ನಗರದ ‘ಬ್ರಿಟಿಷ್ ಲೈಫ್‌ಸೈನ್ಸಸ್ ಪ್ರೈವೇಟ್ ಲಿಮಿಟೆಡ್’ ಸಂಸ್ಥೆಯ ಮೇಲೆ ಭಾರತೀಯ ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಪ್ರಾಧಿಕಾರ (FSSAI) ಹಠಾತ್ ದಾಳಿ ನಡೆಸಿದ್ದು, ನಿಯಮಗಳನ್ನು ಉಲ್ಲಂಘಿಸಿ ತಯಾರಿಸಲಾಗಿದ್ದ ಬೃಹತ್ ಪ್ರಮಾಣದ ಶಿಶು ಆಹಾರ ಉತ್ಪನ್ನಗಳನ್ನು ಜಪ್ತಿ ಮಾಡಿದೆ.
ತಪಾಸಣೆ ವೇಳೆ ಮಿಸ್‌ಬ್ರ್ಯಾಂಡೆಡ್ ಹಾಗೂ ಲೇಬಲಿಂಗ್ ನಿಯಮಗಳನ್ನು ಸಂಪೂರ್ಣವಾಗಿ ಗಾಳಿಗೆ ತೂರಿದ ಕಳಪೆ ಫಾರ್ಮುಲಾ ಪೌಡರ್‌ಗಳು ಪತ್ತೆಯಾಗಿದ್ದು, ಅಧಿಕಾರಿಗಳು ‘ಆಹಾರ ಸುರಕ್ಷತೆ ಮತ್ತು ಮಾನದಂಡಗಳ ಕಾಯ್ದೆ 2006’ ರಡಿ ಕಠಿಣ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಪ್ರಾಧಿಕಾರದ ಅಧಿಕಾರಿಗಳ ಪರಿಶೀಲನೆ ವೇಳೆ ಅಪಾರ ಪ್ರಮಾಣದ ತಪ್ಪು ಮುದ್ರೆ ಹಾಕಿದ ಹಾಗೂ ಅವಧಿ ಮುಗಿದಿದ್ದ ಉತ್ಪನ್ನಗಳು ಪತ್ತೆಯಾಗಿವೆ. ನವಜಾತ ಶಿಶುಗಳು ಹಾಗೂ ಸಣ್ಣ ಮಕ್ಕಳ ಆರೋಗ್ಯದ ಮೇಲೆ ಇದು ಗಂಭೀರ ದುಷ್ಪರಿಣಾಮ ಬೀರುವ ಸಾಧ್ಯತೆ ಇರುವುದರಿಂದ, ನ್ಯಾಯಾಲಯದ ನಿರ್ದೇಶನದಂತೆ ಬರೋಬ್ಬರಿ 3.7 ಮೆಟ್ರಿಕ್ ಟನ್ ತೂಕದ ಈ ಕಳಪೆ ಆಹಾರ ಪದಾರ್ಥಗಳನ್ನು ಅಧಿಕಾರಿಗಳು ಮುಟ್ಟುಗೋಲು ಹಾಕಿಕೊಂಡು ಸಂಪೂರ್ಣವಾಗಿ ನಾಶಪಡಿಸಿದ್ದಾರೆ.
ಈ ಅಪಾಯಕಾರಿ ಉತ್ಪನ್ನಗಳು ಯಾವುದೇ ಕಾರಣಕ್ಕೂ ಮರಳಿ ಮಾರುಕಟ್ಟೆಗೆ ಸರಬರಾಜಾಗಬಾರದು ಹಾಗೂ ಮರುಬಳಕೆಯಾಗಬಾರದು ಎಂಬ ಉದ್ದೇಶದಿಂದ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಎಫ್‌ಎಸ್‌ಎಸ್‌ಎಐ ಸ್ಪಷ್ಟಪಡಿಸಿದೆ.
ಈ ಕುರಿತು ಎಚ್ಚರಿಕೆ ನೀಡಿರುವ ಕೆ.ಸಿ. ಜನರಲ್ ಆಸ್ಪತ್ರೆಯ ಮಕ್ಕಳ ತಜ್ಞ ಡಾ. ರಘುನಂದನ್, ಮಗುವಿಗೆ ತಾಯಿಯ ಹಾಲೇ ಪ್ರಥಮ ಆದ್ಯತೆಯಾಗಿದ್ದು, ಸರ್ಕಾರಿ ಆಸ್ಪತ್ರೆಗಳಲ್ಲಿ ಇಂತಹ ಡಬ್ಬಿ ಹಾಲನ್ನು ಯಾವುದೇ ಕಾರಣಕ್ಕೂ ಉತ್ತೇಜಿಸುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
“ತಾಯಿಯ ಹಾಲು ಲಭ್ಯವಿಲ್ಲದ ಅಥವಾ ಮಗು ಅವಧಿಗೂ ಮುನ್ನ ಜನಿಸಿದಂತಹ (ಪ್ರೀ-ಟರ್ಮ್) ನಿರ್ದಿಷ್ಟ ವೈದ್ಯಕೀಯ ಪರಿಸ್ಥಿತಿಯಲ್ಲಿ ಮಾತ್ರ ವೈದ್ಯರ ಸಲಹೆಯಂತೆ ಫಾರ್ಮುಲಾ ಫೀಡ್ ಬಳಸಬೇಕು. ನಿಯಮ ಉಲ್ಲಂಘಿಸಿದ ಅಥವಾ ಕಳಪೆ ಗುಣಮಟ್ಟದ ಆಹಾರ ನೀಡಿದರೆ ಶಿಶುಗಳಿಗೆ ವಾಂತಿ, ಭೇದಿ, ಸೋಂಕು ಹಾಗೂ ಬೆಳವಣಿಗೆಯಲ್ಲಿ ತೀವ್ರ ಸ್ವರೂಪದ ತೊಂದರೆಗಳು ಕಾಣಿಸಿಕೊಳ್ಳುತ್ತವೆ. ಹೀಗಾಗಿ ಮಾರುಕಟ್ಟೆಯಲ್ಲಿ ಸಿಗುವ ಇಂತಹ ಡಬ್ಬಿ ಹಾಲಿನ ವಿಚಾರದಲ್ಲಿ ಪೋಷಕರು ಅತ್ಯಂತ ಜಾಗರೂಕರಾಗಿರಬೇಕು.”
-
ಡಾ. ರಶ್ಮಿ, ನವಜಾತ ಶಿಶು ತಜ್ಞೆ.
