ನವದೆಹಲಿ: ವಿಶೇಷ ತೀವ್ರ ಪರಿಷ್ಕರಣೆ (SIR) ಪ್ರಕ್ರಿಯೆಯ ವೇಳೆ ಮತದಾರರ ಪಟ್ಟಿಯಿಂದ ಕೈಬಿಡಲ್ಪಟ್ಟ (ಡಿಲೀಟ್) ಮತದಾರರು ತಮ್ಮ ಹೆಸರನ್ನು ಮರು ಸೇರ್ಪಡೆಗೊಳಿಸಲು ‘ಫಾರ್ಮ್ 6’ (Form 6) ಅನ್ನೇ ಬಳಸಬಹುದು ಎಂದು ಚುನಾವಣಾ ಆಯೋಗ (EC) ಮಂಗಳವಾರ ಸ್ಪಷ್ಟನೆ ನೀಡಿದೆ. ಈ ಫಾರ್ಮ್ನಲ್ಲಿರುವ ‘ನಾನು ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಗೊಳ್ಳುತ್ತಿದ್ದೇನೆ’ ಎಂಬ ಘೋಷಣೆಯು ಈ ಸಂದರ್ಭದಲ್ಲಿ ಸುಳ್ಳು ಘೋಷಣೆಯಾಗುವುದಿಲ್ಲ. ಹಾಗಾಗಿ, ಮರು ಸೇರ್ಪಡೆಗಾಗಿ ಈ ಫಾರ್ಮ್ ಬಳಸುವವರ ವಿರುದ್ಧ ಯಾವುದೇ ಕಾನೂನು ಕ್ರಮ ಕೈಗೊಳ್ಳುವುದಿಲ್ಲ ಎಂದು ಆಯೋಗ ಭರವಸೆ ನೀಡಿದೆ.
ಪ್ರಸ್ತುತ ಇರುವ ‘ಫಾರ್ಮ್ 6’ ಮೊದಲ ಬಾರಿಗೆ ಮತದಾರರ ಪಟ್ಟಿಗೆ ಸೇರ್ಪಡೆಯಾಗುವವರಿಗೆ ಸೀಮಿತವಾಗಿದೆ. ಆದರೆ, ಈಗಾಗಲೇ ಮತದಾರರ ಪಟ್ಟಿಯಲ್ಲಿದ್ದು, ಪರಿಷ್ಕರಣೆ ವೇಳೆ ಹೆಸರು ಡಿಲೀಟ್ ಆದವರೂ ಕೂಡ ಮರು ಸೇರ್ಪಡೆಗೆ ಇದೇ ಫಾರ್ಮ್ ಬಳಸುವಂತೆ ಸೂಚಿಸಿರುವುದು ತೀವ್ರ ವಿವಾದಕ್ಕೆ ಕಾರಣವಾಗಿತ್ತು. ಇದು ಮತದಾರರಿಂದ ಬಲವಂತವಾಗಿ ‘ಸುಳ್ಳು ಘೋಷಣೆ’ ಮಾಡಿಸಿದಂತಾಗುತ್ತದೆ ಎಂದು ಹಲವರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ದೆಹಲಿ ಹೈಕೋರ್ಟ್ ಆದೇಶವೊಂದನ್ನು ಉಲ್ಲೇಖಿಸಿರುವ ಚುನಾವಣಾ ಆಯೋಗ, ಈ ವಾದವು ಸರಿಯಲ್ಲ, ಅರ್ಜಿದಾರರು ‘ಫಾರ್ಮ್ 6’ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದೆ.
ಅಕ್ಟೋಬರ್ 28ರಂದು ದೆಹಲಿಯಲ್ಲಿ ನಡೆದ ವಿಶೇಷ ತೀವ್ರ ಪರಿಷ್ಕರಣೆಗೆ ಸಂಬಂಧಿಸಿದ ಅರ್ಜಿ ವಿಚಾರಣೆ ವೇಳೆ ಸುಪ್ರೀಂಕೋರ್ಟ್ ಕೂಡ ಈ ಬಗ್ಗೆ ಚುನಾವಣಾ ಆಯೋಗವನ್ನು ಪ್ರಶ್ನಿಸಿತ್ತು. ಡಿಲೀಟ್ ಆದ ಮತದಾರರನ್ನು ಮರು ಸೇರ್ಪಡೆ ಮಾಡಲು ‘ಫಾರ್ಮ್ 6’ ಬದಲಾಗಿ ‘ಫಾರ್ಮ್ 8’ ಅನ್ನು ಏಕೆ ಬಳಸಬಾರದು ಎಂದು ಸುಪ್ರೀಂ ಕೋರ್ಟ್ ಕೇಳಿತ್ತು.
ಕಾಂಗ್ರೆಸ್ ಆಕ್ರೋಶ:
ಚುನಾವಣಾ ಆಯೋಗದ ಈ ಸ್ಪಷ್ಟನೆ ಬೆನ್ನಲ್ಲೇ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಇದು “ಮತದಾರರಿಂದ ಸುಳ್ಳು ಘೋಷಣೆ ಮಾಡಿಸುವ ದೋಷಪೂರಿತ ಪ್ರಕ್ರಿಯೆಯನ್ನು ಮುಚ್ಚಿಹಾಕುವ ಮತ್ತೊಂದು ವಂಚಕ ಪದಬಂಧ” ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಟೀಕಿಸಿದ್ದಾರೆ. “ಈ ದೋಷಪೂರಿತ ಪ್ರಕ್ರಿಯೆಯನ್ನು ಸರಿಪಡಿಸಲು ಸಾಧ್ಯವಿಲ್ಲ, ಎಸ್ಐಆರ್ ಪ್ರಕ್ರಿಯೆಯನ್ನು ತಕ್ಷಣವೇ ನಿಲ್ಲಿಸಬೇಕು. ಆಯೋಗವು ಮೊದಲು ಮತದಾರರ ಬಳಿ ಸುಳ್ಳು ಘೋಷಣೆಗೆ ಸಹಿ ಹಾಕಿಸಿಕೊಂಡು, ಈಗ ಕಾನೂನು ಪರಿಣಾಮಗಳಿಂದ ರಕ್ಷಣೆ ನೀಡುತ್ತಿರುವುದು ಈ ಪ್ರಕ್ರಿಯೆಯ ಕಳಪೆ ವಿನ್ಯಾಸವನ್ನು ತೋರಿಸುತ್ತದೆ” ಎಂದು ಅವರು ಕಿಡಿಕಾರಿದ್ದಾರೆ.
ಏತನ್ಮಧ್ಯೆ, ಸುಪ್ರೀಂಕೋರ್ಟ್ನ ಅರ್ಜಿದಾರರಾದ ಅಂಜಲಿ ಭಾರದ್ವಾಜ್ ಮತ್ತು ಅಮೃತಾ ಜೊಹ್ರಿ ಅವರು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರಿಗೆ ಪತ್ರ ಬರೆದಿದ್ದು, ಡಿಲೀಟ್ ಆದ ಮತದಾರರ (ASDD ಪಟ್ಟಿ) ಮರು ಸೇರ್ಪಡೆಗೆ ಎನ್ಯುಮರೇಷನ್ ಫಾರ್ಮ್ ಅಥವಾ ಫಾರ್ಮ್ 8 ಬಳಸಲು ಅನುಮತಿಸಬೇಕೆಂಬ ಸುಪ್ರೀಂಕೋರ್ಟ್ ನಿರ್ದೇಶನವನ್ನು ತಕ್ಷಣವೇ ಜಾರಿಗೆ ತರುವಂತೆ ಒತ್ತಾಯಿಸಿದ್ದಾರೆ.
ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಚುನಾವಣಾಧಿಕಾರಿಗಳಿಗೆ ನೀಡಿರುವ ‘ಸ್ಪಷ್ಟೀಕರಣ’ದಲ್ಲಿ, ಆಯೋಗವು ‘ಫಾರ್ಮ್ 6’ರ ಘೋಷಣೆಯು ಆಗಸ್ಟ್ 1, 2022ರಿಂದ ಜಾರಿಯಲ್ಲಿದೆ ಎಂದು ತಿಳಿಸಿದೆ. ಕರಡು ಪಟ್ಟಿಯಲ್ಲಿ ಹೆಸರಿಲ್ಲದ ಮತದಾರರು, ಅವರು ಈ ಹಿಂದೆ ನೋಂದಣಿಯಾಗಿದ್ದರೂ ಸಹ, ಹೊಸದಾಗಿ ಸೇರ್ಪಡೆಗೊಳ್ಳಲು ನಿಯಮಾನುಸಾರ ‘ಫಾರ್ಮ್ 6’ ಸಲ್ಲಿಸಬಹುದು ಎಂದು ಸ್ಪಷ್ಟಪಡಿಸಿದೆ. ಇದೇ ಕಾರಣಕ್ಕಾಗಿ ಯಾವುದೇ ಮತದಾರರ ವಿರುದ್ಧ ಕ್ರಮ ಕೈಗೊಳ್ಳಬಾರದು, ಆದರೆ ಅವರು ಬೇರೆ ಯಾವುದೇ ಲೋಕಸಭಾ ಅಥವಾ ವಿಧಾನಸಭಾ ಕ್ಷೇತ್ರದಲ್ಲಿ ನೋಂದಣಿಯಾಗಿರಬಾರದು ಎಂದು ಆಯೋಗ ಷರತ್ತು ವಿಧಿಸಿದೆ.
