S Shorts

Update: ಹೊನ್ನಾವರ ಬಸ್ ಅಪಘಾತಕ್ಕೆ ಕಾರಣವಾಯ್ತಾ ಓವರ್‌ಲೋಡ್‌?

Update: ಹೊನ್ನಾವರ ಬಸ್ ಅಪಘಾತಕ್ಕೆ ಕಾರಣವಾಯ್ತಾ ಓವರ್‌ಲೋಡ್‌?
Author: Rashmi Yadav
Posted By: Rashmi Yadav
Updated: Nov 1, 2025 | 6:25 PM

ಹೊನ್ನಾವರ (ಉತ್ತರ ಕನ್ನಡ): ಬೆಂಗಳೂರಿನಿಂದ ಭಟ್ಕಳಕ್ಕೆ ತೆರಳುತ್ತಿದ್ದ ಕೆಎಸ್‌ಆರ್‌ಟಿಸಿ ಸಾರಿಗೆ ಬಸ್ ಅಪಘಾತದ ಕುರಿತು ಆಘಾತಕಾರಿ ಮಾಹಿತಿ ಹೊರಬಿದ್ದಿದೆ. ಬಸ್‌ನಲ್ಲಿ ನಿಯಮ ಮೀರಿದ 50ಕ್ಕೂ ಹೆಚ್ಚು ಪ್ರಯಾಣಿಕರು ಇದ್ದದ್ದು ಈ ಭೀಕರ ದುರಂತಕ್ಕೆ ಮೂಲ ಕಾರಣ ಎಂದು ತಿಳಿದುಬಂದಿದೆ.

ಇದನ್ನೂ ಓದಿ: ಹೊನ್ನಾವರ ಬಳಿ ಭೀಕರ ಬಸ್‌ ಅಪಘಾತ; ಕಂದಕಕ್ಕೆ ಉರುಳಿದ ಕೆಎಸ್‌ಆರ್‌ಟಿಸಿ ಬಸ್‌

ಸಾಗರಮಾರ್ಗದಿಂದ ಭಟ್ಕಳಕ್ಕೆ ಬರುವ ದಿನದ ಕೊನೆಯ ಬಸ್‌ ಇದಾಗಿದ್ದು, ವಾರಾಂತ್ಯದ ಕಾರಣವೂ ಬಸ್‌ನಲ್ಲಿ 50ಕ್ಕೂ ಹೆಚ್ಚು ಪ್ರಯಾಣಿಕರಿದ್ದರು ಎನ್ನಲಾಗಿದೆ. ಗೇರುಸೊಪ್ಪ ಸೂಳೆಮೂರ್ಕಿ ಕ್ರಾಸ್ ಬಳಿ ಅತಿ ವೇಗದಲ್ಲಿ ಬಂದ ಬಸ್, ನಿಯಂತ್ರಣ ತಪ್ಪಿ ಮೊದಲು ಎದುರಿನಿಂದ ಬರುತ್ತಿದ್ದ ಇಕೋ (Eco) ವಾಹನಕ್ಕೆ ಭೀಕರವಾಗಿ ಢಿಕ್ಕಿ ಹೊಡೆದಿದೆ. ಡಿಕ್ಕಿಯ ರಭಸಕ್ಕೆ ಬಸ್ ನಂತರ ಕಂದಕಕ್ಕೆ ಉರುಳಿ ಬಿದ್ದಿದೆ. ಅಪಘಾತದಲ್ಲಿ ಇಕೋ ಕಾರಿನಲ್ಲಿ ಪ್ರಯಾಣಿಸುತ್ತಿದ್ದ 7 ಮಂದಿಯ ಪೈಕಿ ಓರ್ವ ವ್ಯಕ್ತಿ ಸ್ಥಳದಲ್ಲೇ ದಾರುಣವಾಗಿ ಸಾವನ್ನಪ್ಪಿದ್ದಾರೆ. ಬಸ್ ಮತ್ತು ಕಾರಿನಲ್ಲಿದ್ದ ಒಟ್ಟು 30 ಮಂದಿಗೂ ಅಧಿಕ ಮಂದಿ ಗಾಯಗೊಂಡಿದ್ದಾರೆ.

ಗಾಯಾಳುಗಳ ಪೈಕಿ 8 ಮಂದಿ ಗಂಭೀರ ಸ್ಥಿತಿಯಲ್ಲಿದ್ದು, ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಮಣಿಪಾಲ ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದ ಗಾಯಾಳುಗಳಿಗೆ ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರೆದಿದೆ. ಬಸ್‌ನಲ್ಲಿ ಓವರ್‌ಲೋಡ್ ಆಗಿದ್ದ ಬಗ್ಗೆ ಮತ್ತು ಚಾಲಕನ ನಿರ್ಲಕ್ಷ್ಯದ ಕುರಿತು ಹೊನ್ನಾವರ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.