S Shorts

ಹುಬ್ಬಳ್ಳಿಯಲ್ಲಿ ಭೀಕರ ಅಗ್ನಿ ಅವಘಡ: Metro Mall ಬೆಂಕಿಗಾಹುತಿ

ಹುಬ್ಬಳ್ಳಿಯಲ್ಲಿ ಭೀಕರ ಅಗ್ನಿ ಅವಘಡ: Metro Mall ಬೆಂಕಿಗಾಹುತಿ
Author: Devaraj Naik
Posted By: Devaraj Naik
Updated: Jan 23, 2026 | 1:24 PM

ಹುಬ್ಬಳ್ಳಿ: ವಾಣಿಜ್ಯ ನಗರಿ ಹುಬ್ಬಳ್ಳಿಯ ಹೃದಯಭಾಗದಲ್ಲಿರುವ ಮರಾಠಾ ಗಲ್ಲಿಯಲ್ಲಿ ಭೀಕರ ಅಗ್ನಿ ಅವಘಡ ಸಂಭವಿಸಿದೆ.

ಇಲ್ಲಿನ ಮೆಟ್ರೋ ಮಾಲ್ ಕಟ್ಟಡದಲ್ಲಿ ಆಕಸ್ಮಿಕವಾಗಿ ಕಾಣಿಸಿಕೊಂಡ ಬೆಂಕಿ ಕ್ಷಣಾರ್ಧದಲ್ಲಿ ಇಡೀ ಸಂಕೀರ್ಣವನ್ನು ಆವರಿಸಿಕೊಂಡಿತು. ಬೆಂಕಿಯ ಕೆನ್ನಾಲಿಗೆಗೆ ಮಾಲ್‌ನಲ್ಲಿದ್ದ 60ಕ್ಕೂ ಹೆಚ್ಚು ವಿವಿಧ ವ್ಯಾಪಾರ ಮಳಿಗೆಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದ್ದು, ಕೋಟ್ಯಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಹಾನಿಯಾಗಿದೆ ಎಂದು ಅಂದಾಜಿಸಲಾಗಿದೆ.

ಘಟನೆಯ ಮಾಹಿತಿ ಸಿಗುತ್ತಿದ್ದಂತೆಯೇ ಸ್ಥಳಕ್ಕೆ ದೌಡಾಯಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹಲವಾರು ಗಂಟೆಗಳ ಕಾಲ ಸತತ ಕಾರ್ಯಾಚರಣೆ ನಡೆಸಿ ಬೆಂಕಿಯನ್ನು ಹತೋಟಿಗೆ ತಂದಿದ್ದಾರೆ. ಮಾಲ್‌ನಲ್ಲಿ ಬಟ್ಟೆ, ಪಾದರಕ್ಷೆ ಸೇರಿದಂತೆ ಸುಲಭವಾಗಿ ಬೆಂಕಿ ಹತ್ತಿಕೊಳ್ಳುವ ವಸ್ತುಗಳೇ ಹೆಚ್ಚಾಗಿದ್ದರಿಂದ ಜ್ವಾಲೆಯ ತೀವ್ರತೆ ವಿಪರೀತವಾಗಿತ್ತು. ಸದ್ಯ ಬೆಂಕಿ ನಂದಿಸಲಾಗಿದ್ದರೂ ಸಹ ಮಾಲ್‌ನ ಒಳಭಾಗದಲ್ಲಿರುವ ವಸ್ತುಗಳು ಸುಟ್ಟು ಕರಕಲಾಗಿ ಗುಜರಿ ರಾಶಿಯಂತೆ ಮಾರ್ಪಟ್ಟಿವೆ.

ಶಾರ್ಟ್ ಸರ್ಕ್ಯೂಟ್ ಈ ಅವಘಡಕ್ಕೆ ಪ್ರಮುಖ ಕಾರಣವಿರಬಹುದು ಎಂದು ಶಂಕಿಸಲಾಗಿದ್ದು, ಸ್ಥಳೀಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ದಟ್ಟವಾದ ಹೊಗೆಯಿಂದಾಗಿ ಸುತ್ತಮುತ್ತಲಿನ ನಿವಾಸಿಗಳಲ್ಲಿ ಕೆಲಕಾಲ ಆತಂಕದ ವಾತಾವರಣ ನಿರ್ಮಾಣವಾಗಿತ್ತು.