S Shorts

ಜಾಗತಿಕ ಇಂಧನ ಬಿಕ್ಕಟ್ಟಿಗೆ ಮುಕ್ತಿ: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ?

ಜಾಗತಿಕ ಇಂಧನ ಬಿಕ್ಕಟ್ಟಿಗೆ ಮುಕ್ತಿ: ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಕೆ?
Author: Meghana Gowda
Posted By: Meghana Gowda
Updated: Jun 15, 2026 | 4:24 PM

ವಾಷಿಂಗ್ಟನ್: ಸುದೀರ್ಘ ದಿನಗಳಿಂದ ಇಡೀ ಜಗತ್ತನ್ನೇ ಆತಂಕಕ್ಕೆ ತಳ್ಳಿದ್ದ ಅಮೆರಿಕ ಮತ್ತು ಇರಾನ್ (US-Iran Conflict) ನಡುವಿನ ಭೀಕರ ಸಂಘರ್ಷಕ್ಕೆ ಕೊನೆಗೂ ತೆರೆ ಬಿದ್ದಿದೆ. ಉಭಯ ದೇಶಗಳು ಅಧಿಕೃತವಾಗಿ ಶಾಂತಿ ಒಪ್ಪಂದ ಘೋಷಿಸಿದ ಬೆನ್ನಲ್ಲೇ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಗಳು ಭಾರಿ ಪ್ರಮಾಣದಲ್ಲಿ ಇಳಿಕೆಯಾಗಿವೆ.

ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ WTI ಕಚ್ಚಾ ತೈಲದ ಬೆಲೆ ಇಂದು ಪ್ರತಿ ಬ್ಯಾರೆಲ್‌ಗೆ ಸುಮಾರು 80 ಡಾಲರ್‌ಗೆ ಕುಸಿದರೆ, ಬ್ರೆಂಟ್ ಕಚ್ಚಾ ತೈಲವು ಶೇಕಡಾ 4 ರಷ್ಟು ಇಳಿಕೆ ಕಂಡು ಪ್ರತಿ ಬ್ಯಾರೆಲ್‌ಗೆ 83.82 ಡಾಲರ್‌ಗೆ ತಲುಪಿದೆ. ಜಾಗತಿಕ ತೈಲ ಸಾಗಣೆಯ ಪ್ರಮುಖ ಮಾರ್ಗವಾದ ಹಾರ್ಮುಜ್ ಜಲಸಂಧಿಯನ್ನು (Strait of Hormuz) ಮರುಬಳಕೆಗೆ ಮುಕ್ತಗೊಳಿಸಲು ಉಭಯ ದೇಶಗಳು ಸಮ್ಮತಿಸಿರುವುದು ಈ ದರ ಕುಸಿತಕ್ಕೆ ಪ್ರಮುಖ ಕಾರಣವಾಗಿದೆ. ಇದು ಜಾಗತಿಕ ಇಂಧನ ಪೂರೈಕೆಯಲ್ಲಿದ್ದ ಅಡಚಣೆಗಳ ಕಳವಳವನ್ನು ನಿವಾರಿಸಿದ್ದು, ವಿಶ್ವಾದ್ಯಂತ ಇಂಧನ ಬೆಲೆಗಳು ಶೀಘ್ರದಲ್ಲೇ ಯಥಾಸ್ಥಿತಿಗೆ ಮರಳುವ ಭರವಸೆ ಮೂಡಿಸಿದೆ.

ಭಾರತದಲ್ಲಿ ಪೆಟ್ರೋಲ್, ಡೀಸೆಲ್ ದರ ಇಳಿಯುತ್ತಾ? ಮಧ್ಯಪ್ರಾಚ್ಯದಲ್ಲಿ ನಡೆದಿದ್ದ ಯುದ್ಧದ ಕಾರಣದಿಂದಾಗಿ ಇತ್ತೀಚಿನ ತಿಂಗಳುಗಳಲ್ಲಿ ಭಾರತದ ಪ್ರಮುಖ ತೈಲ ಮಾರುಕಟ್ಟೆ ಕಂಪನಿಗಳು (OMCs) ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿ (LPG) ಬೆಲೆಗಳನ್ನು ಗಣನೀಯವಾಗಿ ಹೆಚ್ಚಿಸಿದ್ದವು. ಭಾರತವು ತನ್ನ ಕಚ್ಚಾ ತೈಲ ಮತ್ತು ಎಲ್‌ಪಿಜಿ ಆಮದಿಗಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳನ್ನು ಹಾಗೂ ಹಾರ್ಮುಜ್ ಜಲಸಂಧಿಯನ್ನೇ ಹೆಚ್ಚಾಗಿ ಅವಲಂಬಿಸಿದೆ. ಯುದ್ಧದಿಂದಾಗಿ ಈ ಮಾರ್ಗದಲ್ಲಿ ತೈಲ ಸಾಗಣೆ ದುಬಾರಿಯಾಗಿ ಭಾರತದ ಆಮದು ವೆಚ್ಚ ಹೆಚ್ಚಾಗಿತ್ತು. ಈಗ ಶಾಂತಿ ಒಪ್ಪಂದದ ಪರಿಣಾಮವಾಗಿ ಪೂರೈಕೆ ವ್ಯವಸ್ಥೆ ಸುಧಾರಿಸಲಿದ್ದು, ಭಾರತದ ಆಮದು ವೆಚ್ಚ ಭಾರಿ ಪ್ರಮಾಣದಲ್ಲಿ ತಗ್ಗಲಿದೆ. ಹೀಗಾಗಿ ಮುಂಬರುವ ದಿನಗಳಲ್ಲಿ ಭಾರತದಲ್ಲೂ ಪೆಟ್ರೋಲ್ ಮತ್ತು ಡೀಸೆಲ್ ದರಗಳು ಅಗ್ಗವಾಗುವ ಸಾಧ್ಯತೆ ದಟ್ಟವಾಗಿದೆ.