S Shorts

Humanity | ಅಪಘಾತದಲ್ಲಿ ಮಗನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು.!

Humanity | ಅಪಘಾತದಲ್ಲಿ ಮಗನ ಮೆದುಳು ನಿಷ್ಕ್ರಿಯ; ಅಂಗಾಂಗ ದಾನ ಮಾಡಿ ಸಾರ್ಥಕತೆ ಮೆರೆದ ಪೋಷಕರು.!
Author: Meghana Gowda
Posted By: Meghana Gowda
Updated: Dec 19, 2025 | 4:49 AM

ಮಂಡ್ಯ: ಹೆತ್ತ ಮಗನನ್ನು ಕಳೆದುಕೊಂಡ ಅತೀವ ನೋವಿನ ನಡುವೆಯೂ, ಆತನ ಅಂಗಾಂಗಗಳನ್ನು ದಾನ ಮಾಡುವ ಮೂಲಕ ಮಂಡ್ಯದ ಪೋಷಕರು ಮಾನವೀಯತೆ ಮೆರೆದಿದ್ದಾರೆ. ಶ್ರೀರಂಗಪಟ್ಟಣ ತಾಲೂಕಿನ ಬೆಳಗೊಳ ಗ್ರಾಮದ ಯುವಕ ಯಶ್ವಂತ್ (21) ಅವರ ಅಂಗಾಂಗ ದಾನದಿಂದ ಈಗ ಹಲವರ ಬಾಳಿಗೆ ಹೊಸ ಬೆಳಕು ಸಿಕ್ಕಂತಾಗಿದೆ.

ಘಟನೆಯ ಹಿನ್ನೆಲೆ:

ಡಿಸೆಂಬರ್ 13ರಂದು ಕೆಆರ್‌ಎಸ್ (KRS) ರಸ್ತೆಯ ಮಂಟಿ ಬಳಿ ಎರಡು ಬೈಕ್‌ಗಳ ನಡುವೆ ಸಂಭವಿಸಿದ ಅಪಘಾತದಲ್ಲಿ ಯಶ್ವಂತ್ (Yashwanth)  ಗಂಭೀರವಾಗಿ ಗಾಯಗೊಂಡಿದ್ದರು. ತಕ್ಷಣವೇ ಅವರನ್ನು ಮೈಸೂರಿನ ಅಪೋಲೋ ಆಸ್ಪತ್ರೆಗೆ (Apollo Hospital) ದಾಖಲಿಸಿ ಚಿಕಿತ್ಸೆ ನೀಡಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಯಶ್ವಂತ್ ಅವರ ಮೆದಳು ನಿಷ್ಕ್ರಿಯ (Brain Dead) ಗೊಂಡಿದೆ ಎಂದು ವೈದ್ಯರು ತಿಳಿಸಿದರು.

ಮಗ ಇನ್ನು ಬದುಕುಳಿಯುವುದಿಲ್ಲ ಎಂದು ತಿಳಿದಾಗ ಪೋಷಕರು ಕುಸಿದುಹೋಗಿದ್ದರು. ಆದರೆ, ವೈದ್ಯರು ಅಂಗಾಂಗ ದಾನದ ಮಹತ್ವವನ್ನು ತಿಳಿಸಿದಾಗ, ತಮ್ಮ ಮಗನ ಅಂಗಾಂಗಗಳಿಂದ ಬೇರೆಯವರಾದರೂ ಬದುಕಲಿ ಎಂಬ ಉದಾತ್ತ ಉದ್ದೇಶದಿಂದ ಪೋಷಕರು ಅಂಗಾಂಗ ದಾನಕ್ಕೆ ಒಪ್ಪಿಗೆ ನೀಡಿದರು.  ಆಸ್ಪತ್ರೆಯಲ್ಲಿ ಅಂಗಾಂಗಗಳನ್ನು ಪಡೆಯುವ ಪ್ರಕ್ರಿಯೆ ನಡೆದಿದ್ದು, ಇಂದು ಯಶ್ವಂತ್ ಅವರ ಮೃತದೇಹವನ್ನು ಪೋಷಕರಿಗೆ ಹಸ್ತಾಂತರಿಸಲಾಗುವುದು.

ಪೋಷಕರ ಈ ದಿಟ್ಟ ಮತ್ತು ಮಾನವೀಯ ನಿರ್ಧಾರಕ್ಕೆ ವೈದ್ಯಕೀಯ ಲೋಕ ಮತ್ತು ಸಾರ್ವಜನಿಕ ವಲಯದಿಂದ ವ್ಯಾಪಕ ಮೆಚ್ಚುಗೆ ವ್ಯಕ್ತವಾಗಿದೆ.