S Shorts

‘ದೇವಿ’ ಚಿತ್ರದ ತಾಯಿ ಹಾಡಿಗೆ ಧ್ವನಿಯಾದ ಜೋಗಿ ಪ್ರೇಮ್: ಉಡುಗೊರೆಯಾಗಿ ಹಸು-ಕರು ನೀಡಿದ ಮಂಡ್ಯದ ಯುವ ರೈತ!

‘ದೇವಿ’ ಚಿತ್ರದ ತಾಯಿ ಹಾಡಿಗೆ ಧ್ವನಿಯಾದ ಜೋಗಿ ಪ್ರೇಮ್: ಉಡುಗೊರೆಯಾಗಿ ಹಸು-ಕರು ನೀಡಿದ ಮಂಡ್ಯದ ಯುವ ರೈತ!
Author: Sagaradventure
Posted By: Sagaradventure
Updated: Oct 29, 2026 | 3:31 PM

ಬೆಂಗಳೂರು: ಯುವ ರೈತ ಚೇತನ್ ಹಾಗೂ ಭವ್ಯ ಗೌಡ ಅಭಿನಯದ ‘ದೇವಿ’ ಚಿತ್ರದ ‘ಅಮ್ಮನ ಧ್ಯಾನಿಸೋ’ ಹಾಡಿನ ರೆಕಾರ್ಡಿಂಗ್ ಕಾರ್ಯ ಇತ್ತೀಚೆಗೆ ಲೂಪ್ ಸ್ಟುಡಿಯೋದಲ್ಲಿ ಯಶಸ್ವಿಯಾಗಿ ನೆರವೇರಿತು. ವಿಶೇಷವೆಂದರೆ, ತಾಯಿ ಸೆಂಟಿಮೆಂಟ್ ಇರುವ ಈ ಭಾವುಕ ಹಾಡಿಗೆ ಖ್ಯಾತ ನಿರ್ದೇಶಕ ‘ಜೋಗಿ’ ಪ್ರೇಮ್ ತಮ್ಮ ಅದ್ಭುತ ಧ್ವನಿಯ ಮೂಲಕ ಜೀವ ತುಂಬಿದ್ದಾರೆ.

ಜೋಗಿ ಹಾಡಿನ ನೆನಪು ತಂದ ‘ದೇವಿ’ ಗೀತೆ: 

ಸಂಗೀತ ನಿರ್ದೇಶಕ ಶ್ರೀಧರ್ ವಿ. ಸಂಭ್ರಮ್ ಅವರ ಸಂಗೀತ ಸಂಯೋಜನೆಯಲ್ಲಿ ಈ ಹಾಡು ಮೂಡಿಬಂದಿದೆ. ಪ್ಯಾಥೋ ಪ್ರಜ್ಜು ಅವರ ಸಾಹಿತ್ಯವಿರುವ “ಜೋಗುಳುವ ಹಾಡಿ ನೀನು ಕೈತುತ್ತು ಕೊಟ್ಟೋಳು” ಎಂಬ ಸಾಲುಗಳನ್ನು ಪ್ರೇಮ್ ಹಾಡುತ್ತಿದ್ದಾಗ, ಅವರದ್ದೇ ನಿರ್ದೇಶನದ ಬ್ಲಾಕ್‌ಬಸ್ಟರ್ ‘ಜೋಗಿ’ ಚಿತ್ರದ ಜನಪ್ರಿಯ “ಬೇಡುವೆನು ವರವನ್ನು” ಹಾಡಿನ ನೆನಪು ಮರುಕಳಿಸಿತು. ಮಂಡ್ಯದ ಯುವ ರೈತ ಚೇತನ್ ಅವರ ಮೇಲಿನ ಪ್ರೀತಿ ಹಾಗೂ ನಮ್ಮೂರಿನ ಪ್ರತಿಭೆಗಳು ಬೆಳೆಯಲಿ ಎಂಬ ಹಾರೈಕೆಯೊಂದಿಗೆ ಪ್ರೇಮ್ ಈ ಹಾಡನ್ನು ಖುಷಿಯಿಂದ ಹಾಡಿಕೊಟ್ಟಿದ್ದಾರೆ.

ಸಂಭಾವನೆ ಬದಲಿಗೆ ಹಸು-ಕರು ಉಡುಗೊರೆ! 

ಈ ಹಾಡಿಗೆ ಧ್ವನಿಯಾದ ಜೋಗಿ ಪ್ರೇಮ್ ಅವರಿಗೆ ‘ದೇವಿ’ ಚಿತ್ರದ ನಾಯಕ ಹಾಗೂ ನಿರ್ಮಾಪಕ ಚೇತನ್ ವಿಶೇಷವಾದ ಉಡುಗೊರೆಯೊಂದನ್ನು ನೀಡಿದ್ದಾರೆ. ಪ್ರೇಮ್ ಅವರ ಪ್ರೀತಿಗೆ ಕೃತಜ್ಞತೆ ಸಲ್ಲಿಸುವ ಸಲುವಾಗಿ, ಗ್ರಾಮೀಣ ಸೊಗಡನ್ನು ಬಿಂಬಿಸುವಂತೆ ಎರಡು ಹಸು-ಕರುಗಳನ್ನು ಉಡುಗೊರೆಯಾಗಿ ನೀಡಿ ಗಮನ ಸೆಳೆದಿದ್ದಾರೆ.

ಹೊಸ ವರ್ಷಕ್ಕೆ ‘ದೇವಿ’ ದರ್ಶನ: 

ಸಿಆರ್ (CR) ಪ್ರೊಡಕ್ಷನ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ಯುವ ರೈತ ಚೇತನ್ ಕುಮಾರ್ ಅವರೇ ಕಥೆ, ಚಿತ್ರಕಥೆ ಬರೆದು, ನಾಯಕರಾಗಿ ನಟಿಸಿ, ಬಂಡವಾಳವನ್ನೂ ಹೂಡಿದ್ದಾರೆ. ಚಿತ್ರಕ್ಕೆ ಪ್ರಕಾಶ್ ಆ್ಯಕ್ಷನ್ ಕಟ್ ಹೇಳುತ್ತಿದ್ದಾರೆ. ಸದ್ಯ ಚಿತ್ರೀಕರಣ ಭರದಿಂದ ಸಾಗುತ್ತಿದ್ದು, ಹಾಡುಗಳ ಚಿತ್ರೀಕರಣಕ್ಕೆ ಚಿತ್ರತಂಡ ಅಣಿಯಾಗುತ್ತಿದೆ. ಎಲ್ಲವೂ ಅಂದುಕೊಂಡಂತೆ ಆದರೆ, ಮುಂಬರುವ ಹೊಸ ವರ್ಷಕ್ಕೆ ‘ದೇವಿ’ ಸಿನಿಮಾವನ್ನು ಪ್ರೇಕ್ಷಕರ ಎದುರು ತರುವ ಸನ್ನಾಹದಲ್ಲಿ ಚಿತ್ರತಂಡವಿದೆ.