S Shorts

ನೂರಾರು ಜೀವ ಉಳಿಸಿದ ಭಾರತೀಯ ಪೈಲಟ್‌ಗೆ UAEಯ ಅತ್ಯುನ್ನತ ‘ಜಾಯೆದ್ II’ ಪ್ರಶಸ್ತಿ!

ನೂರಾರು ಜೀವ ಉಳಿಸಿದ ಭಾರತೀಯ ಪೈಲಟ್‌ಗೆ UAEಯ ಅತ್ಯುನ್ನತ ‘ಜಾಯೆದ್ II’ ಪ್ರಶಸ್ತಿ!
Author: Sagaradventure
Posted By: Sagaradventure
Updated: Oct 28, 2026 | 11:03 AM

ವಿಮಾನ ಹಾರಾಟದ ವೇಳೆ ಕಾಕ್​ಪಿಟ್​ನಲ್ಲಿ ನಡೆದ ಹಠಾತ್ ದಾಳಿಯ ಸಂದರ್ಭದಲ್ಲಿ ಅಪ್ರತಿಮ ಧೈರ್ಯ ಮತ್ತು ಸಮಯಪ್ರಜ್ಞೆ ಮೆರೆದು ನೂರಾರು ಪ್ರಯಾಣಿಕರ ಪ್ರಾಣ ಉಳಿಸಿದ ಭಾರತೀಯ ಪೈಲಟ್ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಹಾಗೂ ‘ಫ್ಲೈದುಬೈ’ ಸಿಬ್ಬಂದಿಗೆ ಯುಎಇ ಸರ್ಕಾರ ತನ್ನ ಅತ್ಯುನ್ನತ ನಾಗರಿಕ ಪ್ರಶಸ್ತಿ ನೀಡಿ ಗೌರವಿಸಿದೆ. 

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಅಲ್ ನಹ್ಯಾನ್ ಅವರು ಸಿಬ್ಬಂದಿಯ ಕರ್ತವ್ಯನಿಷ್ಠೆ ಮತ್ತು ವೃತ್ತಿಪರತೆಯನ್ನು ಗುರುತಿಸಿ ಘೋಷಿಸಿದ್ದ ‘ಜಾಯೆದ್ II’ (Zayed II) ಪ್ರಶಸ್ತಿಯನ್ನು ದುಬೈನ ಕ್ರೌನ್ ಪ್ರಿನ್ಸ್, ಉಪ ಪ್ರಧಾನಿ ಹಾಗೂ ರಕ್ಷಣಾ ಸಚಿವ ಶೇಖ್ ಹಮ್ದಾನ್ ಬಿನ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಪ್ರದಾನ ಮಾಡಿದರು.

ಕಾಕ್‌ಪಿಟ್‌ನಲ್ಲಿ ನಡೆದಿದ್ದೇನು? 

ಸೆಪ್ಟೆಂಬರ್ 30ರಂದು ಫ್ಲೈದುಬೈ ವಿಮಾನವು ಆಗಸದಲ್ಲಿ ಹಾರಾಟ ನಡೆಸುತ್ತಿದ್ದಾಗ ಕಾಕ್‌ಪಿಟ್‌ನಲ್ಲಿ ಅನಿರೀಕ್ಷಿತ ದಾಳಿ ಮತ್ತು ತುರ್ತು ಪರಿಸ್ಥಿತಿ ಉಂಟಾಗಿತ್ತು. ದುಷ್ಕರ್ಮಿಯ ದಾಳಿಯಿಂದಾಗಿ ಕ್ಯಾಪ್ಟನ್ ಸ್ಮಿತ್ ಮಚ್ಚರ್ ಗಂಭೀರವಾಗಿ ಗಾಯಗೊಂಡಿದ್ದರು. ರಕ್ತಸ್ರಾವ ಹಾಗೂ ತೀವ್ರ ಗಾಯಗಳ ನಡುವೆಯೂ ಅವರು ನಿಯಂತ್ರಣ ಕಳೆದುಕೊಳ್ಳದೆ ಕಾಕ್‌ಪಿಟ್‌ನ ಲಾಕ್ ಆಗಿದ್ದ ಬಾಗಿಲನ್ನು ಒಳಗಿನಿಂದ ತೆರೆಯುವಲ್ಲಿ ಯಶಸ್ವಿಯಾದರು. ಬಾಗಿಲು ತೆರೆದ ತಕ್ಷಣವೇ ವಿಮಾನದ ಸಿಬ್ಬಂದಿ ಹಾಗೂ ಪ್ರಯಾಣಿಕರು ಒಳನುಗ್ಗಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದರು. ಒಂದು ವೇಳೆ ಬಾಗಿಲು ತೆರೆಯದಿದ್ದರೆ ವಿಮಾನವು ಭೀಕರ ಅಪಘಾತಕ್ಕೆ ಈಡಾಗುವ ಸಂಭವವಿತ್ತು. ಮಚ್ಚರ್ ಅವರ ಈ ಸಾಹಸದಿಂದಾಗಿ ಭಾರೀ ದುರಂತವೊಂದು ತಪ್ಪಿತು.

ಯುಎಇ ನಾಯಕತ್ವದಿಂದ ಶ್ಲಾಘನೆ: 

ಯುಎಇ ಅಧ್ಯಕ್ಷ ಶೇಖ್ ಮೊಹಮ್ಮದ್ ಬಿನ್ ಜಾಯೆದ್ ಹಾಗೂ ಯುಎಇ ಪ್ರಧಾನಿ ಮತ್ತು ದುಬೈ ಆಡಳಿತಗಾರ ಶೇಖ್ ಮೊಹಮ್ಮದ್ ಬಿನ್ ರಶೀದ್ ಅಲ್ ಮಕ್ತೂಮ್ ಅವರ ಸಮ್ಮುಖದಲ್ಲಿ ಸಿಬ್ಬಂದಿಯನ್ನು ಸನ್ಮಾನಿಸಲಾಯಿತು. ಮಾನವ ಜೀವವನ್ನು ರಕ್ಷಿಸುವುದು ಮತ್ತು ಸಾರ್ವಜನಿಕ ಸುರಕ್ಷತೆಯನ್ನು ಕಾಪಾಡುವುದು ಯುಎಇಯ ಪ್ರಮುಖ ಆದ್ಯತೆ ಎಂದು ನಾಯಕರು ಶ್ಲಾಘಿಸಿದರು. ಇದಕ್ಕೂ ಮುನ್ನ, ಕ್ಯಾಪ್ಟನ್ ಮಚ್ಚರ್ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ವೇಳೆ (ಅಕ್ಟೋಬರ್ 3) ದುಬೈ ಕ್ರೌನ್ ಪ್ರಿನ್ಸ್ ಶೇಖ್ ಹಮ್ದಾನ್ ಸ್ವತಃ ಆಸ್ಪತ್ರೆಗೆ ತೆರಳಿ ಅವರ ಯೋಗಕ್ಷೇಮ ವಿಚಾರಿಸಿದ್ದರು ಹಾಗೂ ಮಚ್ಚರ್ ಅವರ ಧೈರ್ಯ ಯುಎಇ ವಾಯುಯಾನ ಕ್ಷೇತ್ರದ ಹೆಮ್ಮೆ ಎಂದು ಕೊಂಡಾಡಿದ್ದರು.