S Shorts

ಓಪನ್‌ AI ಸೇವೆಗಾಗಿ 25,000 ಟೆಕ್ಕಿಗಳ ಮೀಸಲು: AI ಜಗತ್ತಿನಲ್ಲಿ ಕಾಂಗ್ನಿಜೆಂಟ್ ಭರ್ಜರಿ ಹೆಜ್ಜೆ!

ಓಪನ್‌ AI ಸೇವೆಗಾಗಿ 25,000 ಟೆಕ್ಕಿಗಳ ಮೀಸಲು: AI ಜಗತ್ತಿನಲ್ಲಿ ಕಾಂಗ್ನಿಜೆಂಟ್ ಭರ್ಜರಿ ಹೆಜ್ಜೆ!
Author: Sagaradventure
Posted By: Sagaradventure
Updated: Oct 31, 2026 | 2:00 PM

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಕಾರ್ಪೊರೇಟ್ ಜಗತ್ತಿಗೆ ಮತ್ತಷ್ಟು ಹತ್ತಿರ ತರುವ ನಿಟ್ಟಿನಲ್ಲಿ ಪ್ರಮುಖ ಐಟಿ ದಿಗ್ಗಜ ಸಂಸ್ಥೆ ಕಾಂಗ್ನಿಜೆಂಟ್ ಮಹತ್ವದ ಹೆಜ್ಜೆ ಇಟ್ಟಿದೆ. ಚಾಟ್‌ಜಿಪಿಟಿ ಖ್ಯಾತಿಯ ‘ಓಪನ್ ಎಐ’ (OpenAI) ಜೊತೆ ಕೈಜೋಡಿಸಿರುವ ಕಾಂಗ್ನಿಜೆಂಟ್, ಇದಕ್ಕಾಗಿ ‘ಓಪನ್ ಎಐ ಫ್ರಾಂಟಿಯರ್ ಕ್ಯಾಪಬಿಲಿಟಿ ಗ್ರೂಪ್’ ಎಂಬ ಹೊಸ ವಿಭಾಗವನ್ನು ಹುಟ್ಟುಹಾಕಿದೆ. ಗ್ರಾಹಕರಿಗೆ ಅತ್ಯುತ್ತಮ ಎಐ ಸೇವೆ ನೀಡಲು ಬರೋಬ್ಬರಿ 25,000ಕ್ಕೂ ಹೆಚ್ಚು ನುರಿತ ವೃತ್ತಿಪರರನ್ನು ಈ ವಿಭಾಗದಲ್ಲಿ ಮೀಸಲಿಡಲಾಗಿದೆ.

ಹೊಸ ವಿಭಾಗದ ಅಗತ್ಯವೇನು?: 

ಕಂಪನಿಗಳಿಗೆ ಎಐ ತಂತ್ರಜ್ಞಾನ ಲಭ್ಯವಿದ್ದರೂ, ವ್ಯವಹಾರ ಹಾಗೂ ಗ್ರಾಹಕ ಸೇವೆಗೆ ಅದನ್ನು ಹೇಗೆ ಬಳಸಿಕೊಳ್ಳಬೇಕು ಎಂಬ ನುರಿತ ತಜ್ಞರ ಕೊರತೆ ಕಾಡುತ್ತಿದೆ. ಇದನ್ನು ನೀಗಿಸಲು ಕಾಂಗ್ನಿಜೆಂಟ್ ಈ ಬೃಹತ್ ಪಡೆಯನ್ನು ಸಜ್ಜುಗೊಳಿಸಿದೆ. ಯಾವುದೇ ಹೊಸ ತಂತ್ರಜ್ಞಾನವನ್ನು ಗ್ರಾಹಕರಿಗೆ ನೀಡುವ ಮುನ್ನ ಕಾಂಗ್ನಿಜೆಂಟ್ ತನ್ನಲ್ಲೇ ಪರೀಕ್ಷಿಸಿಕೊಳ್ಳಲಿದ್ದು, ಈಗಾಗಲೇ ಸೇಲ್ಸ್ ಮತ್ತು ಗ್ರಾಹಕ ಸೇವಾ ವಿಭಾಗದಲ್ಲಿ ಇದನ್ನು ಯಶಸ್ವಿಯಾಗಿ ಬಳಸಿಕೊಳ್ಳುತ್ತಿದೆ. ಇದಕ್ಕಾಗಿ 21,000ಕ್ಕೂ ಹೆಚ್ಚು ಉದ್ಯೋಗಿಗಳಿಗೆ ತರಬೇತಿ ನೀಡಿ, 40,000ಕ್ಕೂ ಹೆಚ್ಚು ಓಪನ್ ಎಐ ಬ್ಯಾಡ್ಜ್‌ಗಳನ್ನು ನೀಡಲಾಗಿದೆ.

ಮೂರು ಪ್ರಮುಖ ಕ್ಷೇತ್ರಗಳತ್ತ ಗಮನ: 

ಈ ಹೊಸ 25 ಸಾವಿರ ಉದ್ಯೋಗಿಗಳ ತಂಡವು ಆರಂಭದಲ್ಲಿ ಸಾಫ್ಟ್‌ವೇರ್ ಎಂಜಿನಿಯರಿಂಗ್ (ಹೊಸ ಕೋಡ್ ಬರೆಯಲು, ಟೆಸ್ಟ್ ಮಾಡಲು), ಅಪ್ಲಿಕೇಶನ್ ಆಧುನೀಕರಣ (ಹಳೆಯ ಕೋಡ್‌ಗಳನ್ನು ಕ್ಲೌಡ್ ತಂತ್ರಜ್ಞಾನಕ್ಕೆ ಉನ್ನತೀಕರಿಸುವುದು) ಹಾಗೂ ಗ್ರಾಹಕ ಸೇವೆ (ಸೇಲ್ಸ್ ಮತ್ತು ಸಪೋರ್ಟ್ ಕೆಲಸದ ವೇಗ ಹೆಚ್ಚಿಸುವುದು) ಕ್ಷೇತ್ರಗಳತ್ತ ಗಮನಹರಿಸಲಿದೆ.

ಕೆಲಸದ ವೈಖರಿಯಲ್ಲಿ ಬದಲಾವಣೆ:

“ಓಪನ್ ಎಐ ತರುತ್ತಿರುವ ಬದಲಾವಣೆಗಳನ್ನು ಗ್ರಾಹಕರಿಗೆ ತಲುಪಿಸಲು ನಾವು 25 ಸಾವಿರ ಉದ್ಯೋಗಿಗಳನ್ನು ಸಜ್ಜುಗೊಳಿಸಿದ್ದೇವೆ. ಇದು ನಮ್ಮ ಕೆಲಸದ ವೈಖರಿಯನ್ನು ಬದಲಾಯಿಸುತ್ತಿದೆ” ಎಂದು ಕಾಂಗ್ನಿಜೆಂಟ್ ಸಿಇಒ ರವಿಕುಮಾರ್ ಎಸ್. ತಿಳಿಸಿದ್ದಾರೆ. ಓಪನ್ ಎಐ ಸಿಆರ್‌ಒ ಡಾಲಿ ರಾಜಿಕ್ ಕೂಡ ಈ ನಡೆಯನ್ನು ಶ್ಲಾಘಿಸಿದ್ದಾರೆ. ಕಾಂಗ್ನಿಜೆಂಟ್ ಈಗಾಗಲೇ ಬಯೋ-ಫಾರ್ಮಾ ಕಂಪನಿಯೊಂದಕ್ಕೆ ರೂಪಿಸಿಕೊಟ್ಟಿರುವ ಎಐ ಅಸಿಸ್ಟೆಂಟ್, 50 ಲಕ್ಷಕ್ಕೂ ಹೆಚ್ಚು ಸಂವಹನಗಳನ್ನು ನಿಭಾಯಿಸಿ ಕೆಲಸದ ಸಮಯವನ್ನು ಶೇ. 60ರಷ್ಟು ಕಡಿಮೆ ಮಾಡಿರುವುದು ಇದರ ಮ್ಯಾಜಿಕ್‌ಗೆ ಕನ್ನಡಿಯಾಗಿದೆ.