S Shorts

ಸ್ವಚ್ಛ ನಗರಿಗಾಗಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ CM ಡಿ.ಕೆ. ಶಿವಕುಮಾರ್ ಚಾಲನೆ; 22,372 ಟನ್ ತ್ಯಾಜ್ಯ ತೆರವಿಗೆ ನಿರ್ಧಾರ

ಸ್ವಚ್ಛ ನಗರಿಗಾಗಿ ‘ತ್ಯಾಜ್ಯದಿಂದ ಸ್ವಾತಂತ್ರ್ಯ’ ಅಭಿಯಾನಕ್ಕೆ CM ಡಿ.ಕೆ. ಶಿವಕುಮಾರ್ ಚಾಲನೆ; 22,372 ಟನ್ ತ್ಯಾಜ್ಯ ತೆರವಿಗೆ ನಿರ್ಧಾರ
Author: Sagaradventure
Posted By: Sagaradventure
Updated: Aug 1, 2026 | 11:22 AM

ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರನ್ನು ತ್ಯಾಜ್ಯ ಮುಕ್ತ ಹಾಗೂ ಸುಂದರ ನಗರವನ್ನಾಗಿ ರೂಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದ್ದು, ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ‘ತ್ಯಾಜ್ಯದಿಂದ ಸ್ವಾತಂತ್ರ್ಯ’ (Freedom from Waste) ಅಭಿಯಾನಕ್ಕೆ ಅಧಿಕೃತವಾಗಿ ಚಾಲನೆ ನೀಡಿದರು. 

ಹೆಬ್ಬಾಳ ಮೇಲ್ಸೇತುವೆ ಸಮೀಪದ ನಾಡಪ್ರಭು ಕೆಂಪೇಗೌಡರ ಪ್ರತಿಮೆ ಬಳಿ ಜರುಗಿದ ಕಾರ್ಯಕ್ರಮದಲ್ಲಿ ಜೆಸಿಬಿ ವಾಹನಕ್ಕೆ (Let’s Just Clean Bengaluru ಬ್ಯಾನರ್‌ನೊಂದಿಗೆ) ಹಸಿರು ನಿಶಾನೆ ತೋರುವ ಮೂಲಕ ಈ ಬೃಹತ್ ಸ್ವಚ್ಛತಾ ಕಾರ್ಯಕ್ಕೆ ನಾಂದಿ ಹಾಡಲಾಯಿತು.

ಈ ಮಹತ್ವಾಕಾಂಕ್ಷಿ ಅಭಿಯಾನದ ಅಡಿಯಲ್ಲಿ ನಗರದಾದ್ಯಂತ ಎಲ್ಲೆಂದರಲ್ಲಿ ಬಿದ್ದಿರುವ ಕಟ್ಟಡ ನಿರ್ಮಾಣ ತ್ಯಾಜ್ಯ (Debris), ಘನ ತ್ಯಾಜ್ಯ, ಹಳೆಯ ವಿದ್ಯುತ್ ಕಂಬಗಳು, ಪೈಪ್‌ಗಳು, ಮಣ್ಣಿನ ಗುಡ್ಡೆಗಳು, ಬೆಳೆದು ನಿಂತ ಕಳೆಗಿಡಗಳು ಹಾಗೂ ಮರದ ಕೊಂಬೆಗಳು ಸೇರಿದಂತೆ ಬರೋಬ್ಬರಿ 22,372 ಟನ್‌ಗಳಷ್ಟು ತ್ಯಾಜ್ಯವನ್ನು ತೆರವುಗೊಳಿಸುವ ಬೃಹತ್ ಗುರಿಯನ್ನು ಹೊಂದಲಾಗಿದೆ. ಕಾರ್ಯಕ್ರಮದಲ್ಲಿ ಮೂಲಸೌಕರ್ಯಗಳಿಗೆ ಬಣ್ಣ ಬಳಿಯುವ ಹಾಗೂ ತ್ಯಾಜ್ಯವನ್ನು ವಿಲೇವಾರಿ ಮಾಡುವ ಸಾಂಕೇತಿಕ ಕ್ರಿಯೆಗಳ ಮೂಲಕ ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ಪ್ರಯತ್ನ ಮಾಡಲಾಯಿತು.

ನಗರದ ಸ್ವಚ್ಛತೆ, ಸೌಂದರ್ಯ ಹಾಗೂ ಸಾರ್ವಜನಿಕ ಆರೋಗ್ಯಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿರುವ ಸರ್ಕಾರ, ಬೆಂಗಳೂರನ್ನು ಮಾದರಿ ಮಹಾನಗರವನ್ನಾಗಿ ರೂಪಿಸಲು ಬದ್ಧವಾಗಿದೆ ಎಂದು ಸಿಎಂ ತಿಳಿಸಿದರು. 

ಕಾರ್ಯಕ್ರಮದಲ್ಲಿ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಸಚಿವ ಕೃಷ್ಣ ಬೈರೇಗೌಡ, ಇಂಧನ ಸಚಿವ ಕೆ.ಜೆ. ಜಾರ್ಜ್‌, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ಎಸ್‌.ಆರ್. ವಿಶ್ವನಾಥ್‌, ಎ.ಸಿ. ಶ್ರೀನಿವಾಸ್‌, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಮುಖ್ಯ ಆಯುಕ್ತ ಎಂ. ಮಹೇಶ್ವರ್‌ ರಾವ್‌ ಹಾಗೂ ಬೆಂಗಳೂರು ನಗರ ಪೊಲೀಸ್‌ ಕಮಿಷನರ್‌ ಸೀಮಂತ್‌ ಕುಮಾರ್‌ ಸಿಂಗ್‌ ಸೇರಿದಂತೆ ಹಲವು ಗಣ್ಯರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.