S Shorts

ಜಾಗತಿಕ ಹೂಡಿಕೆದಾರರ ಸಮಾವೇಶ 2027: ಪೋಲೆಂಡ್‌ಗೆ CM ಡಿಕೆಶಿ ಆಹ್ವಾನ, ರಾಜ್ಯದಲ್ಲಿ 80 ಕೋಟಿ ಹೂಡಿಕೆ!

ಜಾಗತಿಕ ಹೂಡಿಕೆದಾರರ ಸಮಾವೇಶ 2027: ಪೋಲೆಂಡ್‌ಗೆ CM ಡಿಕೆಶಿ ಆಹ್ವಾನ, ರಾಜ್ಯದಲ್ಲಿ 80 ಕೋಟಿ ಹೂಡಿಕೆ!
Author: Sagaradventure
Posted By: Sagaradventure
Updated: Oct 23, 2026 | 12:13 PM

ಬೆಂಗಳೂರು: ರಾಜ್ಯದಲ್ಲಿ ಹೂಡಿಕೆ ಹಾಗೂ ಉದ್ಯೋಗಾವಕಾಶಗಳನ್ನು ಹೆಚ್ಚಿಸುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ಜಾಗತಿಕ ಹೂಡಿಕೆದಾರರ ಸಮಾವೇಶ 2027’ಕ್ಕೆ (Global Investors Meet 2027) ಪಾಲುದಾರ ದೇಶವಾಗಿ ಭಾಗವಹಿಸುವಂತೆ ಪೋಲೆಂಡ್‌ಗೆ ಆಹ್ವಾನ ನೀಡಿದ್ದಾರೆ.

ಶುಕ್ರವಾರ ನಗರದ ತಾಜ್ ವೆಸ್ಟ್ ಎಂಡ್ ಹೋಟೆಲ್‌ನಲ್ಲಿ ಪೋಲೆಂಡ್ ಪ್ರಧಾನಿ ಡೊನಾಲ್ಡ್ ಟಸ್ಕ್ (Donald Tusk) ಅವರ ನೇತೃತ್ವದ ನಿಯೋಗದೊಂದಿಗೆ ನಡೆಸಿದ ಮಹತ್ವದ ಸಭೆಯಲ್ಲಿ ಅವರು ಈ ಆಹ್ವಾನ ನೀಡಿದರು.

ಕೋಲಾರದಲ್ಲಿ ₹80 ಕೋಟಿ ಹೂಡಿಕೆ, 1,000 ಉದ್ಯೋಗ: 

ಪೋಲೆಂಡ್ ಮೂಲದ ಟಿಝಡ್‌ಎಂಒ (TZMO) ಗ್ರೂಪ್ ರಾಜ್ಯದಲ್ಲಿ ಅಂದಾಜು ₹80 ಕೋಟಿ ಹೂಡಿಕೆ ಮಾಡಲು ಮುಂದಾಗಿರುವುದನ್ನು ಸಿಎಂ ಸ್ವಾಗತಿಸಿದರು. ಕೋಲಾರ ಜಿಲ್ಲೆಯ ವೇಮಗಲ್ ಕೈಗಾರಿಕಾ ಪ್ರದೇಶದಲ್ಲಿ (KIADB) 5 ಎಕರೆ ವಿಸ್ತೀರ್ಣದಲ್ಲಿ ಈ ಘಟಕ ತಲೆಎತ್ತಲಿದ್ದು, ಸುಮಾರು 1,000 ಉದ್ಯೋಗಗಳನ್ನು ಸೃಷ್ಟಿಸುವ ಸಾಮರ್ಥ್ಯ ಹೊಂದಿದೆ. ವಿಶೇಷವೆಂದರೆ, ಭಾರತದಲ್ಲೇ ಮೊದಲ ಬಾರಿಗೆ ‘ಸ್ಮಾರ್ಟ್ ಅಡಲ್ಟ್ ಇನ್‌ಕಾಂಟಿನೆನ್ಸ್ ಪ್ಯಾಡ್’ಗಳನ್ನು (smart adult incontinence pads) ಇಲ್ಲಿ ಉತ್ಪಾದಿಸಲಾಗುವುದು.

ತಂತ್ರಜ್ಞಾನ ಮತ್ತು ನಾವೀನ್ಯತೆಗೆ ಒತ್ತು: 

ಕೃತಕ ಬುದ್ಧಿಮತ್ತೆ (AI), ಗೇಮಿಂಗ್ ಮತ್ತು ಡೀಪ್-ಟೆಕ್ ನಾವೀನ್ಯತೆಗಳಲ್ಲಿ ಸಹಯೋಗವನ್ನು ಉತ್ತೇಜಿಸಲು ಉದ್ದೇಶಿತ ‘ಕರ್ನಾಟಕ-ಕಾಟೊವಿಸ್ (Katowice) ಡಿಜಿಟಲ್ ಮತ್ತು ಗೇಮಿಂಗ್ ಕಾರಿಡಾರ್’ ಸ್ಥಾಪಿಸುವ ಒಪ್ಪಂದವನ್ನು ಸಭೆಯಲ್ಲಿ ಪ್ರಸ್ತಾಪಿಸಲಾಯಿತು. ಪೋಲೆಂಡ್‌ನ ಅಸೆಕೊ (Asseco), ಪೋಲ್‌ಫಾರ್ಮಾ (Polpharma), ಓರ್ಲೆನ್ (ORLEN) ಸೇರಿದಂತೆ ಪ್ರಮುಖ ಕಂಪನಿಗಳಿಗೆ ಮಾಹಿತಿ ತಂತ್ರಜ್ಞಾನ, ಸಾಫ್ಟ್‌ವೇರ್, ಔಷಧ ತಯಾರಿಕೆ ಮತ್ತು ಇಂಧನ ವಲಯದಲ್ಲಿ ಹೂಡಿಕೆ ಮಾಡಲು ಮುಖ್ಯಮಂತ್ರಿಗಳು ಕರೆ ನೀಡಿದರು.

ಇನ್ಫೋಸಿಸ್ ಕಂಪನಿಯು ಕಳೆದ 20 ವರ್ಷಗಳಿಂದ ಪೋಲೆಂಡ್‌ನಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವುದನ್ನು ಉಲ್ಲೇಖಿಸಿದ ಡಿ.ಕೆ. ಶಿವಕುಮಾರ್, ಮುಂಬರುವ ದಿನಗಳಲ್ಲಿ ನವೀಕರಿಸಬಹುದಾದ ಇಂಧನ, ತ್ಯಾಜ್ಯ ನಿರ್ವಹಣೆ ಹಾಗೂ ಸುಸ್ಥಿರ ಕೈಗಾರಿಕಾ ಅಭಿವೃದ್ಧಿಯಲ್ಲಿ ಪೋಲೆಂಡ್‌ನ ಪರಿಣತಿಯನ್ನು ಬಳಸಿಕೊಳ್ಳಲು ಕರ್ನಾಟಕ ಸಿದ್ಧವಿದೆ ಎಂದು ಸ್ಪಷ್ಟಪಡಿಸಿದರು.