S Shorts

ಹೊಸೂರಿಗೆ Metro ವಿಸ್ತರಣೆಗೆ ಕರವೇ ವಿರೋಧ; ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪ್ರವೀಣಕುಮಾರ ಶೆಟ್ಟಿ

ಹೊಸೂರಿಗೆ Metro ವಿಸ್ತರಣೆಗೆ ಕರವೇ ವಿರೋಧ; ಉಗ್ರ ಹೋರಾಟದ ಎಚ್ಚರಿಕೆ ನೀಡಿದ ಪ್ರವೀಣಕುಮಾರ ಶೆಟ್ಟಿ
Author: Sagaradventure
Posted By: Sagaradventure
Updated: Oct 22, 2026 | 9:22 PM

ಬೆಂಗಳೂರು: ಕರ್ನಾಟಕದ ಗಡಿಭಾಗವಾದ ಬೊಮ್ಮಸಂದ್ರ ಹಾಗೂ ಅತ್ತಿಬೆಲೆ ಮಾರ್ಗವಾಗಿ ತಮಿಳುನಾಡಿನ ಹೊಸೂರಿಗೆ ‘ನಮ್ಮ ಮೆಟ್ರೋ’ ಯೋಜನೆಯನ್ನು ವಿಸ್ತರಿಸಲು ಮುಂದಾಗಿರುವ ರಾಜ್ಯ ಸರ್ಕಾರದ ಕ್ರಮಕ್ಕೆ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸರ್ಕಾರಕ್ಕೆ ಉಗ್ರ ಹೋರಾಟದ ಎಚ್ಚರಿಕೆ ನೀಡಿದೆ.

ತಮಿಳುನಾಡು ಸಿಎಂ ವಿಜಯ್ ಅವರು ಹೊಸೂರಿಗೆ ಮೆಟ್ರೋ ವಿಸ್ತರಿಸುವಂತೆ ಸಲ್ಲಿಸಿರುವ ಮನವಿಗೆ ಸ್ಪಂದಿಸಿ, ಯೋಜನೆಗೆ ಡಿಪಿಆರ್ (DPR) ಸಿದ್ಧಪಡಿಸಲು ಮುಂದಾಗಿರುವ ರಾಜ್ಯ ಸರ್ಕಾರದ ನಡೆಯನ್ನು ಕರವೇ ರಾಜ್ಯಾಧ್ಯಕ್ಷ ಪ್ರವೀಣ್ ಕುಮಾರ್ ಶೆಟ್ಟಿ ಅವರು ತೀವ್ರವಾಗಿ ಖಂಡಿಸಿದ್ದಾರೆ.

ಉದ್ಯೋಗ ಕಸಿದುಕೊಳ್ಳುವ ಆತಂಕ: 

ಮೆಟ್ರೋ ಮಾರ್ಗವನ್ನು ಹೊಸೂರಿನವರೆಗೆ ವಿಸ್ತರಿಸುವುದರಿಂದ ತಮಿಳುನಾಡಿನ ಯುವಕರು ನೇರವಾಗಿ ಕರ್ನಾಟಕಕ್ಕೆ ಬಂದು ಇಲ್ಲಿನ ಉದ್ಯೋಗಗಳನ್ನು ಕಸಿದುಕೊಳ್ಳಲು ಸರ್ಕಾರವೇ ಸುಸಜ್ಜಿತ ವ್ಯವಸ್ಥೆ ಮಾಡಿಕೊಟ್ಟಂತಾಗುತ್ತದೆ. ಈ ಯೋಜನೆಯಿಂದಾಗಿ ಹೊಸೂರಿನಿಂದ ಕೇವಲ 20 ನಿಮಿಷಗಳಲ್ಲಿ ತಮಿಳುನಾಡಿನ ಜನರು ಬಿಡದಿ, ಅತ್ತಿಬೆಲೆ ಹಾಗೂ ಕೋಲಾರ ಭಾಗದ ಕೈಗಾರಿಕಾ ಪ್ರದೇಶಗಳಿಗೆ ಬಂದು ತಲುಪಲಿದ್ದಾರೆ. ಈಗಾಗಲೇ ನಿರುದ್ಯೋಗದಿಂದ ಬಳಲುತ್ತಿರುವ ಕನ್ನಡಿಗರಿಗೆ ಇದು ಭಾರಿ ಕಂಟಕ ತರಲಿದೆ ಎಂದು ಕರವೇ ಕಳವಳ ವ್ಯಕ್ತಪಡಿಸಿದೆ.

ಉತ್ತರ ಭಾರತೀಯರ ಹಾವಳಿಯ ನಡುವೆ ಇದೀಗ ಮೆಟ್ರೋ ಸಂಪರ್ಕದಿಂದಾಗಿ ತಮಿಳುನಾಡಿನಿಂದ ಬರುವವರಿಂದ ಕನ್ನಡಿಗರ ಮೇಲೆ ಮತ್ತಷ್ಟು ದೌರ್ಜನ್ಯ ಹೆಚ್ಚಾಗಲಿದೆ. ಮುಂದಿನ ದಿನಗಳಲ್ಲಿ ಮೆಟ್ರೋ ನಿಲ್ದಾಣಗಳಿಗೆ ತಮಿಳಿನ ನಾಯಕರ ಹೆಸರುಗಳನ್ನು ಇಡುವಂತಹ ಸ್ಥಿತಿ ನಿರ್ಮಾಣವಾಗಿ, ಕನ್ನಡಿಗರು ಓಡಾಡಲೂ ಕಷ್ಟವಾಗುವ ವಾತಾವರಣ ಸೃಷ್ಟಿಯಾಗಲಿದೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.

ಯೋಜನೆ ಕೈಬಿಡದಿದ್ದರೆ ಹೋರಾಟದ ಎಚ್ಚರಿಕೆ: 

ಮೇಕೆದಾಟು ಯೋಜನೆ ಹಾಗೂ ಕಾವೇರಿ ನೀರಿನ ವಿಚಾರದಲ್ಲಿ ಸದಾ ಕನ್ನಡಿಗರಿಗೆ ದ್ರೋಹ ಬಗೆಯುತ್ತಿರುವ ತಮಿಳುನಾಡು ಸರ್ಕಾರಕ್ಕೆ ರಾಜ್ಯ ಸರ್ಕಾರ ಮೆಟ್ರೋ ವಿಸ್ತರಣೆಯ ಮೂಲಕ ಬೆಂಬಲ ನೀಡಬಾರದು ಎಂದು ಕರವೇ ಆಗ್ರಹಿಸಿದೆ. ಮೆಟ್ರೋ ರೈಲು ಯೋಜನೆಯು ನಮ್ಮ ರಾಜ್ಯದ ಗಡಿಭಾಗದವರೆಗೆ ಮಾತ್ರ ಸೀಮಿತವಾಗಿರಬೇಕು. ಒಂದು ವೇಳೆ ಸರ್ಕಾರ ಈ ಯೋಜನೆಯನ್ನು ತಕ್ಷಣವೇ ನಿಲ್ಲಿಸದೆ ಮುಂದವರಿದರೆ, ರಾಜ್ಯಾದ್ಯಂತ ತೀವ್ರ ಸ್ವರೂಪದ ಹೋರಾಟವನ್ನು ಎದುರಿಸಬೇಕಾಗುತ್ತದೆ ಎಂದು ಪ್ರವೀಣ್ ಕುಮಾರ್ ಶೆಟ್ಟಿ ಖಡಕ್ ಎಚ್ಚರಿಕೆ ನೀಡಿದ್ದಾರೆ.