಿಂದ ದಕ್ಷಿಣ ಸುಲಾವೆಸಿಯ ಮಕಾಸ್ಸರ್ ಕಡೆಗೆ ಈ ಫೆರಿ ಸಾಗುತ್ತಿದ್ದಾಗ ಈ ಭಾರಿ ದುರಂತ ಸಂಭವಿಸಿದೆ.
ಹಡಗಿಗೆ ಬೆಂಕಿ ಹೊತ್ತಿಕೊಂಡ ತಕ್ಷಣ ಕ್ಯಾಪ್ಟನ್ ರಕ್ಷಣಾ ಪಡೆಗಳಿಗೆ ಮಾಹಿತಿ ರವಾನಿಸಿದ್ದಾರೆ. ಸುರಬಾಯಾ ಶೋಧ ಮತ್ತು ರಕ್ಷಣಾ ಕಚೇರಿಯ ಮುಖ್ಯಸ್ಥ ನಾನಾಂಗ್ ಸಿಗಿತ್ ಅವರು ನೀಡಿರುವ ಮಾಹಿತಿಯ ಪ್ರಕಾರ, ‘ಕೆಎಂಪಿ ಮುತ್ತಿಯಾರ ಸೆಂತೋಸಾ 2’ ಫೆರಿಯಿಂದ ಪ್ರಾಣಭೀತಿಯಿಂದ ಸಮುದ್ರಕ್ಕೆ ಹಾರಿದ ಪ್ರಯಾಣಿಕರನ್ನು ರಕ್ಷಿಸಲು ‘ಟಿಬಿ ಹಸ್ನೂರ್ 26’ ಮತ್ತು ‘ಬ್ರಿಟಿಷ್ ಮೆಂಟರ್’ ಸೇರಿದಂತೆ ಸಮೀಪದಲ್ಲಿದ್ದ ಹಲವು ಹಡಗುಗಳು ಕಾರ್ಯಾಚರಣೆಯಲ್ಲಿ ಕೈಜೋಡಿಸಿವೆ.
ಜೊತೆಗೆ ‘ಎಸ್ಎಆರ್ 249 ಪೆರ್ಮಾಡಿ’ ರಕ್ಷಣಾ ಹಡಗು ಕೂಡ ಘಟನಾ ಸ್ಥಳದತ್ತ ಧಾವಿಸುತ್ತಿದ್ದು, ತಲುಪಲು ಸುಮಾರು ಆರು ಗಂಟೆಗಳ ಕಾಲಾವಕಾಶ ಬೇಕಿದೆ. ಬೆಂಕಿಯ ಕೆನ್ನಾಲಗೆಯಿಂದ ಪಾರಾಗಲು ಲೈಫ್ ಜಾಕೆಟ್ ಧರಿಸಿದ ಪ್ರಯಾಣಿಕರು ಹಡಗಿನ ಒಂದು ಬದಿಯಲ್ಲಿ ಜಮಾಯಿಸಿರುವ ಮತ್ತು ದಟ್ಟ ಕಪ್ಪು ಹೊಗೆ ಆವರಿಸಿರುವ ಭಯಾನಕ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ.
ಪ್ರಯಾಣಿಕರು ಹಾಗೂ ಸಿಬ್ಬಂದಿಯ ಸುರಕ್ಷತೆಗೆ ನಮ್ಮ ಮೊದಲ ಆದ್ಯತೆಯಾಗಿದ್ದು, ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತವಾಗಿ ಮತ್ತು ಸುರಕ್ಷಿತವಾಗಿ ನಡೆಸಲು ಎಲ್ಲಾ ಸಂಬಂಧಿತ ಅಧಿಕಾರಿಗಳೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇವೆ ಎಂದು ಸಾರಿಗೆ ಸಚಿವಾಲಯದ ಹಿರಿಯ ಅಧಿಕಾರಿ ಮುಹಮ್ಮದ್ ಮಸ್ಹೂದ್ ಸ್ಪಷ್ಟಪಡಿಸಿದ್ದಾರೆ.
17,000ಕ್ಕೂ ಹೆಚ್ಚು ದ್ವೀಪಗಳನ್ನು ಹೊಂದಿರುವ ಇಂಡೋನೇಷ್ಯಾದಲ್ಲಿ ಹವಾಮಾನ ವೈಪರೀತ್ಯ ಹಾಗೂ ಸುರಕ್ಷತಾ ನಿಯಮಗಳ ನಿರ್ಲಕ್ಷ್ಯದಿಂದಾಗಿ ಇಂತಹ ಜಲಸಾರಿಗೆ ದುರಂತಗಳು ಪದೇಪದೇ ಸಂಭವಿಸುತ್ತಿವೆ. ಕಳೆದ ತಿಂಗಳಷ್ಟೇ ಸೆಲಯಾರ್ ದ್ವೀಪದ ಬಳಿ 70ಕ್ಕೂ ಹೆಚ್ಚು ಜನರಿದ್ದ ಫೆರಿಯೊಂದು ಮುಳುಗಿ ನಾಲ್ವರು ಮೃತಪಟ್ಟು, 14 ಜನರು ನಾಪತ್ತೆಯಾಗಿದ್ದನ್ನು ಇಲ್ಲಿ ಸ್ಮರಿಸಬಹುದು.
