S Shorts

Government Vs Contractors: 7 ಸಚಿವರ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ

Government Vs Contractors: 7 ಸಚಿವರ ವಿರುದ್ಧ ಗಂಭೀರ ಭ್ರಷ್ಟಾಚಾರದ ಆರೋಪ
Author: Devaraj Naik
Posted By: Devaraj Naik
Updated: Jan 29, 2026 | 1:42 PM

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಮತ್ತೊಮ್ಮೆ ‘ಕಮಿಷನ್ ಬಾಂಬ್’ ಸಿಡಿದಿದ್ದು, ಸರ್ಕಾರ ಮತ್ತು ಗುತ್ತಿಗೆದಾರರ ಸಂಘದ ನಡುವಿನ ಜಟಾಪಟಿ ಈಗ ತಾರಕಕ್ಕೇರಿದೆ.

ಕಲ್ಯಾಣ ಕರ್ನಾಟಕ ಭಾಗದ 7 ಪ್ರಭಾವಿ ಸಚಿವರು ಹಾಗೂ 42 ಶಾಸಕರು ಗುತ್ತಿಗೆದಾರರಿಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾರೆ ಎಂದು ಸಂಘವು ನೇರ ಆರೋಪ ಮಾಡಿದೆ. ಯಾವ ಇಲಾಖೆಯಲ್ಲಿ ಎಷ್ಟು ಪರ್ಸೆಂಟೇಜ್ ಕಮಿಷನ್ ನೀಡಬೇಕು ಎಂಬ ಸಂಪೂರ್ಣ ವಿವರ ಹಾಗೂ ದಾಖಲೆಗಳನ್ನು ಮಾರ್ಚ್ 5 ರಂದು ಬಿಡುಗಡೆ ಮಾಡುವುದಾಗಿ ಸಂಘದ ಅಧ್ಯಕ್ಷ ಮಂಜುನಾಥ್ ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದಾರೆ.

ಸಂಘದ ಮಾಹಿತಿಯಂತೆ ವಿವಿಧ ಇಲಾಖೆಗಳಲ್ಲಿ ಸಾವಿರಾರು ಕೋಟಿ ರೂಪಾಯಿ ಬಾಕಿ ಉಳಿದಿದ್ದು, ಗುತ್ತಿಗೆದಾರರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ 3,800 ಕೋಟಿ, ಸಣ್ಣ ನೀರಾವರಿ ಇಲಾಖೆಯಲ್ಲಿ 3,000 ಕೋಟಿ, ನಗರಾಭಿವೃದ್ಧಿಯಲ್ಲಿ 2,000 ಕೋಟಿ ಹಾಗೂ ವಸತಿ ಮತ್ತು ವಕ್ಫ್ ಇಲಾಖೆಯಲ್ಲಿ 2,600 ಕೋಟಿ ರೂ. ಬಿಲ್ ಬಾಕಿ ಇದೆ. ಇದರ ಜೊತೆಗೆ ಕಾರ್ಮಿಕ ಇಲಾಖೆಯಲ್ಲಿ 2,000 ಕೋಟಿ ಹಾಗೂ ಜಿಬಿಎ ಅಡಿಯಲ್ಲಿ 2,600 ಕೋಟಿ ರೂಪಾಯಿ ಬಾಕಿ ಇದ್ದು, ಮಾರ್ಚ್ 5ರೊಳಗೆ ಹಣ ಪಾವತಿಸದಿದ್ದರೆ ಹೋರಾಟ ತೀವ್ರಗೊಳಿಸುವುದಾಗಿ ಗುತ್ತಿಗೆದಾರರು ಡೆಡ್‌ಲೈನ್ ನೀಡಿದ್ದಾರೆ.

ವಿಶೇಷವಾಗಿ ಸಚಿವ ಬೈರತಿ ಸುರೇಶ್ ವಿರುದ್ಧ ಗಂಭೀರ ಆರೋಪ ಮಾಡಿರುವ ಸಂಘದ ಅಧ್ಯಕ್ಷರು, ಸಚಿವರು ಮಧ್ಯವರ್ತಿಗಳ ಮೂಲಕ ಕಾಮಗಾರಿಗಳನ್ನು ಫಿಕ್ಸ್ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ. ರಾಜಾಜಿನಗರ ಮತ್ತು ಆರ್.ಟಿ. ನಗರದಲ್ಲಿರುವ ಖಾಸಗಿ ಕಚೇರಿಗಳಿಗೆ ಗುತ್ತಿಗೆದಾರರನ್ನು ಕರೆಸಿಕೊಂಡು, ತಮಗೆ ಬೇಕಾದವರಿಗೆ ಮಾತ್ರ ಗುತ್ತಿಗೆ ನೀಡಲಾಗುತ್ತಿದೆ ಎನ್ನುವ ಸ್ಪೋಟಕ ಮಾಹಿತಿ ಈಗ ಸಂಚಲನ ಮೂಡಿಸಿದೆ.