ನವದೆಹಲಿ: ಯುಪಿಎಸ್‌ಸಿ (UPSC) ನಾಗರಿಕ ಸೇವೆಗಳ ಪರೀಕ್ಷೆಯ ಫಲಿತಾಂಶಗಳ ಕುರಿತು ದಾರಿತಪ್ಪಿಸುವ ಜಾಹೀರಾತುಗಳನ್ನು ನೀಡಿದ ಆರೋಪದಡಿ ಪ್ರಮುಖ ಕೋಚಿಂಗ್ ಸಂಸ್ಥೆಯಾದ ‘ವಾಜಿರಾಮ್ ಮತ್ತು ರವಿ ಐಎಎಸ್ ಸ್ಟಡಿ ಸೆಂಟರ್’ಗೆ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರ (CCPA) ಬರೋಬ್ಬರಿ 7 ಲಕ್ಷ ರೂ.ಗಳ ದಂಡ ವಿಧಿಸಿದೆ. ಗ್ರಾಹಕ ರಕ್ಷಣಾ ಕಾಯ್ದೆ 2019 ರ ಉಲ್ಲಂಘನೆ ಹಾಗೂ ಉದ್ದೇಶಪೂರ್ವಕವಾಗಿ ಪ್ರಮುಖ ಮಾಹಿತಿಯನ್ನು ಮರೆಮಾಚಿದ್ದಕ್ಕಾಗಿ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ. ಸಿಸಿಪಿಎ ಮುಖ್ಯ ಆಯುಕ್ತೆ ನಿಧಿ ಖರೆ ಮತ್ತು ಆಯುಕ್ತೆ ಅನುಪಮ್ ಮಿಶ್ರಾ ಅವರನ್ನೊಳಗೊಂಡ ಪೀಠವು ಈ ಮಹತ್ವದ ಆದೇಶವನ್ನು ಹೊರಡಿಸಿದೆ.
2023 ರ ಯುಪಿಎಸ್‌ಸಿ ಪರೀಕ್ಷೆಯಲ್ಲಿ ಯಶಸ್ವಿಯಾದ ಅಭ್ಯರ್ಥಿಗಳ ಹೆಸರು ಮತ್ತು ಫೋಟೋಗಳನ್ನು ಸಂಸ್ಥೆಯು ತನ್ನ ಅಧಿಕೃತ ವೆಬ್‌ಸೈಟ್‌ನಲ್ಲಿ ದೊಡ್ಡದಾಗಿ ಪ್ರದರ್ಶಿಸಿತ್ತು. ಆದರೆ, ಆ ಅಭ್ಯರ್ಥಿಗಳು ವಾಸ್ತವವಾಗಿ ಸಂಸ್ಥೆಯಲ್ಲಿ ಯಾವ ಕೋರ್ಸ್ ಪಡೆದಿದ್ದರು ಎಂಬ ನಿಖರ ಮಾಹಿತಿಯನ್ನು ಉದ್ದೇಶಪೂರ್ವಕವಾಗಿ ಮರೆಮಾಚಿತ್ತು. ಅಭ್ಯರ್ಥಿಗಳು ಕೇವಲ ಉಚಿತ ಸಂದರ್ಶನ ಮಾರ್ಗದರ್ಶನ (IGP) ಪಡೆದಿದ್ದರೂ, ಅವರು ಸಂಸ್ಥೆಯಲ್ಲೇ ಪೂರ್ಣಾವಧಿ ಹಣ ಪಾವತಿಸಿ ಓದಿದ ವಿದ್ಯಾರ್ಥಿಗಳು ಎನ್ನುವಂತೆ ಬಿಂಬಿಸಿ ಗ್ರಾಹಕರನ್ನು ದಾರಿತಪ್ಪಿಸುವ ತಂತ್ರವನ್ನು ಅನುಸರಿಸಲಾಗಿತ್ತು.
ಎರಡು ಕಠಿಣ ಹಂತಗಳನ್ನು ಸ್ವಂತವಾಗಿ ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಕೇವಲ ಸಂದರ್ಶನದ ವೇಳೆ ಮಾರ್ಗದರ್ಶನ ನೀಡಿ, ಇಡೀ ಯಶಸ್ಸು ತಮ್ಮದೇ ಎಂದು ತೋರಿಸಿಕೊಳ್ಳುವುದು ಕಾನೂನುಬಾಹಿರವಾಗಿದ್ದು, ಇದು ವಿದ್ಯಾರ್ಥಿಗಳ ಮಾಹಿತಿ ಪಡೆಯುವ ಹಕ್ಕಿನ ಸ್ಪಷ್ಟ ಉಲ್ಲಂಘನೆಯಾಗಿದೆ ಎಂದು ಸಿಸಿಪಿಎ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದೆ.
ತರಬೇತಿ ವಲಯದಲ್ಲಿ ಪಾರದರ್ಶಕತೆ ತರಲು ಮತ್ತು ವಿದ್ಯಾರ್ಥಿಗಳ ಹಿತಾಸಕ್ತಿ ಕಾಯಲು ಸಿಸಿಪಿಎ ದೇಶಾದ್ಯಂತ ಭಾರಿ ಕಾರ್ಯಾಚರಣೆ ನಡೆಸುತ್ತಿದ್ದು, ಈಗಾಗಲೇ 60 ಕ್ಕೂ ಹೆಚ್ಚು ಸಂಸ್ಥೆಗಳಿಗೆ ಬಿಸಿ ಮುಟ್ಟಿಸಿದೆ. ದಾರಿತಪ್ಪಿಸುವ ಜಾಹೀರಾತು ನೀಡಿದ ಐಐಟಿ-ಜೆಇಇ (IIT-JEE), ನೀಟ್ (NEET), ಆರ್‌ಬಿಐ (RBI) ಮತ್ತು ಯುಪಿಎಸ್‌ಸಿ ತರಬೇತಿ ನೀಡುವ 60 ಕ್ಕೂ ಹೆಚ್ಚು ಕೋಚಿಂಗ್ ಸಂಸ್ಥೆಗಳಿಗೆ ನೋಟಿಸ್ ನೀಡಲಾಗಿದ್ದು, ಇದುವರೆಗೆ ಇಂತಹ ನಿಯಮ ಉಲ್ಲಂಘಿಸಿದ ಸಂಸ್ಥೆಗಳ ಮೇಲೆ ಒಟ್ಟು 1.46 ಕೋಟಿ ರೂ.ಗೂ ಹೆಚ್ಚು ದಂಡ ವಿಧಿಸಲಾಗಿದೆ.
ಯಾವುದೇ ತರಬೇತಿ ಸಂಸ್ಥೆಯನ್ನು ಆಯ್ಕೆ ಮಾಡುವ ಮುನ್ನ ಅಲ್ಲಿನ ಕೋರ್ಸ್‌ಗಳ ಬಗ್ಗೆ ನಿಖರ ಮತ್ತು ಪಾರದರ್ಶಕ ಮಾಹಿತಿ ಪಡೆಯುವ ಸಂಪೂರ್ಣ ಹಕ್ಕು ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಇದೆ ಎಂದು ಪ್ರಾಧಿಕಾರವು ಸಾರ್ವಜನಿಕರಿಗೆ ಸ್ಪಷ್ಟ ಸಂದೇಶ ರವಾನಿಸಿದೆ.
