S Shorts

ಅಜ್ಜಯ್ಯನ ಎಚ್ಚರಿಕೆ: ವಿಧಾನಸೌಧದಿಂದ ಲೋಕಭವನಕ್ಕೆ ಶಿಫ್ಟ್ ಆಯ್ತು ಡಿಕೆಶಿ ಪ್ರಮಾಣ ವಚನ ಸಮಾರಂಭ; ಸಿಎಂ ಜೊತೆ 14 ಶಾಸಕರು ಸಚಿವರಾಗಿ ಪ್ರಮಾಣವಚನ?

ಅಜ್ಜಯ್ಯನ ಎಚ್ಚರಿಕೆ: ವಿಧಾನಸೌಧದಿಂದ ಲೋಕಭವನಕ್ಕೆ ಶಿಫ್ಟ್ ಆಯ್ತು ಡಿಕೆಶಿ ಪ್ರಮಾಣ ವಚನ ಸಮಾರಂಭ; ಸಿಎಂ ಜೊತೆ 14 ಶಾಸಕರು ಸಚಿವರಾಗಿ ಪ್ರಮಾಣವಚನ?
Author: Sagaradventure
Posted By: Sagaradventure
Updated: May 30, 2026 | 4:00 PM

ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರ ಪದಗ್ರಹಣ ಸಮಾರಂಭಕ್ಕೆ ಮುಹೂರ್ತ ನಿಗದಿಯಾಗಿದೆ. ಈ ಹಿಂದೆ ವಿಧಾನಸೌಧದ ಭವ್ಯ ಮೆಟ್ಟಿಲುಗಳ ಮೇಲೆ ಅದ್ಧೂರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿತ್ತು. ಆದರೆ, ಅಜ್ಜಯ್ಯನ ಭೇಟಿ ಹಾಗೂ ಅವರ ಎಚ್ಚರಿಕೆಯ ಮಾತುಗಳ ಬಳಿಕ ಡಿ.ಕೆ. ಶಿವಕುಮಾರ್ ಅವರು ತಮ್ಮ ನಿರ್ಧಾರವನ್ನು ಬದಲಿಸಿದ್ದಾರೆ. ಅಜ್ಜಯ್ಯನವರ ಸೂಚನೆಯಂತೆ ಈಗ ಕಾರ್ಯಕ್ರಮವನ್ನು ಲೋಕಭವನದ ಗ್ಲಾಸ್ ಹೌಸ್‌ಗೆ ಸ್ಥಳಾಂತರಿಸಲಾಗಿದ್ದು, ಬುಧವಾರದಂದು ಸರಳವಾಗಿ ಪ್ರಮಾಣ ವಚನ ಸ್ವೀಕರಿಸಲು ತೀರ್ಮಾನಿಸಲಾಗಿದೆ.

ದೊಡ್ಡ ಮಟ್ಟದ ಅದ್ಧೂರಿ ಸಂಭ್ರಮಾಚರಣೆ ಬೇಡ ಎಂದು ಅಜ್ಜಯ್ಯ ಕಟ್ಟುನಿಟ್ಟಿನ ಎಚ್ಚರಿಕೆ ನೀಡಿದ್ದರು. ಮಳೆ ಹಾಗೂ ಸಮಯ ಸಂದರ್ಭದ ಕುರಿತು ಯೋಚಿಸಿ ತೀರ್ಮಾನ ಕೈಗೊಳ್ಳುವಂತೆ ಅವರು ಕಿವಿಮಾತು ಹೇಳಿದ್ದರು. ಮಳೆಗಾದರೂ ಪರ್ಯಾಯ ವ್ಯವಸ್ಥೆ ಮಾಡಬಹುದು, ಆದರೆ ಸಮಯ ಮತ್ತು ಸಂದರ್ಭದ ನಿರ್ಧಾರ ನಿಮ್ಮ ಕೈಯಲ್ಲೇ ಇದೆ ಎಂದು ಅಜ್ಜಯ್ಯ ಮಾರ್ಮಿಕವಾಗಿ ಎಚ್ಚರಿಸಿದ್ದರು.

ಇತ್ತ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಜ್ಯೋತಿಷಿ ಬಿ.ಪಿ. ಆರಾಧ್ಯ ಅವರು, ಮುಂದಿನ ಸಿಎಂ ಆಗಿ ಡಿ.ಕೆ. ಶಿವಕುಮಾರ್ ಅವರು ಜೂನ್ 3 ರಂದು ಸಂಜೆ 5.15 ಕ್ಕೆ ಲೋಕಭವನದಲ್ಲಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ. ಜೂನ್ 5 ರಂದು ಎಐಸಿಸಿ ನಾಯಕ ರಾಹುಲ್ ಗಾಂಧಿ ಅವರಿಗೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ಸಾಧ್ಯವಾಗದ ಕಾರಣ, ಜೂನ್ 3 ಕ್ಕೇ ದಿನಾಂಕವನ್ನು ನಿಗದಿಪಡಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಜೂನ್ 3 ರಂದು ನಡೆಯಲಿರುವ ಈ ಪಟ್ಟಾಭಿಷೇಕ ಮಹೋತ್ಸವದಲ್ಲಿ ಡಿ.ಕೆ. ಶಿವಕುಮಾರ್ ಅವರೊಂದಿಗೆ ಸುಮಾರು 14 ಮಂದಿ ಶಾಸಕರು ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ಸಾಧ್ಯತೆಯಿದೆ. ಟಿವಿ 9 ಗೆ ಲಭ್ಯವಾಗಿರುವ ಸಂಭಾವ್ಯ ಸಚಿವರ ಪಟ್ಟಿಯಲ್ಲಿ ಕೆ.ಜೆ. ಜಾರ್ಜ್, ಜಿ. ಪರಮೇಶ್ವರ್, ಪ್ರಿಯಾಂಕ್ ಖರ್ಗೆ, ಲಕ್ಷ್ಮೀ ಹೆಬ್ಬಾಳ್ಕರ್ ಅಥವಾ ಎಂ.ಬಿ. ಪಾಟೀಲ್, ರೂಪಾ ಶಶಿಧರ್, ಡಾ. ಯತೀಂದ್ರ, ಎನ್. ಚಲುವರಾಯಸ್ವಾಮಿ, ಭೈರತಿ ಸುರೇಶ್, ಯು.ಟಿ. ಖಾದರ್, ಕೃಷ್ಣ ಭೈರೇಗೌಡ ಹಾಗೂ ದಿನೇಶ್ ಗುಂಡೂರಾವ್ ಅವರ ಹೆಸರುಗಳು ಮುಂಚೂಣಿಯಲ್ಲಿವೆ.

ಮತ್ತೊಂದೆಡೆ, ಸಚಿವ ಸ್ಥಾನದ ಜೊತೆಗೆ ನೂತನ ಸರ್ಕಾರದ ಪ್ರತಿಷ್ಠಿತ ಸ್ಪೀಕರ್ ಸ್ಥಾನಕ್ಕೂ ತೀವ್ರ ಪೈಪೋಟಿ ಏರ್ಪಟ್ಟಿದೆ. ಸದ್ಯ ಸ್ಪೀಕರ್ ರೇಸ್‌ನಲ್ಲಿ ಹಿರಿಯ ನಾಯಕರಾದ ಹೆಚ್.ಕೆ. ಪಾಟೀಲ್ ಹಾಗೂ ಹೆಚ್.ಸಿ. ಮಹದೇವಪ್ಪ ಅವರ ಹೆಸರುಗಳು ಪ್ರಮುಖವಾಗಿ ಚರ್ಚೆಯಾಗುತ್ತಿದ್ದು, ರಾಜಕೀಯ ಅನುಭವದ ಆಧಾರದ ಮೇಲೆ ಮಹದೇವಪ್ಪ ಅವರ ಹೆಸರು ಮುಂಚೂಣಿಯಲ್ಲಿದೆ ಎಂದು ತಿಳಿದುಬಂದಿದೆ.