S Shorts

Facebook ಪರಿಚಯದ ಬಳಿಕ ಖಾಸಗಿ ಫೋಟೊ ಬಳಸಿ ಬ್ಲ್ಯಾಕ್‌ಮೇಲ್: ದಂಪತಿ ವಿರುದ್ಧ FIR

Facebook ಪರಿಚಯದ ಬಳಿಕ ಖಾಸಗಿ ಫೋಟೊ ಬಳಸಿ ಬ್ಲ್ಯಾಕ್‌ಮೇಲ್: ದಂಪತಿ ವಿರುದ್ಧ FIR
Author: Sagaradventure
Posted By: Sagaradventure
Updated: Jul 25, 2026 | 2:26 PM

ಹಾವೇರಿಯ ಬಸವೇಶ್ವರ ನಗರದ ನಿವಾಸಿಗಳಾದ ಸಚಿನ್ ದಾನಪ್ಪನವರ್ ಹಾಗೂ ಆತನ ಪತ್ನಿ ಸುಪ್ರಿಯಾ ಸಚಿನ್ ವಿರುದ್ಧ ಮಹಿಳೆಯೊಬ್ಬರಿಗೆ ಬ್ಲ್ಯಾಕ್‌ಮೇಲ್ ಮಾಡಿದ ಗಂಭೀರ ಆರೋಪ ಕೇಳಿಬಂದಿದೆ. ಪಕ್ಕದ ಏರಿಯಾದವನು ಎಂಬ ಕಾರಣಕ್ಕೆ ಫೇಸ್‌ಬುಕ್ ಮೂಲಕ ಸಂತ್ರಸ್ತ ಮಹಿಳೆಯೊಂದಿಗೆ ಸಚಿನ್ ಪರಿಚಯ ಬೆಳೆಸಿಕೊಂಡಿದ್ದ. ಈ ಸಲುಗೆಯನ್ನೇ ಬಳಸಿಕೊಂಡು ಮಹಿಳೆಯ ಖಾಸಗಿ ಫೋಟೊ ಹಾಗೂ ವಿಡಿಯೊಗಳನ್ನು ಪಡೆದುಕೊಂಡಿದ್ದನು. ಬಳಿಕ ಈ ಫೋಟೊಗಳನ್ನೇ ಅಸ್ತ್ರವಾಗಿಸಿಕೊಂಡು ಲೈಂಗಿಕತೆಗೆ ಸಹಕರಿಸುವಂತೆ ಆಕೆಗೆ ಒತ್ತಾಯಿಸುತ್ತಿದ್ದನು.

ಫೋನ್‌ಪೇ ಮೂಲಕ ಪತಿಗೆ ಫೋಟೊ ರವಾನೆ, ಕೊಲೆ ಬೆದರಿಕೆ 

ತನ್ನ ಬೇಡಿಕೆಗೆ ಒಪ್ಪದಿದ್ದರೆ ಫೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಮಾಡುವುದಾಗಿ ಹಾಗೂ ಆಕೆಯ ಪತಿಗೆ ಕಳುಹಿಸುವುದಾಗಿ ಸಚಿನ್ ಬೆದರಿಕೆ ಹಾಕಿದ್ದನು. ಅದರಂತೆಯೇ ಜುಲೈ 12ರಂದು ಫೋನ್‌ಪೇ ಮೂಲಕ ಸಂತ್ರಸ್ತೆಯ ಪತಿಗೆ ಖಾಸಗಿ ಫೋಟೊಗಳನ್ನು ಕಳುಹಿಸಿದ್ದಾನೆ. ಇದಲ್ಲದೆ, ಸಚಿನ್ ಪತ್ನಿ ಸುಪ್ರಿಯಾ ಕೂಡ ಸಂತ್ರಸ್ತೆಗೆ ಕರೆ ಮಾಡಿ ‘ನಿನ್ನ ಕೊ*ಲೆಗೆ ಸುಪಾರಿ ಕೊಡ್ತೀನಿ’ ಎಂದು ಜೀವಬೆದರಿಕೆ ಹಾಕಿದ್ದಾಳೆ.

ಠಾಣೆ ಮೆಟ್ಟಿಲೇರಿದ ಸಂತ್ರಸ್ತೆ: ಆರೋಪಿ ನ್ಯಾಯಾಂಗ ಬಂಧನಕ್ಕೆ 

ದಂಪತಿಯ ಬ್ಲ್ಯಾಕ್‌ಮೇಲ್ ಹಾಗೂ ಬೆದರಿಕೆಯಿಂದ ಬೇಸತ್ತ ಮಹಿಳೆ ಹಾವೇರಿಯ CEN ಕ್ರೈಂ ಠಾಣೆಗೆ ತೆರಳಿ ದೂರು ನೀಡಿದ್ದಾರೆ. ದೂರಿನ ಆಧಾರದ ಮೇಲೆ ಐಟಿ ಕಾಯ್ದೆ ಹಾಗೂ ಬಿಎನ್ಎಸ್ (BNS) ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು, ಪ್ರಮುಖ ಆರೋಪಿ ಸಚಿನ್‌ನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.