S Shorts

ಸ್ವಿಗ್ಗಿ ಸೇರಿದಂತೆ Food Delivery ಆ್ಯಪ್‌ಗಳ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ: ಬೇಕಾಬಿಟ್ಟಿ ದರ ವಸೂಲಿಗೆ ಖಂಡನೆ

ಸ್ವಿಗ್ಗಿ ಸೇರಿದಂತೆ Food Delivery ಆ್ಯಪ್‌ಗಳ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ: ಬೇಕಾಬಿಟ್ಟಿ ದರ ವಸೂಲಿಗೆ ಖಂಡನೆ
Author: Sagaradventure
Posted By: Sagaradventure
Updated: Jul 27, 2026 | 5:43 PM

ಬೆಂಗಳೂರು: ಆನ್‌ಲೈನ್ ಫುಡ್ ಡೆಲಿವರಿ ಆ್ಯಪ್‌ಗಳಾದ ಸ್ವಿಗ್ಗಿ ಸೇರಿದಂತೆ ಕೆಲವು ಡೆಲಿವರಿ ಸಂಸ್ಥೆಗಳ ವಿರುದ್ಧ ರಾಜ್ಯದ ಹೋಟೆಲ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆ್ಯಪ್‌ಗಳು ವಿಧಿಸುತ್ತಿರುವ ಅತಿಯಾದ ಶುಲ್ಕಗಳಿಂದಾಗಿ ಹೋಟೆಲ್ ಉದ್ಯಮಕ್ಕೆ ಭಾರಿ ನಷ್ಟವಾಗುತ್ತಿದ್ದು, ಈ ದರ ವಸೂಲಿಗೆ ಶೀಘ್ರವೇ ಕಡಿವಾಣ ಹಾಕಲು ಚಿಂತನೆ ನಡೆಸಲಾಗಿದೆ.

ಹೋಟೆಲ್ ಮಾಲೀಕರ ಪ್ರಮುಖ ಆರೋಪಗಳು 

ವಿಶೇಷವಾಗಿ ಸ್ವಿಗ್ಗಿ ಆ್ಯಪ್ ವಿರುದ್ಧ ಹೋಟೆಲ್ ಮಾಲೀಕರು ತೀವ್ರ ಅಸಮಾಧಾನ ಹೊರಹಾಕಿದ್ದು, ಬೇಕಾಬಿಟ್ಟಿಯಾಗಿ ವಿವಿಧ ಶುಲ್ಕಗಳನ್ನು ವಿಧಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಪೇಔಟ್ ಕಲೆಕ್ಷನ್ ಚಾರ್ಜ್ (Payout Collection Charge), ಲಾಂಗ್ ಡಿಸ್ಟೇನ್ಸ್ ಫೀಸ್ (Long Distance Fees), ಕ್ಲಿಕ್ಸ್ ಅಡ್ವರ್ಟೈಸ್ ಚಾರ್ಜ್ (Clicks Advertise Charge) ಹಾಗೂ ಪ್ರಮೋಷನ್ ಚಾರ್ಜ್ (Promotion Charge) ಹೆಸರಿನಲ್ಲಿ ಈ ಡೆಲಿವರಿ ಆ್ಯಪ್‌ಗಳು ಅನಗತ್ಯ ಶುಲ್ಕಗಳನ್ನು ವಸೂಲಿ ಮಾಡುತ್ತಿವೆ ಎಂಬುದು ಅವರ ಪ್ರಮುಖ ದೂರು.

1000 ರೂ. ವ್ಯಾಪಾರದಲ್ಲಿ ಕೈಗೆ ಬರುವುದು ಕೇವಲ 400-500 ರೂ. 

ಡೆಲಿವರಿ ಆ್ಯಪ್‌ಗಳ ಈ ಅತಿಯಾದ ಶುಲ್ಕ ಕಡಿತದಿಂದಾಗಿ, ಹೋಟೆಲ್‌ನವರು 1,000 ರೂ. ಮೌಲ್ಯದ ಉತ್ಪನ್ನವನ್ನು ಆನ್‌ಲೈನ್ ಮೂಲಕ ಮಾರಾಟ ಮಾಡಿದರೆ, ಎಲ್ಲ ಕಡಿತಗಳ ಬಳಿಕ ಹೋಟೆಲ್ ಮಾಲೀಕರ ಕೈ ಸೇರುತ್ತಿರುವುದು ಕೇವಲ 400 ರಿಂದ 500 ರೂಪಾಯಿ ಮಾತ್ರ. ಉಳಿದ ಅರ್ಧದಷ್ಟು ಮೊತ್ತ ಸಂಪೂರ್ಣವಾಗಿ ಡೆಲಿವರಿ ಆ್ಯಪ್‌ಗಳ ಪಾಲಾಗುತ್ತಿದೆ. ಇದು ಹೋಟೆಲ್ ಮಾಲೀಕರು ಮತ್ತು ಗ್ರಾಹಕರಿಬ್ಬರಿಗೂ ಆರ್ಥಿಕವಾಗಿ ದೊಡ್ಡ ಹೊರೆಯಾಗಿ ಪರಿಣಮಿಸಿದ್ದು, ವಿಶೇಷವಾಗಿ ಮಧ್ಯಮ ವರ್ಗದ ಸಣ್ಣ ಹೋಟೆಲ್‌ಗಳ ಮೇಲೆ ಹೆಚ್ಚು ದುಷ್ಪರಿಣಾಮ ಬೀರಿದೆ ಎಂದು ರಾಜ್ಯ ಹೋಟೆಲ್ ಮಾಲೀಕರ ಸಂಘದ ಗೌರವ ಅಧ್ಯಕ್ಷ ಪಿ.ಸಿ.ರಾವ್ ಬೇಸರ ವ್ಯಕ್ತಪಡಿಸಿದ್ದಾರೆ.