ಬೆಂಗಳೂರು: ರಾಜ್ಯ ರಾಜಕಾರಣದ ಹೈವೋಲ್ಟೇಜ್ ನಾಯಕತ್ವ ಬದಲಾವಣೆ ಪ್ರಕ್ರಿಯೆಗೆ ಕೊನೆಗೂ ಅಧಿಕೃತ ಮುದ್ರೆ ಬಿದ್ದಿದೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಮಹತ್ವದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ, ಕರ್ನಾಟಕದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ.
ಸಿದ್ದರಾಮಯ್ಯ ಅವರ ರಾಜೀನಾಮೆಯ ಬೆನ್ನಲ್ಲೇ ‘ಬ್ರಾಂಡ್ ಡಿಕೆಶಿ’ ಪಟ್ಟಾಭಿಷೇಕ ನಿಶ್ಚಿತವಾಗಿತ್ತಾದರೂ, ಇಂದು ನಡೆದ ಪ್ರಕ್ರಿಯೆಯ ಮೂಲಕ ಅವರ ಆಯ್ಕೆಯನ್ನು ಅಧಿಕೃತವಾಗಿ ಘೋಷಿಸಲಾಗಿದೆ. ಕಳೆದ 3 ವರ್ಷಗಳಿಂದ ಸಿದ್ದರಾಮಯ್ಯ ಸರ್ಕಾರದಲ್ಲಿ ಅತ್ಯಂತ ಯಶಸ್ವಿಯಾಗಿ ಉಪಮುಖ್ಯಮಂತ್ರಿಯಾಗಿ ಹಾಗೂ ಕೆಪಿಸಿಸಿ ಅಧ್ಯಕ್ಷರಾಗಿ ಜವಾಬ್ದಾರಿ ನಿಭಾಯಿಸಿದ್ದ ಡಿ.ಕೆ. ಶಿವಕುಮಾರ್, ಇನ್ಮುಂದೆ ರಾಜ್ಯದ ಚುಕ್ಕಾಣಿ ಹಿಡಿಯಲಿದ್ದಾರೆ.
ಸಿದ್ದರಾಮಯ್ಯ ನಿರ್ಣಯ, ಪರಮೇಶ್ವರ್ ಅನುಮೋದನೆ!
ಇಂದಿನ ಸಭೆಯಲ್ಲಿ ಉಭಯ ನಾಯಕರ ನಡುವಿನ ಒಗ್ಗಟ್ಟು ಎದ್ದು ಕಾಣುತ್ತಿತ್ತು. ಶಾಸಕಾಂಗ ಪಕ್ಷದ ನೂತನ ನಾಯಕನನ್ನಾಗಿ ಡಿ.ಕೆ. ಶಿವಕುಮಾರ್ ಅವರನ್ನು ಆಯ್ಕೆ ಮಾಡುವ ಕುರಿತು ಸ್ವತಃ ಸಿದ್ದರಾಮಯ್ಯ ಅವರೇ ಪ್ರಮುಖ ನಿರ್ಣಯ ಮಂಡಿಸಿದರು. ಈ ನಿರ್ಣಯವನ್ನು ಹಿರಿಯ ನಾಯಕ ಡಾ. ಜಿ. ಪರಮೇಶ್ವರ್ ಅವರು ಅನುಮೋದಿಸಿದರು. ಸಭೆಯಲ್ಲಿದ್ದ ಎಲ್ಲಾ ಶಾಸಕರು ಕೈ ಎತ್ತುವ ಮೂಲಕ ಈ ಐತಿಹಾಸಿಕ ತೀರ್ಮಾನಕ್ಕೆ ಸರ್ವಸಮ್ಮತಿ ಸೂಚಿಸಿದರು.
ಸಭೆಯಲ್ಲಿ ಎಐಸಿಸಿ ವೀಕ್ಷಕರಾಗಿ ಜೈರಾಮ್ ರಮೇಶ್, ಕೆ.ಸಿ. ವೇಣುಗೋಪಾಲ್ ಹಾಗೂ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಪಾಲ್ಗೊಂಡಿದ್ದರು.
ಅಜ್ಜಯ್ಯನಿಗೆ ವಿಶೇಷ ಪೂಜೆ, ಶಾಸಕರಿಗೆ ಹಸ್ತಲಾಘವ
ದೈವಭಕ್ತರಾಗಿರುವ ಡಿ.ಕೆ. ಶಿವಕುಮಾರ್ ಅವರು ಸಿಎಲ್‌ಪಿ ಸಭೆಗೆ ಆಗಮಿಸುವ ಮುನ್ನ ವಿಧಾನಸೌಧದ ಕೊಠಡಿಯಲ್ಲೇ ತಮ್ಮ ಆರಾಧ್ಯ ದೈವ ನೊಣವಿನಕೆರೆ ಅಜ್ಜಯ್ಯನ ಭಾವಚಿತ್ರಕ್ಕೆ ವಿಶೇಷ ಪೂಜೆ ಸಲ್ಲಿಸಿ ಆಶೀರ್ವಾದ ಪಡೆದರು. ಬಳಿಕ ಸಭಾಂಗಣಕ್ಕೆ ಪ್ರವೇಶಿಸಿದ ಅವರು, ಸಭೆಯಲ್ಲಿದ್ದ ಪ್ರತಿಯೊಬ್ಬ ಶಾಸಕರು ಕುಳಿತಿದ್ದ ಜಾಗಕ್ಕೇ ಖುದ್ದಾಗಿ ತೆರಳಿ ಅತ್ಯಂತ ವಿನಮ್ರತೆಯಿಂದ ಹಸ್ತಲಾಘವ (Handshake) ಮಾಡಿದ್ದು ಎಲ್ಲರ ಗಮನ ಸೆಳೆಯಿತು.
ಜೂನ್ 3 ರಂದು ಲೋಕಭವನದಲ್ಲಿ ಸರಳ ಪ್ರಮಾಣವಚನ!
ಡಿ.ಕೆ. ಶಿವಕುಮಾರ್ ಅವರು ಮುಂಬರುವ ಜೂನ್ 3 ರಂದು (ಬುಧವಾರ) ಸಂಜೆ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನೊಣವಿನಕೆರೆ ಕಾಡುಸಿದ್ದೇಶ್ವರ ಮಠದ ಸ್ವಾಮೀಜಿಗಳ ಮಾರ್ಗದರ್ಶನ ಹಾಗೂ ಅವರು ನಿಗದಿಪಡಿಸಿದ ಶುಭ ಮುಹೂರ್ತದ ಆಧಾರದ ಮೇಲೆಯೇ ಈ ದಿನಾಂಕವನ್ನು ಅಂತಿಮಗೊಳಿಸಲಾಗಿದೆ.
ಯಾವುದೇ ಆಡಂಬರವಿಲ್ಲ: ಈ ಹಿಂದೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಕಾರ್ಯಕ್ರಮ ನಡೆಸುವ ಯೋಚನೆ ಇತ್ತಾದರೂ, ಇದೀಗ ಯಾವುದೇ ಅದ್ಧೂರಿ ಆಡಂಬರವಿಲ್ಲದೆ, ಅತ್ಯಂತ ಸರಳವಾಗಿ ಲೋಕಭವನದಲ್ಲಿ ಈ ಪ್ರಮಾಣವಚನ ಸ್ವೀಕಾರ ಸಮಾರಂಭ ಜರುಗಲಿದೆ. ಕೆಪಿಸಿಸಿ ಕಾರ್ಯಾಧ್ಯಕ್ಷ ಹಾಗೂ ರಾಜ್ಯಸಭಾ ಸದಸ್ಯ ಜಿ.ಸಿ. ಚಂದ್ರಶೇಖರ್ ಅವರು ಜಂಟಿ ಸುದ್ದಿಗೋಷ್ಠಿ ನಡೆಸಿ ಈ ವಿಚಾರವನ್ನು ಅಧಿಕೃತವಾಗಿ ಪ್ರಕಟಿಸಿದ್ದಾರೆ.
