ಬೆಂಗಳೂರು: ಕಾರ್ಪೊರೇಟ್ ಪ್ರಪಂಚದ ಐಷಾರಾಮಿ ಜೀವನ, ಕೈತುಂಬಾ ಸಂಬಳ ಹಾಗೂ ಸಮಾಜದಲ್ಲಿ ಸಿಗುವ ಉನ್ನತ ಸ್ಥಾನಮಾನಗಳನ್ನು ತ್ಯಜಿಸಿ, ಕೇವಲ ನೆಮ್ಮದಿಯ ಬದುಕಿಗಾಗಿ ಆಟೋ ರಿಕ್ಷಾ ಚಾಲಕಿಯಾದ ಬೆಂಗಳೂರಿನ ಮಹಿಳೆಯೊಬ್ಬರ ಕಥೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ವೈರಲ್ ಆಗುತ್ತಿದೆ. ಉದ್ಯಮಿ ಡಾ. ನೆಜ್ರಿನ್ ಮಿಧ್ಲಾಜ್ ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ನೆಟ್ಟಿಗರ ಗಮನ ಸೆಳೆದಿದ್ದು, ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದೆ.
ಡಾ. ನೆಜ್ರಿನ್ ಅವರು ಒಮ್ಮೆ ಆಟೋದಲ್ಲಿ ಪ್ರಯಾಣಿಸುವಾಗ ಮಹಿಳಾ ಚಾಲಕಿಯ ಶಾಂತ ಸ್ವಭಾವ ಮತ್ತು ಆತ್ಮವಿಶ್ವಾಸವನ್ನು ಕಂಡು ಬೆರಗಾಗಿ ಅವರ ಜೊತೆ ಮಾತನಾಡಿದ್ದಾರೆ. ಈ ವೇಳೆ ಆ ಮಹಿಳೆ ಬಿಚ್ಚಿಟ್ಟ ತಮ್ಮ ಜೀವನದ ಪಯಣದ ಕಥೆ ನಿಜಕ್ಕೂ ಆಶ್ಚರ್ಯಚಕಿತಗೊಳಿಸುವಂತಿದೆ.
ಅಸಲಿಗೆ ಆ ಮಹಿಳೆ ಸಾಮಾನ್ಯರಲ್ಲ, ಅವರು ಬರೋಬ್ಬರಿ 9 ವರ್ಷಗಳ ಕಾಲ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಐಟಿ ಮ್ಯಾನೇಜರ್ (IT Manager) ಆಗಿ ಕೆಲಸ ಮಾಡಿದ್ದರು. ಆದರೆ ಕಾರ್ಪೊರೇಟ್ ವಲಯದಲ್ಲಿನ ವಿಪರೀತ ಮಾನಸಿಕ ಒತ್ತಡ ಹಾಗೂ ಜಂಜಾಟಗಳಿಂದ ಬೇಸತ್ತು ಆ ಕೆಲಸವನ್ನು ಶಾಶ್ವತವಾಗಿ ತೊರೆದಿದ್ದಾರೆ. ಇದಾದ ಬಳಿಕ ಸಮಾಜದ ನಿರೀಕ್ಷೆಗಳನ್ನು ಬದಿಗಿಟ್ಟ ಅವರು, ಪುರುಷ ಪ್ರಧಾನ ಕ್ಷೇತ್ರವಾದ ಆಟೋ ಚಾಲನೆಯನ್ನು ತಮ್ಮ ನೆಚ್ಚಿನ ವೃತ್ತಿಯನ್ನಾಗಿ ಆರಿಸಿಕೊಂಡರು.
ಸದ್ಯ ಸ್ವಂತ ಆಟೋ ಓಡಿಸುತ್ತಾ ತಿಂಗಳಿಗೆ ಸುಮಾರು 60,000 ರೂಪಾಯಿ ಗಳಿಸುತ್ತಿರುವ ಅವರು, ಹಣಕ್ಕಿಂತ ಮನಸ್ಸಿನ ಶಾಂತಿ ಮತ್ತು ಸಂತೋಷವೇ ತಮಗೆ ಮುಖ್ಯ ಎಂದು ನಗುತ್ತಲೇ ಹೇಳುತ್ತಾರೆ. ಹಿಂದಿನ ಐಷಾರಾಮಿ ಬದುಕಿಗಿಂತಲೂ ಈಗಿನ ಈ ಸರಳ ಬದುಕಿನ ಬಗ್ಗೆ ತಮಗೆ ಸಂಪೂರ್ಣ ತೃಪ್ತಿ ಇದೆ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.
ಮಹಿಳೆಯ ಜೊತೆಗಿನ ಈ ಆಪ್ತ ಸಂಭಾಷಣೆಯನ್ನು ವೈದ್ಯರು ವಿಡಿಯೋ ಮಾಡಿದ್ದು, ಇದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡ ಬಳಿಕ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹಾಗೂ ಸಾಮಾಜಿಕ ಜಾಲತಾಣಗಳ ಬಳಕೆದಾರರು ಮಹಿಳೆಯ ಈ ದಿಟ್ಟ ನಿರ್ಧಾರವನ್ನು ಮುಕ್ತಕಂಠದಿಂದ ಶ್ಲಾಘಿಸುತ್ತಿದ್ದಾರೆ.
ಕೇವಲ ಪದವಿ ಹಾಗೂ ಉನ್ನತ ಹುದ್ದೆಗಳ ಬೆನ್ನತ್ತಿ ಓಡುವ ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ, ಬೇರೆಯವರ ಟೀಕೆಗಳಿಗೆ ತಲೆಕೆಡಿಸಿಕೊಳ್ಳದೆ ತಮಗೆ ಇಷ್ಟಬಂದಂತೆ ನೆಮ್ಮದಿಯ ಜೀವನ ನಡೆಸುತ್ತಿರುವ ಈ ಮಹಿಳೆ ನಿಜಕ್ಕೂ ಸಾವಿರಾರು ಜನರಿಗೆ ಸ್ಫೂರ್ತಿಯಾಗಿದ್ದಾರೆ.
