S Shorts

25 ದಿನ ಜೀವನ ನಡೆಸಲು ಖರ್ಚಾಗಿದ್ದು ಬರೋಬ್ಬರಿ 1 ಲಕ್ಷ! ಜಪಾನ್‌ನಿಂದ Video ಹಂಚಿಕೊಂಡ ಭಾರತೀಯ ಯುವಕ

25 ದಿನ ಜೀವನ ನಡೆಸಲು ಖರ್ಚಾಗಿದ್ದು ಬರೋಬ್ಬರಿ 1 ಲಕ್ಷ! ಜಪಾನ್‌ನಿಂದ Video ಹಂಚಿಕೊಂಡ ಭಾರತೀಯ ಯುವಕ
Author: Sagaradventure
Posted By: Sagaradventure
Updated: Aug 23, 2026 | 5:40 PM

ಜಪಾನ್‌ನಲ್ಲಿ ನೆಲೆಸಿರುವ ಭಾರತೀಯ ಯುವಕನೊಬ್ಬ, ತಾನು ಅಲ್ಲಿಗೆ ತೆರಳಿದ ಕೇವಲ 25 ದಿನಗಳಲ್ಲಿ ಮೂಲಭೂತ ಖರ್ಚುಗಳಿಗಾಗಿಯೇ ಬರೋಬ್ಬರಿ 1 ಲಕ್ಷ ರೂಪಾಯಿ (ಭಾರತೀಯ ಕರೆನ್ಸಿಯಲ್ಲಿ) ವ್ಯಯಿಸಿರುವ ಬಗ್ಗೆ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿರುವ ವಿಡಿಯೋವೊಂದು ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.

ದೇವ್ ವಿಜಯ್ ವರ್ಗಿಯಾ ಎಂಬುವವರೇ ಈ ವಿಡಿಯೋ ಹಂಚಿಕೊಂಡವರು. “ನನಗೆ ಜಪಾನ್‌ನಲ್ಲಿ ಇನ್ನೂ ಮೊದಲ ತಿಂಗಳ ಸಂಬಳವೇ ಕೈಸೇರಿಲ್ಲ. ಅಷ್ಟರಲ್ಲಾಗಲೇ ನನ್ನ ಬಜೆಟ್ ಮೀರಿದೆ. ಇಲ್ಲಿಗೆ ಬಂದು 25 ದಿನಗಳೂ ಕಳೆದಿಲ್ಲ, ಆಗಲೇ ನನ್ನ ಮೈಲ್‌ಬಾಕ್ಸ್‌ಗೆ 10ನೇ ಬಿಲ್ ಬಂದಿದೆ. ನಾನು ಬಂದಾಗಿನಿಂದ ಬರೀ ಬಿಲ್ ಕಟ್ಟುವುದರಲ್ಲೇ ಕಾಲ ಕಳೆಯುತ್ತಿದ್ದೇನೆ” ಎಂದು ದೇವ್ ತಮ್ಮ ಅಳಲು ತೋಡಿಕೊಂಡಿದ್ದಾರೆ.

ಅವರು ಹಂಚಿಕೊಂಡಿರುವ ಖರ್ಚಿನ ಲೆಕ್ಕಾಚಾರದಲ್ಲಿ ಮನೆ ಬಾಡಿಗೆ, ವಿದ್ಯುತ್, ಗ್ಯಾಸ್, ನೀರು, ವೈ-ಫೈ, ಸಿಮ್ ಕಾರ್ಡ್ ಮತ್ತು ಸಾರಿಗೆ ವೆಚ್ಚಗಳು ಮಾತ್ರ ಸೇರಿವೆ. ಇಷ್ಟಕ್ಕೇ ಒಟ್ಟು 1,50,000 ಯೆನ್ (ಅಂದಾಜು 90,271 ರೂ.) ಖರ್ಚಾಗಿದೆ. ಅಚ್ಚರಿಯ ವಿಚಾರವೆಂದರೆ, ಇದರಲ್ಲಿ ದಿನಸಿ ಹಾಗೂ ಊಟದ ಖರ್ಚನ್ನು ಅವರು ಸೇರಿಸಿಯೇ ಇಲ್ಲ. “ನಾನು ದಿನಸಿ ಮತ್ತು ಊಟದ ಖರ್ಚನ್ನು ಲೆಕ್ಕ ಹಾಕಿದರೆ ಈ ಮೊತ್ತ ಇನ್ನಷ್ಟು ಹೆಚ್ಚಾಗುತ್ತದೆ” ಎಂದಿದ್ದಾರೆ.

ಭಾರತ-ಜಪಾನ್ ದಿನಸಿ ಬೆಲೆಗಳ ಹೋಲಿಕೆ 

ವಿಡಿಯೋದಲ್ಲಿ ದೇವ್ ಅವರು ಭಾರತ ಮತ್ತು ಜಪಾನ್‌ನ ದಿನಸಿ ವಸ್ತುಗಳ ಬೆಲೆಯನ್ನು ಹೋಲಿಸಿದ್ದಾರೆ. ಜಪಾನ್‌ನಲ್ಲಿ ಒಂದು ಲೀಟರ್ ಹಾಲಿಗೆ 168 ರೂ. (ಭಾರತದಲ್ಲಿ 50 ರೂ.), ಬ್ರೆಡ್‌ಗೆ 100 ರೂ. (ಭಾರತದಲ್ಲಿ 20 ರೂ.), 4 ಮೊಟ್ಟೆಗೆ 120 ರೂ., 2 ಈರುಳ್ಳಿಗೆ 150 ರೂ., 1 ಟೊಮ್ಯಾಟೊಗೆ 53 ರೂ., ಕರ್ಬೂಜಕ್ಕೆ 350 ರೂ. ಹಾಗೂ 3 ಬಾಳೆಹಣ್ಣಿಗೆ 120 ರೂ. ಬೆಲೆಯಿದೆ ಎಂದು ತಿಳಿಸಿದ್ದಾರೆ.

ಹೆಚ್ಚಿನ ಖರ್ಚಾದರೂ ಉತ್ತಮ ಜೀವನಮಟ್ಟ! 

ಜಪಾನ್‌ನಲ್ಲಿ ಜೀವನ ವೆಚ್ಚ ದುಬಾರಿಯಾಗಿದ್ದರೂ, ಅದಕ್ಕೆ ತಕ್ಕಂತೆ ಅಲ್ಲಿನ ಸಂಬಳವೂ ಹೆಚ್ಚಿರುತ್ತದೆ ಎಂದು ದೇವ್ ಸ್ಪಷ್ಟಪಡಿಸಿದ್ದಾರೆ. “ನಾನು ಕೇವಲ ಖರ್ಚನ್ನು ಮಾತ್ರ ನೋಡುತ್ತಿಲ್ಲ. ಆ ಖರ್ಚಿಗೆ ಪ್ರತಿಯಾಗಿ ನಮಗೆ ಏನು ಸಿಗುತ್ತಿದೆ ಎಂಬುದನ್ನೂ ಗಮನಿಸಬೇಕು. ಅತ್ಯಂತ ಸ್ವಚ್ಛವಾದ ಪರಿಸರ, ಎಲ್ಲೆಡೆ ಶಾಂತಿ, ಹಸಿರು, ಉತ್ತಮ ಗಾಳಿಯ ಗುಣಮಟ್ಟ ಇಲ್ಲಿ ಸಿಗುತ್ತಿದೆ. ಇದಕ್ಕಿಂತ ಇನ್ನೇನು ಬೇಕು?” ಎಂದು ಅವರು ಜಪಾನ್‌ನ ಜೀವನಮಟ್ಟವನ್ನು ಶ್ಲಾಘಿಸಿದ್ದಾರೆ.