S Shorts

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ: ಬರೋಬ್ಬರಿ 1 ಕೋಟಿ ಹೆಸರು ಡಿಲೀಟ್, ಮಹಿಳೆಯರದೇ ಮೇಲುಗೈ!

ಕರ್ನಾಟಕದ ಅಂತಿಮ ಮತದಾರರ ಪಟ್ಟಿ ಪ್ರಕಟ: ಬರೋಬ್ಬರಿ 1 ಕೋಟಿ ಹೆಸರು ಡಿಲೀಟ್, ಮಹಿಳೆಯರದೇ ಮೇಲುಗೈ!
Author: Sagaradventure
Posted By: Sagaradventure
Updated: Oct 27, 2026 | 3:21 PM

ಬೆಂಗಳೂರು: ಕರ್ನಾಟಕದ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಪ್ರಕಟಿಸಿದೆ. ‘ವಿಶೇಷ ತೀವ್ರ ಪರಿಷ್ಕರಣೆ’ (SIR)ಗೂ ಮುನ್ನ 5,54,32,314 ಇದ್ದ ಮತದಾರರ ಸಂಖ್ಯೆ, ಇದೀಗ 4,55,00,011ಕ್ಕೆ ಇಳಿಕೆಯಾಗಿದೆ. ಅಂದರೆ, ಕರಡು ಪಟ್ಟಿಯಲ್ಲಿ ಕೈಬಿಡಲಾಗಿದ್ದ 1.07 ಕೋಟಿ ಹೆಸರುಗಳ ಪೈಕಿ ಪರಿಶೀಲನೆ ಬಳಿಕ 8.64 ಲಕ್ಷ ಮತದಾರರನ್ನು ಸೇರ್ಪಡೆ ಮಾಡಲಾಗಿದ್ದು, ಅಂತಿಮವಾಗಿ ಬರೋಬ್ಬರಿ 99.32 ಲಕ್ಷ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ.

ಮತದಾರರ ಅಂಕಿ-ಅಂಶ, ಮಹಿಳೆಯರೇ ಮುಂದು: 

ಅಂತಿಮ ಪಟ್ಟಿಯ ಪ್ರಕಾರ ರಾಜ್ಯದಲ್ಲಿ ಒಟ್ಟು 4.55 ಕೋಟಿ ಮತದಾರರಿದ್ದು, ಪುರುಷರಿಗಿಂತ ಮಹಿಳೆಯರೇ ಮೇಲುಗೈ ಸಾಧಿಸಿದ್ದಾರೆ. 2.29 ಕೋಟಿಗೂ ಅಧಿಕ ಮಹಿಳಾ ಮತದಾರರಿದ್ದರೆ, 2.25 ಕೋಟಿ ಪುರುಷರು ಹಾಗೂ 2,841 ತೃತೀಯ ಲಿಂಗಿ ಮತದಾರರಿದ್ದಾರೆ. ಇದರಲ್ಲಿ 18 ಹಾಗೂ 19 ವರ್ಷದ 6.83 ಲಕ್ಷ ಯುವ ಮತದಾರರು ಮತ್ತು 85 ವರ್ಷ ಮೇಲ್ಪಟ್ಟ 3.92 ಲಕ್ಷ ಹಿರಿಯ ನಾಗರಿಕರಿದ್ದಾರೆ.

1 ಕೋಟಿಗೂ ಅಧಿಕ ಹೆಸರು ಡಿಲೀಟ್ ಆಗಿದ್ದೇಕೆ? 

ಮನೆ ಬದಲಿಸಿ ಸ್ಥಳಾಂತರಗೊಂಡ ಅಥವಾ ಪತ್ತೆಯಾಗದ ಕಾರಣಕ್ಕಾಗಿ 80.62 ಲಕ್ಷ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿದೆ. ಮೃತಪಟ್ಟವರ 16.39 ಲಕ್ಷ, ನಕಲಿ (Duplicate) ಮತದಾರರ 7 ಲಕ್ಷ ಹಾಗೂ ‘ಇತರೆ’ ವಿಭಾಗದಲ್ಲಿ 3.83 ಲಕ್ಷ ಹೆಸರುಗಳನ್ನು ಡಿಲೀಟ್ ಮಾಡಲಾಗಿದೆ. ಕೈಬಿಡಲಾದವರು ಮರು ಸೇರ್ಪಡೆಗೆ ‘ನಮೂನೆ 6’ರ ಮೂಲಕ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿತ್ತು. ಆ ಮೂಲಕ ಹೊಸ ಮತದಾರರೂ ಸೇರಿದಂತೆ ಒಟ್ಟು 7,87,534 ಅರ್ಜಿಗಳು ಸಲ್ಲಿಕೆಯಾಗಿದ್ದವು.

ಪಟ್ಟಿಯಲ್ಲಿ ನಿಮ್ಮ ಹೆಸರಿದೆಯೇ? ಚೆಕ್ ಮಾಡುವುದು ಹೇಗೆ?

ಕ್ಷೇತ್ರವಾರು ಮತದಾರರ ಪಟ್ಟಿಯು ಮುಖ್ಯ ಚುನಾವಣಾಧಿಕಾರಿಗಳ (CEO) ವೆಬ್‌ಸೈಟ್‌ನಲ್ಲಿ ಲಭ್ಯವಿದೆ. ಅಲ್ಲದೆ, ಚುನಾವಣಾ ಆಯೋಗದ ಪೋರ್ಟಲ್‌ನಲ್ಲಿ “Search by EPIC” ಆಯ್ಕೆಮಾಡಿ, ನಿಮ್ಮ ವೋಟರ್ ಐಡಿ ಸಂಖ್ಯೆ ನಮೂದಿಸಿ, ‘ಕರ್ನಾಟಕ’ ರಾಜ್ಯವನ್ನು ಆಯ್ಕೆ ಮಾಡಿ ಕ್ಯಾಪ್ಚಾ (Captcha) ಎಂಟರ್ ಮಾಡುವ ಮೂಲಕ ಪರಿಶೀಲಿಸಬಹುದು. ಒಂದು ವೇಳೆ “No Result Found” ಎಂದು ಬಂದರೆ, ಹೆಸರು ಡಿಲೀಟ್ ಆಗಿದೆ ಎಂದು ತೀರ್ಮಾನಿಸುವ ಮುನ್ನ ಸಂಬಂಧಪಟ್ಟ ಚುನಾವಣಾ ಅಧಿಕಾರಿಗಳನ್ನು ಸಂಪರ್ಕಿಸಿ ಖಚಿತಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ.