ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ತೀವ್ರ ಸ್ವರೂಪ ಪಡೆದುಕೊಳ್ಳುತ್ತಿರುವ ‘ಸ್ಟಿಂಗ್ ಆಪರೇಷನ್’ (Sting Operation) ವಿವಾದದ ಬೆನ್ನಲ್ಲೇ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸ್ಫೋಟಕ ಮಾಹಿತಿಯೊಂದನ್ನು ಬಿಚ್ಚಿಟ್ಟಿದ್ದಾರೆ. ಮೆಟಾ ಎಐ (Meta AI) ಸ್ಮಾರ್ಟ್ ಗ್ಲಾಸ್ ಧರಿಸಿದ್ದ ಉದ್ಯಮಿಯೊಬ್ಬರು ಇತ್ತೀಚೆಗೆ ತಮ್ಮನ್ನು ಭೇಟಿಯಾಗಿದ್ದು, ತಮ್ಮ ಮೇಲೆ ಬೇಹುಗಾರಿಕೆ (Spy) ನಡೆಸಲು ಯತ್ನಿಸಿದ್ದರು ಎಂಬ ಅನುಮಾನವನ್ನು ಅವರು ವ್ಯಕ್ತಪಡಿಸಿದ್ದಾರೆ.
ಕನ್ನಡ ಸುದ್ದಿ ವಾಹಿನಿಯೊಂದರ ಸಂದರ್ಶನದಲ್ಲಿ ಈ ವಿಚಾರ ಬಹಿರಂಗಪಡಿಸಿದ ಡಿಕೆಶಿ, “ದೇವರು ನನಗೆ ಜನರ ಮುಖ ಓದುವ ಶಕ್ತಿ ನೀಡಿದ್ದಾನೆ. ಪ್ರತಿದಿನ ಸಾವಿರಾರು ಜನ ನನ್ನನ್ನು ಭೇಟಿಯಾಗುತ್ತಾರೆ. ಅಧಿಕಾರಿಗಳ ಮೂಲಕ ಅಪಾಯಿಂಟ್‌ಮೆಂಟ್ ಪಡೆದು ಬಂದಿದ್ದ ಉದ್ಯಮಿಯೊಬ್ಬರು ಲ್ಯಾಪ್‌ಟಾಪ್ ತೆರೆದು, ತಮ್ಮ ಬ್ಯುಸಿನೆಸ್ ಬಗ್ಗೆ ಮಾತನಾಡುವ ಬದಲು ಚುನಾವಣಾ ತಜ್ಞನಂತೆ ರಾಜಕೀಯ ಹಾಗೂ ಬೂತ್ ಮಟ್ಟದ ಲೆಕ್ಕಾಚಾರಗಳ ಬಗ್ಗೆ ಮಾತನಾಡಲು ಶುರು ಮಾಡಿದರು. ಆತನ ವರ್ತನೆಯಿಂದ ಅನುಮಾನಗೊಂಡು, ಹಿನ್ನೆಲೆ ಬಗ್ಗೆ ತನಿಖೆ ನಡೆಸುವಂತೆ ಸೂಚಿಸಿದ್ದೇನೆ” ಎಂದರು.
ಉದ್ಯಮಿಯ ಹೆಸರು ಹೇಳಲು ನಿರಾಕರಿಸಿದ ಅವರು, “ಆತ ನನ್ನನ್ನು ಹಾಗೂ ಕೇರಳ ಸಿಎಂ ವಿ.ಡಿ. ಸತೀಶನ್ ಅವರನ್ನು ಭೇಟಿಯಾದಾಗ ‘ಮೆಟಾ ಗ್ಲಾಸ್’ ಧರಿಸಿದ್ದ. ಆದರೆ ಆಂಧ್ರ ಸಿಎಂ ಚಂದ್ರಬಾಬು ನಾಯ್ಡು ಹಾಗೂ ಮಹಾರಾಷ್ಟ್ರದಲ್ಲಿ ಕೇಂದ್ರ ಸಚಿವರೊಬ್ಬರನ್ನು ಭೇಟಿಯಾದಾಗ ಆ ಗ್ಲಾಸ್ ಧರಿಸಿರಲಿಲ್ಲ” ಎಂದು ವಿವರಿಸಿದರು.
ತಮ್ಮ ಸಚಿವರ ವಿರುದ್ಧ ಸ್ಟಿಂಗ್ ಆಪರೇಷನ್ ನಡೆಯುವ ಕುರಿತು ತಮಗೆ ಖಚಿತ ಮಾಹಿತಿ ಇತ್ತು ಎಂದಿರುವ ಡಿಕೆಶಿ, “ಕುಟುಂಬದ ಯಜಮಾನನಾಗಿ ಸಂಪುಟ ಸಭೆಯಲ್ಲಿ ಮುನ್ನೆಚ್ಚರಿಕೆಯಿಂದ ಇರುವಂತೆ ಹಾಗೂ ಯಾವುದೇ ಬಲೆಗೆ ಬೀಳದಂತೆ ಸಚಿವರಿಗೆ ತಾಕೀತು ಮಾಡಿದ್ದೇನೆ. ಇದರಲ್ಲಿ ತಪ್ಪೇನಿದೆ? ನನ್ನ ಬಳಿ ಎಲ್ಲಾ ದಾಖಲೆಗಳಿವೆ” ಎಂದು ಸಮರ್ಥಿಸಿಕೊಂಡಿದ್ದಾರೆ.
