S Shorts

‘ಗರ್ಲ್ ಫ್ರೆಂಡ್ 0% ಇಂಟರೆಸ್ಟ್ ಕೊಡಬಹುದು, ನಮ್ಮ FD 14.4% ಕೊಡುತ್ತೆ’: ಚೆನ್ನೈ Metro ಜಾಹೀರಾತಿನ ವಿರುದ್ಧ ಆಕ್ರೋಶ!

‘ಗರ್ಲ್ ಫ್ರೆಂಡ್ 0% ಇಂಟರೆಸ್ಟ್ ಕೊಡಬಹುದು, ನಮ್ಮ FD 14.4% ಕೊಡುತ್ತೆ’: ಚೆನ್ನೈ Metro ಜಾಹೀರಾತಿನ ವಿರುದ್ಧ ಆಕ್ರೋಶ!
Author: Sagaradventure
Posted By: Sagaradventure
Updated: Sep 7, 2026 | 4:02 PM

ತಮಿಳುನಾಡಿನ ಚೆನ್ನೈ ಮೆಟ್ರೋ ರೈಲಿನೊಳಗೆ ಅಳವಡಿಸಲಾದ ಜಾಹೀರಾತೊಂದು ಇದೀಗ ಭಾರೀ ವಿವಾದಕ್ಕೆ ಕಾರಣವಾಗಿದೆ. ‘THECOS’ (ತಿರುವಳ್ಳುವರ್ ಟ್ರಾನ್ಸ್‌ಪೋರ್ಟ್ ಕಾರ್ಪೊರೇಷನ್ ಎಂಪ್ಲಾಯೀಸ್ ಕೋ-ಆಪರೇಟಿವ್ ಕ್ರೆಡಿಟ್ ಸೊಸೈಟಿ) ಎಂಬ ಸಹಕಾರ ಸಂಘವು ತನ್ನ ಫಿಕ್ಸೆಡ್ ಡೆಪಾಸಿಟ್ (FD) ಯೋಜನೆಗಳನ್ನು ಪ್ರಚಾರ ಮಾಡಲು ಈ ವಿವಾದಾತ್ಮಕ ಜಾಹೀರಾತನ್ನು ಬಳಸಿತ್ತು. 

ಅದರಲ್ಲಿ “ಗರ್ಲ್ ಫ್ರೆಂಡ್ ನಿಮಗೆ 0% ಇಂಟರೆಸ್ಟ್ (ಆಸಕ್ತಿ) ನೀಡಬಹುದು, ಆದರೆ ನಮ್ಮ FD ನಿಮಗೆ 14.40% ಬಡ್ಡಿ ನೀಡುತ್ತದೆ” ಎಂದು ಬರೆಯಲಾಗಿತ್ತು. ಹಣಕಾಸಿನ ಯೋಜನೆಗೆ ಮಹಿಳೆಯರನ್ನು ಹೋಲಿಕೆ ಮಾಡಿ ಬರೆಯಲಾದ ಈ ಜಾಹೀರಾತಿನ ವಿರುದ್ಧ ರಾಜಕೀಯ ನಾಯಕರು ಹಾಗೂ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.

ಡಿಎಂಕೆ (DMK) ಸಂಸದೆ ತಮಿಳಚಿ ತಂಗಪಾಂಡಿಯನ್ ಅವರು ಈ ವಿವಾದಾತ್ಮಕ ಪೋಸ್ಟರ್‌ನ ಸಂದೇಶವನ್ನು ಕಟುವಾಗಿ ಖಂಡಿಸಿದ್ದು, ಇದು ಮಹಿಳೆಯರನ್ನು ಕೀಳಾಗಿ ಕಾಣುವ ಮತ್ತು ಅವರನ್ನು ಕೇವಲ ವಸ್ತುಗಳಂತೆ ಬಿಂಬಿಸುವಂತಹ ಅತ್ಯಂತ ಆಕ್ಷೇಪಾರ್ಹ ಜಾಹೀರಾತು ಎಂದು ವಾಗ್ದಾಳಿ ನಡೆಸಿದ್ದಾರೆ.

ತಮ್ಮ ಎಕ್ಸ್ (X) ಖಾತೆಯಲ್ಲಿ ಪೋಸ್ಟರ್‌ನ ಫೋಟೋ ಹಂಚಿಕೊಂಡಿರುವ ಅವರು, ಸಾರ್ವಜನಿಕ ಸ್ಥಳಗಳಲ್ಲಿ ಪ್ರದರ್ಶಿಸುವ ಜಾಹೀರಾತುಗಳಲ್ಲಿ ಮಹಿಳೆಯರ ಘನತೆಯನ್ನು ಕಾಪಾಡುವುದು ಅತ್ಯಗತ್ಯವಾಗಿದೆ ಎಂದು ಎಚ್ಚರಿಸಿದ್ದಾರೆ. ಆದರೆ ಪ್ರತಿದಿನ ಲಕ್ಷಾಂತರ ಜನರು ಪ್ರಯಾಣಿಸುವ ಚೆನ್ನೈ ಮೆಟ್ರೋದಂತಹ ಸಾರ್ವಜನಿಕ ಸಾರಿಗೆಯಲ್ಲಿ ಇಂತಹ ಅಸಹ್ಯಕರ ಜಾಹೀರಾತು ಪ್ರದರ್ಶಿಸಲು ಮೆಟ್ರೋ ಆಡಳಿತ ಮಂಡಳಿ ಹೇಗೆ ಅನುಮತಿ ನೀಡಿತು ಎಂಬುದು ಆಶ್ಚರ್ಯ ತಂದಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಜಾಹೀರಾತು ಮಹಿಳೆಯರಿಗೆ ಅವಮಾನ ಮಾಡುವಂತಿದ್ದು, ಇದನ್ನು ತಕ್ಷಣವೇ ತೆರವುಗೊಳಿಸಬೇಕು ಮತ್ತು ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸಂಸದೆ ತಮಿಳಚಿ ತಂಗಪಾಂಡಿಯನ್ ಆಗ್ರಹಿಸಿದ್ದಾರೆ. ಮೆಟ್ರೋದಲ್ಲಿ ಪ್ರದರ್ಶನಗೊಳ್ಳುವ ಜಾಹೀರಾತುಗಳು ಸಾರ್ವಜನಿಕರ ಮೇಲೆ ದೊಡ್ಡ ಮಟ್ಟದ ಪ್ರಭಾವ ಬೀರುವುದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದು ಅವರು ಸಲಹೆ ನೀಡಿದ್ದಾರೆ. 

ಡಿಎಂಕೆ ನಾಯಕಿ ಮಾತ್ರವಲ್ಲದೆ, ಎಐಎಡಿಎಂಕೆ (AIADMK) ವಕ್ತಾರ ಕೋವೈ ಸತ್ಯನ್ ಅವರು ಕೂಡ ಈ ಜಾಹೀರಾತಿನ ವಿರುದ್ಧ ಕಿಡಿಕಾರಿದ್ದು, ಜಾಹೀರಾತುದಾರರ ವಿರುದ್ಧ ಕಾನೂನು ಕ್ರಮ ಜರುಗಿಸುವಂತೆ ಒತ್ತಾಯಿಸಿದ್ದಾರೆ. ಸದ್ಯ ಈ ಬಗ್ಗೆ ತಮಿಳುನಾಡು ಸರ್ಕಾರ ಹಾಗೂ ಕೇಂದ್ರ ಸರ್ಕಾರದ ಜಂಟಿ ಉದ್ಯಮವಾಗಿರುವ ಚೆನ್ನೈ ಮೆಟ್ರೋ ರೈಲು ಲಿಮಿಟೆಡ್ (CMRL) ಯಾವುದೇ ಅಧಿಕೃತ ಪ್ರತಿಕ್ರಿಯೆ ನೀಡಿಲ್ಲ.