ಬೆಂಗಳೂರು: ನಗರದ ಹೆಚ್.ಎ.ಎಲ್ (HAL) ಪೊಲೀಸ್ ಠಾಣಾ ವ್ಯಾಪ್ತಿಯ ಚಿನ್ನಪ್ಪನಹಳ್ಳಿಯಲ್ಲಿ ‘ಗುರಾಯಿಸುತ್ತೀಯಾ’ ಎಂಬ ಅತ್ಯಂತ ಕ್ಷುಲ್ಲಕ ವಿಚಾರಕ್ಕೆ ಶುರುವಾದ ಜಗಳ ಯುವಕನೊಬ್ಬನ ಕೊ*ಲೆಯಲ್ಲಿ ಅಂತ್ಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ನೇಪಾಳ ಮೂಲದ ಗಜೇಂದ್ರ (22) ಕೊ*ಲೆಯಾದ ದುರ್ದೈವಿ.
ಮೃ*ತ ಗಜೇಂದ್ರ ಹಾಗೂ ಆರೋಪಿಗಳೆಲ್ಲರೂ ಮೂಲತಃ ನೇಪಾಳದವರಾಗಿದ್ದು, ಚಿನ್ನಪ್ಪನಹಳ್ಳಿಯಲ್ಲಿ ಅಕ್ಕಪಕ್ಕದ ಮನೆಗಳಲ್ಲಿ ವಾಸವಾಗಿದ್ದರು. ಜುಲೈ 13ರಂದು ‘ನನ್ನನ್ನು ಯಾಕೆ ಗುರಾಯಿಸುತ್ತೀಯಾ’ ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಇವರ ನಡುವೆ ಮಾತಿನ ಚಕಮಕಿ ನಡೆದಿದೆ. ಜಗಳ ವಿಕೋಪಕ್ಕೆ ತಿರುಗಿ, ಆರೋಪಿಗಳೆಲ್ಲರೂ ಒಟ್ಟಾಗಿ ಸೇರಿ ಗಜೇಂದ್ರನ ಮೇಲೆ ಪಂಚ್ ಹಾಗೂ ಕೈಗಳಿಂದ ಮನಬಂದಂತೆ ಹಲ್ಲೆ ನಡೆಸಿದ್ದಾರೆ.
ಹಲ್ಲೆಯಿಂದ ತೀವ್ರವಾಗಿ ಗಾಯಗೊಂಡಿದ್ದ ಗಜೇಂದ್ರನನ್ನು ತಕ್ಷಣವೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಎರಡು ದಿನಗಳ ಕಾಲ ಸಾ*ವು ಬದುಕಿನ ನಡುವೆ ಹೋರಾಡಿದ ಆತ, ಚಿಕಿತ್ಸೆ ಫಲಕಾರಿಯಾಗದೆೇ ಜುಲೈ 15ರಂದು ಮೃ*ತಪಟ್ಟಿದ್ದಾನೆ.
ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಿಸಿಕೊಂಡಿದ್ದ ಹೆಚ್.ಎ.ಎಲ್ ಪೊಲೀಸರು ಕಾರ್ಯಾಚರಣೆ ನಡೆಸಿ, ಹ*ತ್ಯೆಯಲ್ಲಿ ಭಾಗಿಯಾಗಿದ್ದ ಐವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ನರೇಂದ್ರ, ರಾಮ್ ಚಾಂದ್, ಗೋವಿಂದ ಹಾಗೂ ವಿಮಲಾ ಎಂಬ ಹೆಸರಿನ ಇಬ್ಬರು ಮಹಿಳೆಯರು ಎಂದು ಗುರುತಿಸಲಾಗಿದೆ. ಸದ್ಯ ಎಲ್ಲಾ ಆರೋಪಿಗಳನ್ನು ಬಂಧಿಸಿ ಜೈಲಿಗಟ್ಟಲಾಗಿದ್ದು, ಹೆಚ್.ಎ.ಎಲ್ ಪೊಲೀಸರು ಪ್ರಕರಣದ ಹೆಚ್ಚಿನ ತನಿಖೆಯನ್ನು ಮುಂದುವರೆಸಿದ್ದಾರೆ.
