S Shorts

ಪೊಲೀಸರ ಹೊಸ ಪೀಕ್ ಕ್ಯಾಪ್ ಕುರಿತು ಡಿಜಿ ಮಹತ್ವದ ಆದೇಶ!!

ಪೊಲೀಸರ ಹೊಸ ಪೀಕ್ ಕ್ಯಾಪ್ ಕುರಿತು ಡಿಜಿ ಮಹತ್ವದ ಆದೇಶ!!
Author: StateNews Desk
Posted By: StateNews Desk
Updated: Nov 2, 2025 | 4:24 AM

ಬೆಂಗಳೂರು: ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಯ ಪೊಲೀಸ್ ಕಾನ್ಸ್ಟೇಬಲ್ ಮತ್ತು ಹೆಡ್ ಕಾನ್ಸ್ಟೇಬಲ್ ರವರುಗಳಿಗೆ ನೀಡಲಾಗುತ್ತಿರುವ ಖಾಕಿ ಸ್ಲೋಚ್ ಹ್ಯಾಟ್ ಬದಲಿಗೆ ನೇವಿ ಬ್ಲೂ ಪೀಕ್ ಕ್ಯಾಪ್ ಗಳನ್ನು ವಿತರಿಸುವ ಕುರಿತು ಡಿಜಿ- ಐಜಿ ಎಂ.ಎ.ಸಲೀಂ ಆದೇಶಿಸಿದ್ದಾರೆ.

28.10.2025 ರಂದು ನಡೆದ ಪೊಲೀಸ್ ಸಿಬ್ಬಂದಿಗಳ ಪೀಕ್-ಕ್ಯಾಪ್ ಪರಿಚಯ ಮತ್ತು ವಿತರಣೆ ಸಮಾರಂಭದಲ್ಲಿ ಮುಖ್ಯಮಂತ್ರಿಗಳು ನೇವಿ ಬ್ಲೂ ಪೀಕ್ ಕ್ಯಾಪ್ ಗಳನ್ನು ಬಿಡುಗಡೆ ಮಾಡಿದ್ದರು. ಈ ಸಮಾರಂಭದಲ್ಲಿ ಪೊಲೀಸ್ ಪ್ರಧಾನ ಕಛೇರಿ ವತಿಯಿಂದ 600 ಪೀಕ್ ಕ್ಯಾಪ್‌ ಗಳನ್ನು ತಲಾ ಒಂದಕ್ಕೆ ರೂ.226/- (ತೆರಿಗೆ ಸೇರಿ) ಗಳ ವೆಚ್ಚದಲ್ಲಿ ಖರೀದಿಸಿ ವಿತರಿಸಲಾಗಿದ್ದು, ಇದೇ ದರದಲ್ಲಿ ಕ್ಯಾಪ್ ಗಳನ್ನು ಖರೀದಿಸಲು ಡಿಜಿ ಆದೇಶದಲ್ಲಿ ತಿಳಿಸಿದ್ದಾರೆ.

ಎಲ್ಲಾ ಪೊಲೀಸ್ ಆಯುಕ್ತರು, ಜಂಟಿ ಆಯುಕ್ತರು, ಉಪ ಪೊಲೀಸ್ ಆಯುಕ್ತರು, ಜಿಲ್ಲಾ ಪೊಲೀಸ್ ಅಧೀಕ್ಷಕರುಗಳು, ಕಮಾಂಡೆಂಟ್ ರವರು, ಪ್ರಾಂಶುಪಾಲರು ಹಾಗೂ ನಿರ್ದೇಶಕರು, ಕೆಪಿಎ, ಮೈಸೂರು ರವರುಗಳು ತಮ್ಮ ಅಧೀನದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್ ಸಿಬ್ಬಂದಿಗಳಿಗೆ ವಿತರಿಸಬೇಕಾಗಿರುವ ಕ್ಯಾಪ್‌ಗಳನ್ನು ತಮ್ಮ ವತಿಯಿಂದಲೇ ಖರೀದಿಸಲು ಕೆಟಿಪಿಪಿ ಅಧಿನಿಯಮ 1999 ನಿಯಮ 2000 ಅನ್ನು ಅನುಸರಿಸಿ ಖರೀದಿ ಪ್ರಕ್ರಿಯೆ ಕೈಗೊಂಡು, ಸಂಬಂಧಪಟ್ಟ ಸಕ್ಷಮ ಪ್ರಾಧಿಕಾರಿಯಿಂದ ಮಂಜೂರಾತಿ ಪಡೆಯುವಂತೆ ಅವರು ನಿರ್ದೇಶಿಸಿದ್ದಾರೆ.

ಪೀಕ್ ಕ್ಯಾಪ್‌ಗಳ ಖರೀದಿಗೆ ತಗಲುವ ವೆಚ್ಚಕ್ಕೆ ಸಂಬಂಧಿಸಿದಂತೆ “ಲೆಕ್ಕ ಶೀರ್ಷಿಕೆ -221 ಸಾಮಗ್ರಿ ಮತ್ತು ಸರಬರಾಜು” ಅಡಿಯಲ್ಲಿ ಅನುದಾನ ಕೋರಿ ಬೇಡಿಕೆ ಪತ್ರವನ್ನು ಸಲ್ಲಿಸಿದ್ದಲ್ಲಿ, ಅನುದಾನವನ್ನು ಸಂಬಂಧಪಟ್ಟ ಘಟಕಾಧಿಕಾರಿಗಳಿಗೆ ಕೂಡಲೇ ಬಿಡುಗಡೆ ಮಾಡಲು ಪ್ರಧಾನ ಕಛೇರಿಯಿಂದ ಕ್ರಮ ಕೈಗೊಳ್ಳಲಾಗುವುದು. ಕ್ಯಾಪ್ ನ ಮಾದರಿ ಹಾಗೂ ತಾಂತ್ರಿಕ ನಿರ್ದಿಷ್ಠತೆಯನ್ನು ಖರೀದಿ ಪ್ರಕ್ರಿಯೆ ಕೈಗೊಳ್ಳುವ ಘಟಕಾಧಿಕಾರಿಗಳಿಗೆ ಈ ಸುತ್ತೋಲೆಯೊಂದಿಗೆ ಕಳುಹಿಸಿಕೊಡಲಾಗಿದೆ. ಸದರಿ ಮಾದರಿ ಹಾಗೂ ತಾಂತ್ರಿಕ ನಿರ್ದಿಷ್ಠತೆಯಂತೆಯೇ ಕಟ್ಟುನಿಟ್ಟಾಗಿ ಖರೀದಿಸಲು ಕೂಡಲೇ ಅಗತ್ಯ ಕ್ರಮ ಕೈಗೊಂಡು ಪೀಕ್ ಕ್ಯಾಪ್‌ಗಳನ್ನು ಪೊಲೀಸ್ ಸಿಬ್ಬಂದಿಗಳಿಗೆ ವಿತರಿಸಿ, 30 ದಿನಗಳೊಳಗಾಗಿ ಪಾಲನ ವರದಿಯನ್ನು ಈ ಕಛೇರಿಗೆ ಸಲ್ಲಿಸುವಂತೆ ಅವರು ಸೂಚನೆ ನೀಡಿದ್ದಾರೆ.