S Shorts

ಅಯೋಧ್ಯೆಯಲ್ಲಿ ಅಂಧ ಭಕ್ತರಿಗಾಗಿ ‘ಬ್ರೈಲ್ ಮಾರ್ಗ’ ನಿರ್ಮಾಣ: ITC ಮಂಗಳದೀಪ್‌ನಿಂದ ‘ಹರ್ ಭಕ್ತ್ ಶ್ರೀ ರಾಮ್ ತಕ್’ ಡಿಜಿಟಲ್ ಅಭಿಯಾನ

ಅಯೋಧ್ಯೆಯಲ್ಲಿ ಅಂಧ ಭಕ್ತರಿಗಾಗಿ ‘ಬ್ರೈಲ್ ಮಾರ್ಗ’ ನಿರ್ಮಾಣ: ITC ಮಂಗಳದೀಪ್‌ನಿಂದ ‘ಹರ್ ಭಕ್ತ್ ಶ್ರೀ ರಾಮ್ ತಕ್’ ಡಿಜಿಟಲ್ ಅಭಿಯಾನ
Author: Sagaradventure
Posted By: Sagaradventure
Updated: Oct 31, 2026 | 4:53 PM

ಅಯೋಧ್ಯೆ: ಅಯೋಧ್ಯೆ ರಾಮಮಂದಿರದಲ್ಲಿ ದೃಷ್ಟಿಚೇತನ (ಅಂಧ) ಭಕ್ತರು ಯಾವುದೇ ಅಡೆತಡೆಯಿಲ್ಲದೆ, ಸುಲಭವಾಗಿ ಹಾಗೂ ಸ್ವತಂತ್ರವಾಗಿ ದೇವರ ದರ್ಶನ ಪಡೆಯಲು ಅನುವು ಮಾಡಿಕೊಡುವ ನಿಟ್ಟಿನಲ್ಲಿ ಐಟಿಸಿ ಮಂಗಳದೀಪ್ ಮುಟ್ಟಿ ಗುರುತಿಸಬಹುದಾದ  ‘ಬ್ರೈಲ್ ಲಿಪಿ ಆಧಾರಿತ ಮಾರ್ಗ’ವನ್ನು ನಿರ್ಮಿಸುತ್ತಿದೆ. ಇದರ ಅಂಗವಾಗಿ ‘ಹರ್ ಭಕ್ತ್ ಶ್ರೀ ರಾಮ್ ತಕ್’ (ಪ್ರತಿಯೊಬ್ಬ ಭಕ್ತನೂ ಶ್ರೀರಾಮನವರೆಗೆ) ಎಂಬ ವಿನೂತನ ಡಿಜಿಟಲ್ ಅಭಿಯಾನವನ್ನು ಆರಂಭಿಸಿದೆ.

ಪುರಾಣಗಳ ಪ್ರಕಾರ, ಶ್ರೀರಾಮನು ಲಂಕೆಗೆ ತೆರಳಲು ‘ರಾಮಸೇತು’ ನಿರ್ಮಿಸುತ್ತಿದ್ದಾಗ ಅಳಿಲು ಕೂಡ ಭಕ್ತಿಯಿಂದ ತನ್ನದೇ ಆದ ಕೊಡುಗೆ ನೀಡಿತ್ತು. ಈ ಪರಿಕಲ್ಪನೆಯಿಂದ ಪ್ರೇರಣೆ ಪಡೆದು ಈ ಅಭಿಯಾನವನ್ನು ರೂಪಿಸಲಾಗಿದೆ. ದೇಶಾದ್ಯಂತ ಇರುವ ಕೋಟ್ಯಂತರ ಭಕ್ತರು ತಂತ್ರಜ್ಞಾನದ ಮೂಲಕ ಈ ಸೇವಾ ಕಾರ್ಯದಲ್ಲಿ ಕೈಜೋಡಿಸಲು ಮಂಗಳದೀಪ್ ಅವಕಾಶ ಮಾಡಿಕೊಟ್ಟಿದೆ.

ಹೇಗೆ ಪಾಲ್ಗೊಳ್ಳುವುದು?

ಮಂಗಳದೀಪ್ ಸಂಸ್ಥೆಯು ವಿಶೇಷವಾದ ಕಾಂಟೂರ್ ಡಿಟೆಕ್ಷನ್ ತಂತ್ರಜ್ಞಾನ ಬಳಸಿಕೊಂಡು ಡಿಜಿಟಲ್ ವೇದಿಕೆಯೊಂದನ್ನು ಸೃಷ್ಟಿಸಿದೆ. ಭಕ್ತರು https://ayodhyamangaldeepotsav.com/ ವೆಬ್‌ಸೈಟ್‌ಗೆ ಭೇಟಿ ನೀಡಿ, ತಮ್ಮದೇ ಮಾತೃಭಾಷೆಯಲ್ಲಿ ‘ರಾಮ್’ ಎಂದು ಬರೆಯುವ ಮೂಲಕ ಈ ಅಭಿಯಾನದಲ್ಲಿ ಪಾಲ್ಗೊಳ್ಳಬಹುದು.

ನೀವು ಆನ್‌ಲೈನ್‌ನಲ್ಲಿ ಬರೆಯುವ ಪ್ರತಿಯೊಂದು ‘ರಾಮ’ ನಾಮವೂ, ಅಯೋಧ್ಯೆ ರಾಮಮಂದಿರದಲ್ಲಿ ಅಂಧ ಭಕ್ತರಿಗಾಗಿ ‘ಬ್ರೈಲ್ ಲಿಪಿ ಆಧಾರಿತ ಮಾರ್ಗ’ ನಿರ್ಮಿಸಲು ನೀಡುವ ಸಾಂಕೇತಿಕ ಕೊಡುಗೆಯಾಗಲಿದೆ.

ಇದರ ಜೊತೆಗೆ, ಈ ಡಿಜಿಟಲ್ ವೇದಿಕೆಯಲ್ಲಿ ಪಾಲ್ಗೊಳ್ಳುವ ಪ್ರತಿಯೊಬ್ಬ ಭಕ್ತನ ಕೊಡುಗೆಯ ಸಂಕೇತವಾಗಿ ಅಯೋಧ್ಯೆಯ ಸರಯೂ ನದಿ ತೀರದಲ್ಲಿ ದೀಪೋತ್ಸವದಂದು ಒಂದು ದೀಪವನ್ನು ಬೆಳಗಿಸಲಾಗುತ್ತದೆ.

ಈ ಅಭಿಯಾನದ ಕುರಿತು ಮಾತನಾಡಿರುವ ಐಟಿಸಿಯ (ಬೆಂಕಿಪೊಟ್ಟಣ ಮತ್ತು ಅಗರಬತ್ತಿ ವಿಭಾಗದ) ಡಿವಿಷನಲ್ ಸಿಇಒ ರೋಹಿತ್ ಡೋಗ್ರಾ, “ನಂಬಿಕೆ ಮತ್ತು ಭಕ್ತಿ ಎಂಬುದು ಜನರನ್ನು ಒಗ್ಗೂಡಿಸುವ ಅದ್ಭುತ ಶಕ್ತಿ ಹೊಂದಿದೆ. ದೇವರ ದರ್ಶನದ ಅನುಭವ ಎಲ್ಲರಿಗೂ ಸಮಾನವಾಗಿ ಸಿಗಬೇಕು ಹಾಗೂ ಅಂಧ ಭಕ್ತರಿಗೂ ಭಕ್ತಿಯ ಹಾದಿ ಸುಲಭವಾಗಬೇಕು ಎಂಬ ಉದ್ದೇಶದಿಂದ ಈ ‘ಹರ್ ಭಕ್ತ್ ಶ್ರೀ ರಾಮ್ ತಕ್’ ಅಭಿಯಾನವನ್ನು ರೂಪಿಸಿದ್ದೇವೆ. ದೃಷ್ಟಿಚೇತನರಿಗೆ ಜಗತ್ತನ್ನು ಅನುಭವಿಸಲು ನೆರವಾಗುವ ನಮ್ಮ ‘ಸಿಕ್ಸ್ತ್ ಸೆನ್ಸ್’ ಉಪಕ್ರಮದ ಮುಂದುವರಿದ ಭಾಗವೇ ಈ ಅಭಿಯಾನ. ದೇಶವಾಸಿಗಳು ಇದರಲ್ಲಿ ಪಾಲ್ಗೊಂಡು ಅಂಧ ಭಕ್ತರಿಗೆ ದರ್ಶನವನ್ನು ಸುಲಭಗೊಳಿಸುವ ‘ಭಕ್ತಿಯ ಸೇತುವೆ’ ನಿರ್ಮಿಸಲು ಮುಂದಾಗಬೇಕು,” ಎಂದು ಮನವಿ ಮಾಡಿದ್ದಾರೆ.

ಕಳೆದ ವರ್ಷದ ಅಯೋಧ್ಯೆ ದೀಪೋತ್ಸವದಲ್ಲೂ ಐಟಿಸಿ ಮಂಗಳದೀಪ್ ‘ಡಿಜಿಟಲ್ ದೀಪೋತ್ಸವ’ವನ್ನು ಆಯೋಜಿಸಿತ್ತು. ಆಗ ದೇಶಾದ್ಯಂತ ಆನ್‌ಲೈನ್ ಮೂಲಕ 1.3 ಲಕ್ಷಕ್ಕೂ ಹೆಚ್ಚು ಭಕ್ತರು ಡಿಜಿಟಲ್ ದೀಪ ಬೆಳಗಿಸಿದ್ದರು. ಅದಕ್ಕೆ ಪ್ರತಿಯಾಗಿ ಅಯೋಧ್ಯೆಯಲ್ಲಿ ನಿಜವಾದ ದೀಪಗಳನ್ನು ಬೆಳಗಲಾಗಿತ್ತು. ಈ ಬಾರಿಯ ‘ಹರ್ ಭಕ್ತ್ ಶ್ರೀ ರಾಮ್ ತಕ್’ ಅಭಿಯಾನವು ತಂತ್ರಜ್ಞಾನ ಮತ್ತು ಭಕ್ತಿಯನ್ನು ಬೆಸೆಯುವ ಮೂಲಕ ದೃಷ್ಟಿಚೇತನರ ಬಾಳಿನಲ್ಲಿ ಬೆಳಕಾಗುವ ಮಹತ್ವದ ಹೆಜ್ಜೆ ಇಟ್ಟಿದೆ.