S Shorts

ಸಂಪುಟ ಪುನಾರಚನೆ ಚರ್ಚೆ ಮುಂದೂಡಿಕೆ: Delhi ಪ್ರವಾಸದಲ್ಲಿ ಕ್ಷೇತ್ರ ಮರುವಿಂಗಡಣೆ ಬಗ್ಗೆ ಮಾತ್ರ CM ಸಿದ್ದರಾಮಯ್ಯ ಚರ್ಚೆ

ಸಂಪುಟ ಪುನಾರಚನೆ ಚರ್ಚೆ ಮುಂದೂಡಿಕೆ: Delhi ಪ್ರವಾಸದಲ್ಲಿ ಕ್ಷೇತ್ರ ಮರುವಿಂಗಡಣೆ ಬಗ್ಗೆ ಮಾತ್ರ CM ಸಿದ್ದರಾಮಯ್ಯ ಚರ್ಚೆ
Author: Sagaradventure
Posted By: Sagaradventure
Updated: Apr 11, 2026 | 11:40 AM

ರಾಜ್ಯ ರಾಜಕಾರಣದಲ್ಲಿ ತೀವ್ರ ಕುತೂಹಲ ಮೂಡಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಶುಕ್ರವಾರದ ದೆಹಲಿ ಭೇಟಿಯಲ್ಲಿ ಸಂಪುಟ ಪುನಾರಚನೆಯಂತಹ ಯಾವುದೇ ಮಹತ್ವದ ವಿಚಾರಗಳು ಚರ್ಚೆಯಾಗಿಲ್ಲ. ಉಪಚುನಾವಣೆ ಮುಕ್ತಾಯವಾದ ಬೆನ್ನಲ್ಲೇ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಪಾಲ್ಗೊಳ್ಳಲು ಅವರು ದೆಹಲಿಗೆ ತೆರಳಿದ್ದರಿಂದ ಹಲವು ರಾಜಕೀಯ ಲೆಕ್ಕಾಚಾರಗಳು ಹುಟ್ಟಿಕೊಂಡಿದ್ದವು. ಆದರೆ, ಈ ಸಭೆಯಲ್ಲಿ ಕೇವಲ ಕ್ಷೇತ್ರಗಳ ಮರುವಿಂಗಡಣೆ ಹಾಗೂ ಮಹಿಳಾ ಮೀಸಲಾತಿ ವಿಚಾರಗಳ ಬಗ್ಗೆ ಮಾತ್ರ ಸುದೀರ್ಘ ಚರ್ಚೆ ನಡೆದಿದ್ದು, ರಾಜ್ಯ ರಾಜಕಾರಣದ ವಿಷಯಗಳು ಪ್ರಸ್ತಾಪವಾಗಿಲ್ಲ ಎಂದು ಮೂಲಗಳು ಸ್ಪಷ್ಟಪಡಿಸಿವೆ.

ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿದಂತೆ ಹಲವು ವರಿಷ್ಠರು ಈ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಉಪಸ್ಥಿತರಿದ್ದರು. ರಾಷ್ಟ್ರೀಯ ಮಟ್ಟದ ಹಲವು ರಾಜಕೀಯ ವಿಚಾರಗಳ ಬಗ್ಗೆ ಅಲ್ಲಿ ಚರ್ಚೆಗಳಾಗಿದ್ದರೂ, ರಾಜ್ಯ ಸರ್ಕಾರಕ್ಕೆ ಮೂರು ವರ್ಷ ತುಂಬಿರುವ ಬಗ್ಗೆಯಾಗಲಿ ಅಥವಾ ಸಚಿವ ಸಂಪುಟ ಪುನಾರಚನೆ ಕುರಿತಾಗಲಿ ಯಾವುದೇ ಪ್ರಸ್ತಾಪಕ್ಕೆ ಅಲ್ಲಿ ಅವಕಾಶವಿರಲಿಲ್ಲ ಎಂದು ತಿಳಿದುಬಂದಿದೆ.

ಏಪ್ರಿಲ್ 17 ಹಾಗೂ 18 ರಂದು ಜಾಗತಿಕ ಹೂಡಿಕೆದಾರರ ಸಮಾವೇಶದ ಹಿನ್ನೆಲೆಯಲ್ಲಿ ಹೂಡಿಕೆದಾರರನ್ನು ಸೆಳೆಯಲು ರಾಜ್ಯ ಸರ್ಕಾರ ದೆಹಲಿಯಲ್ಲಿ ರೋಡ್‌ಶೋ ಆಯೋಜಿಸಿದೆ. ಇದರಲ್ಲಿ ಪಾಲ್ಗೊಳ್ಳಲು ಮುಖ್ಯಮಂತ್ರಿಗಳು ಮುಂದಿನ ವಾರ ಮತ್ತೆ ದೆಹಲಿಗೆ ಭೇಟಿ ನೀಡಲಿದ್ದಾರೆ. ಈ ಪ್ರವಾಸದ ವೇಳೆ ವರಿಷ್ಠರ ಭೇಟಿಗೆ ಸಮಯಾವಕಾಶ ಕೋರುವ ಸಾಧ್ಯತೆಯಿದ್ದು, ಬಿಡುವು ಸಿಕ್ಕರೆ ಸಚಿವ ಸಂಪುಟ ಪುನಾರಚನೆ ಕುರಿತು ಹೈಕಮಾಂಡ್ ಜೊತೆ ವಿಸ್ತೃತ ಚರ್ಚೆ ನಡೆಸುವ ನಿರೀಕ್ಷೆಯಿದೆ ಎಂದು ಪಕ್ಷದ ಉನ್ನತ ಮೂಲಗಳು ತಿಳಿಸಿವೆ.