ಉತ್ತರ ಗೋವಾದ ರಿಬಂದರ್‌ನಲ್ಲಿರುವ ಕ್ರೈಂ ಬ್ರ್ಯಾಂಚ್ (Crime Branch) ಕಚೇರಿಯಲ್ಲಿ 16 ವರ್ಷದ ಅಪ್ರಾಪ್ತ ಬಾಲಕಿಯ ಮೇಲೆ ಪೊಲೀಸ್ ಇನ್ಸ್‌ಪೆಕ್ಟರ್ ಓರ್ವ ಲೈಂ*ಗಿಕ ದೌರ್ಜನ್ಯ ಎಸಗಿರುವ ಆಘಾತಕಾರಿ ಘಟನೆ ಬೆಳಕಿಗೆ ಬಂದಿದೆ. ಆರೋಪಿ ಇನ್ಸ್‌ಪೆಕ್ಟರ್ ವಿಕಾಸ್ ಡೇಕರ್ ಮತ್ತು ಈ ಕೃತ್ಯಕ್ಕೆ ಸಹಕರಿಸಿದ ರಂಜಿನಿ ಪಾಲ್ಯೇಕರ್ ಎಂಬ ಮಹಿಳೆಯ ವಿರುದ್ಧ ಇದೀಗ ಪೋಕ್ಸೊ (POCSO) ಕಾಯ್ದೆಯಡಿ ಪ್ರಕರಣ ದಾಖಲಿಸಲಾಗಿದೆ.
ಸಹಾಯವಾಣಿಗೆ ಕರೆ ಮಾಡಿದ್ದ ಬಾಲಕಿಗೆ ಕಂಟಕ
ಸಂತ್ರಸ್ತ ಬಾಲಕಿಯು ಆರಂಭದಲ್ಲಿ ತನ್ನ ಸಮಸ್ಯೆಯೊಂದರ ಬಗ್ಗೆ ‘ಮಕ್ಕಳ ಸಹಾಯವಾಣಿ’ಗೆ (Child helpline) ಕರೆ ಮಾಡಿ ದೂರು ನೀಡಿದ್ದಳು. ಈ ದೂರನ್ನು ಇನ್ಸ್‌ಪೆಕ್ಟರ್ ವಿಕಾಸ್ ಡೇಕರ್‌ಗೆ ವರ್ಗಾಯಿಸಲಾಗಿತ್ತು. ಇದೇ ವಿಚಾರವಾಗಿ ಬಾಲಕಿಯನ್ನು ಕಚೇರಿಗೆ ಕರೆಯಿಸಿಕೊಂಡಿದ್ದ ಆರೋಪಿ, ಜುಲೈ 25 ಮತ್ತು ಅಕ್ಟೋಬರ್ 27ರಂದು ತನ್ನ ಕಚೇರಿಯಲ್ಲೇ ಬಾಲಕಿಯ ಮೇಲೆ ಹಲವು ಬಾರಿ ಲೈಂ*ಗಿಕ ದೌರ್ಜನ್ಯ ಎಸಗಿದ್ದಾನೆ. ಕೃತ್ಯಕ್ಕೆ ರಂಜಿನಿ ಎಂಬ ಮಹಿಳೆ ಕುಮ್ಮಕ್ಕು ನೀಡಿದ್ದಾಳೆ ಎಂದು ಬಾಲಕಿ ತಾನು ನೀಡಿದ ದೂರಿನಲ್ಲಿ ವಿವರಿಸಿದ್ದಾಳೆ.
ಬಿಎನ್‌ಎಸ್, ಪೋಕ್ಸೊ ಅಡಿ ಕೇಸ್, ಕಠಿಣ ಕ್ರಮದ ಎಚ್ಚರಿಕೆ
ಈ ಗಂಭೀರ ಆರೋಪದ ಹಿನ್ನೆಲೆಯಲ್ಲಿ ಇಬ್ಬರೂ ಆರೋಪಿಗಳ ವಿರುದ್ಧ ಭಾರತೀಯ ನ್ಯಾಯ ಸಂಹಿತೆಯ (BNS) ಸೆಕ್ಷನ್ 75 (ಲೈಂ*ಗಿಕ ಕಿರುಕುಳ), 127 (ಅಕ್ರಮ ಬಂಧನ) ಹಾಗೂ ಪೋಕ್ಸೊ ಕಾಯ್ದೆಯ ಸೆಕ್ಷನ್ 10 ಮತ್ತು 12ರ ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಗೋವಾ ಡಿಜಿಪಿ ಅಲೋಕ್ ಕುಮಾರ್, “ಇಂತಹ ದುರ್ವರ್ತನೆಗಳನ್ನು ಇಲಾಖೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲ. ಆರೋಪಿ ಅಧಿಕಾರಿಯ ವಿರುದ್ಧ ಕಾನೂನು ಹಾಗೂ ಇಲಾಖಾ ತನಿಖೆ ಎರಡನ್ನೂ ಆರಂಭಿಸಲಾಗಿದೆ” ಎಂದು ಸ್ಪಷ್ಟಪಡಿಸಿದ್ದಾರೆ.
ಘಟನೆಯು ಕ್ರೈಂ ಬ್ರ್ಯಾಂಚ್ ಆವರಣದಲ್ಲಿಯೇ ನಡೆದಿರುವ ಕಾರಣ, ನಿಷ್ಪಕ್ಷಪಾತ ತನಿಖೆಗಾಗಿ ಪ್ರಕರಣವನ್ನು ಓಲ್ಡ್ ಗೋವಾ ಪೊಲೀಸ್ ಠಾಣೆಗೆ ಹಸ್ತಾಂತರಿಸಲಾಗಿದೆ.
