S Shorts

ಸಚಿವ ಸತೀಶ್ ಜಾರಕಿಹೊಳಿಗೆ E.D ಶಾಕ್: ಖುದ್ದು ಬೆಂಗಳೂರಿಗೆ ಬಂದ ಇ.ಡಿ ನಿರ್ದೇಶಕ ರಾಹುಲ್ ನವೀನ್

ಸಚಿವ ಸತೀಶ್ ಜಾರಕಿಹೊಳಿಗೆ E.D ಶಾಕ್: ಖುದ್ದು ಬೆಂಗಳೂರಿಗೆ ಬಂದ ಇ.ಡಿ ನಿರ್ದೇಶಕ ರಾಹುಲ್ ನವೀನ್
Author: Sagaradventure
Posted By: Sagaradventure
Updated: Sep 13, 2026 | 10:14 AM

ಬೆಂಗಳೂರು: ಸಚಿವ ಸತೀಶ್ ಜಾರಕಿಹೊಳಿ ಅವರ ಆಪ್ತರು ಹಾಗೂ ಸಂಬಂಧಿಕರ ನಿವಾಸಗಳ ಮೇಲೆ ಇತ್ತೀಚೆಗೆ ನಡೆದ ಜಾರಿ ನಿರ್ದೇಶನಾಲಯ (ED) ದಾಳಿ ಪ್ರಕರಣ ಮತ್ತಷ್ಟು ಕಾವು ಪಡೆದುಕೊಂಡಿದೆ. ಪ್ರಕರಣದ ತನಿಖಾ ಪ್ರಗತಿಯನ್ನು ಖುದ್ದಾಗಿ ಪರಿಶೀಲಿಸಲು ಇ.ಡಿ ನಿರ್ದೇಶಕ ರಾಹುಲ್ ನವೀನ್ ಅವರ ನೇತೃತ್ವದ ಉನ್ನತ ಮಟ್ಟದ ತಾಂತ್ರಿಕ ತಂಡ ದೆಹಲಿಯಿಂದ ಬೆಂಗಳೂರಿಗೆ ಆಗಮಿಸಿದ್ದು, ರಾಜ್ಯ ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

ಸತೀಶ್ ಜಾರಕಿಹೊಳಿ ಪ್ರಕರಣದ ಜೊತೆಗೆ ಕೆಪಿಎಸ್ಸಿ ಹಗರಣ, ಮುಡಾ (MUDA) ನಿವೇಶನ ಹಂಚಿಕೆ ವಿವಾದ ಹಾಗೂ ವಾಲ್ಮೀಕಿ ನಿಗಮದ ಬಹುಕೋಟಿ ಹಗರಣಗಳ ತನಿಖೆಯ ಪ್ರಗತಿಯನ್ನು ಸಹ ರಾಹುಲ್ ನವೀನ್ ಖುದ್ದಾಗಿ ಪರಿಶೀಲಿಸಲಿದ್ದಾರೆ. ಎರಡು ದಿನಗಳ ಕಾಲ ಬೆಂಗಳೂರಿನಲ್ಲೇ ಉಳಿಯಲಿರುವ ಅವರು, ಹಿರಿಯ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿ ಕಡತಗಳನ್ನು ಜಾಲಾಡಲಿದ್ದಾರೆ.

ಸತೀಶ್ ಜಾರಕಿಹೊಳಿಗೆ ಇ.ಡಿ ಸಂಕಷ್ಟ?

ಇತ್ತೀಚೆಗೆ ಸತೀಶ್ ಜಾರಕಿಹೊಳಿ ಅವರ ಸಂಬಂಧಿಕರು ಹಾಗೂ ಆಪ್ತರ ಮೇಲೆ ನಡೆದ ದಾಳಿ ವೇಳೆ ಬರೋಬ್ಬರಿ 3.3 ಕೋಟಿ ರೂ. ನಗದು ಹಾಗೂ 15 ಲಕ್ಷ ರೂ. ಮೌಲ್ಯದ ವಿದೇಶಿ ಕರೆನ್ಸಿ ಪತ್ತೆಯಾಗಿತ್ತು. ಈ ಹಿನ್ನೆಲೆಯಲ್ಲಿ ವಿದೇಶಿ ಹೂಡಿಕೆಗಳು, ಆಫ್ರಿಕಾದ ಗಣಿ ಕಂಪನಿಗಳಲ್ಲಿನ ಪಾಲುದಾರಿಕೆ ಹಾಗೂ ಫೆಮಾ (FEMA) ಕಾಯ್ದೆ ಉಲ್ಲಂಘನೆಯ ಸ್ವರೂಪದ ಬಗ್ಗೆ ತಾಂತ್ರಿಕ ತಂಡ ಹೆಚ್ಚಿನ ಮಾಹಿತಿ ಕಲೆಹಾಕಲಿದೆ. ಇದರ ಜೊತೆಗೆ ಲೋಕೋಪಯೋಗಿ ಇಲಾಖೆಯಲ್ಲಿ (PWD) ಟೆಂಡರ್ ನೀಡಲು ಗುತ್ತಿಗೆದಾರರಿಂದ ಕಿಕ್‌ಬ್ಯಾಕ್ ಪಡೆದಿರುವ ಗಂಭೀರ ಆರೋಪಗಳ ಸಂಬಂಧದ ಕಡತಗಳನ್ನೂ ಇ.ಡಿ ಅಧಿಕಾರಿಗಳು ತೀವ್ರವಾಗಿ ಪರಿಶೀಲಿಸುತ್ತಿದ್ದಾರೆ. ಈ ಮಹತ್ವದ ಬೆಳವಣಿಗೆಗಳ ಬೆನ್ನಲ್ಲೇ, ಹೆಚ್ಚಿನ ವಿಚಾರಣೆಗಾಗಿ ಸಚಿವರಿಗೆ ಯಾವುದೇ ಕ್ಷಣದಲ್ಲಿ ಇ.ಡಿಯಿಂದ ನೋಟಿಸ್ ಜಾರಿಯಾಗುವ ಸಾಧ್ಯತೆಯಿದೆ ಎಂದು ಉನ್ನತ ಮೂಲಗಳು ತಿಳಿಸಿವೆ.

ರಾಹುಲ್ ನವೀನ್ ಭೇಟಿಯ ಹಿಂದಿನ ಕುತೂಹಲ:

ವಾಲ್ಮೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ರಾಜ್ಯ ಸರ್ಕಾರದ ವಿಶೇಷ ತನಿಖಾ ತಂಡ (SIT) ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕ್ಲೀನ್ ಚಿಟ್ ನೀಡಿತ್ತು. ಆದರೆ, ಪ್ರತ್ಯೇಕ ತನಿಖೆ ನಡೆಸಿದ ಕೇಂದ್ರ ತನಿಖಾ ಸಂಸ್ಥೆಗಳಾದ ಸಿಬಿಐ ಹಾಗೂ ಇ.ಡಿ, ನಾಗೇಂದ್ರ ಅವರೇ ಹಗರಣದ ಮುಖ್ಯ ಸೂತ್ರಧಾರಿ ಎಂದು ಉಲ್ಲೇಖಿಸಿ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ (ಚಾರ್ಜ್‌ಶೀಟ್) ಸಲ್ಲಿಸಿವೆ. ಇಂತಹ ಬಿಗುವಿನ ರಾಜಕೀಯ ಸನ್ನಿವೇಶದಲ್ಲಿ ಸ್ವತಃ ಇ.ಡಿ ನಿರ್ದೇಶಕ ರಾಹುಲ್ ನವೀನ್ ಅವರು ರಾಜ್ಯಕ್ಕೆ ಆಗಮಿಸಿ, ಸಾಲು ಸಾಲು ಹಗರಣಗಳ ಪ್ರಗತಿ ಪರಿಶೀಲನೆ ನಡೆಸುತ್ತಿರುವುದು ರಾಜಕೀಯ ವಲಯದಲ್ಲಿ ಸಂಚಲನ ಸೃಷ್ಟಿಸಿದೆ.