ವೈವಿಧ್ಯತೆಯಲ್ಲಿ ಏಕತೆ ಹಾಗೂ ಕೌಶಲ್ಯದಲ್ಲಿ ಸ್ವಾವಲಂಬನೆ ಸಾಧಿಸುವುದು ‘ಕರ್ನಾಟಕ ಪರ್ವ’ದ ಮೂಲ ಆಶಯವಾಗಿದೆ. ಇದು ಕಲೆ ಉಳಿಯಲಿ, ಕೌಶಲ್ಯ ಬೆಳೆಯಲಿ ಮತ್ತು ಕುಶಲಕರ್ಮಿಗಳ ಬದುಕು ಬೆಳಗಲಿ ಎಂಬ ಉದ್ದೇಶದಿಂದ ಆಯೋಜಿಸಲಾದ ನಮ್ಮ ಸರ್ಕಾರದ ನೈಜ ಪ್ರತಿಬಿಂಬವಾಗಿದೆ ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಬಣ್ಣಿಸಿದ್ದಾರೆ.
ಬೆಂಗಳೂರಿನ ಅರಮನೆ ಮೈದಾನದಲ್ಲಿ ಶನಿವಾರ ಏರ್ಪಡಿಸಲಾಗಿದ್ದ ‘ಕರ್ನಾಟಕ ಪರ್ವ 2026’ ಬೃಹತ್ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಸಭಾಪತಿ ಯು.ಟಿ. ಖಾದರ್ ಅವರ ಉಪಸ್ಥಿತಿಯಲ್ಲಿ ಜ್ಯೋತಿ ಬೆಳಗಿಸುವ ಮೂಲಕ ಆರಂಭವಾದ ಈ ಕಾರ್ಯಕ್ರಮದಲ್ಲಿ ಎಲ್ಲಾ ಧರ್ಮಗಳ ಪ್ರಮುಖರು ಭಾಗವಹಿಸಿದ್ದು, ಕರ್ನಾಟಕವು ಸರ್ವ ಜನಾಂಗದ ಶಾಂತಿಯ ತೋಟ ಎಂಬುದನ್ನು ಮತ್ತೆ ಸಾಬೀತುಪಡಿಸಿದೆ. ಬುದ್ಧ, ಬಸವ, ಏಸು ಕ್ರಿಸ್ತ, ಪೈಗಂಬರ್, ಅಂಬೇಡ್ಕರ್ ಹಾಗೂ ಗಾಂಧೀಜಿಯವರ ಬದುಕಿನ ಐತಿಹಾಸಿಕ ಗಳಿಗೆಗಳನ್ನು ಸ್ಮರಿಸಿದ ಸಿಎಂ, ಕುಶಲಕರ್ಮಿಗಳ ಮತ್ತು ಸಣ್ಣ ಉದ್ಯಮಗಳ ಉತ್ತೇಜನಕ್ಕಾಗಿ ಈ ವೇದಿಕೆಯಲ್ಲಿ 180 ಕ್ಕೂ ಹೆಚ್ಚು ಮಳಿಗೆಗಳನ್ನು ತೆರೆಯಲಾಗಿದೆ. ನಮ್ಮ ನಾಡಿನ ಸಾಂಸ್ಕೃತಿಕ ವೈವಿಧ್ಯತೆ, ಪಾರಂಪರಿಕ ಕಲೆ ಮತ್ತು ವಿಭಿನ್ನ ಆಹಾರ ಪದ್ಧತಿಗಳನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಮಾರುಕಟ್ಟೆ ಅವಕಾಶಗಳನ್ನು ಕಲ್ಪಿಸಲಾಗುತ್ತಿದೆ ಎಂದು ವಿವರಿಸಿದರು.
ರಾಜ್ಯದ ಸಮಗ್ರ ಅಭಿವೃದ್ಧಿಯಲ್ಲಿ ಅಲ್ಪಸಂಖ್ಯಾತರ ಸ್ವಾವಲಂಬನೆ ಕೂಡ ಅತ್ಯಂತ ಪ್ರಮುಖ ಭಾಗವಾಗಿದೆ. ಅಧಿಕಾರ ವಹಿಸಿಕೊಂಡ 115 ದಿನಗಳಲ್ಲಿ ನಮ್ಮ ಸರ್ಕಾರವು ಅಲ್ಪಸಂಖ್ಯಾತರ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡಿದೆ. ಅಲ್ಪಸಂಖ್ಯಾತ ಸಮುದಾಯದ 3 ಶಾಸಕರನ್ನು ಸಚಿವರನ್ನಾಗಿ, 1 ಶಾಸಕರನ್ನು ವಿಧಾನ ಪರಿಷತ್ ಸಭಾಪತಿ ಸ್ಥಾನಕ್ಕೆ ಹಾಗೂ 25 ಕ್ಕೂ ಹೆಚ್ಚು ಮಂದಿಯನ್ನು ವಿವಿಧ ನಿಗಮ ಮಂಡಳಿಗಳ ಅಧ್ಯಕ್ಷರನ್ನಾಗಿ ನೇಮಿಸಿ ನಮ್ಮ ಸರ್ಕಾರದಲ್ಲಿ ಸೂಕ್ತ ಪ್ರಾತಿನಿಧ್ಯ ನೀಡಲಾಗಿದೆ. ಕಲಬುರಗಿ ದರ್ಗಾದ ಪ್ರಮುಖ ನಾಯಕರಿಗೆ ವಕ್ಫ್ ಮಂಡಳಿಯ ಜವಾಬ್ದಾರಿ ನೀಡುವ ಮೂಲಕ ರಾಜ್ಯದ ಇತರೆ ಭಾಗಗಳ ನಾಯಕರಿಗೂ ಅವಕಾಶ ಕಲ್ಪಿಸಲಾಗಿದೆ ಎಂದು ಸಿಎಂ ಮಾಹಿತಿ ನೀಡಿದರು.
ಇದೇ ವೇಳೆ ಪ್ರಸಕ್ತ ನಡೆಯುತ್ತಿರುವ ವಿಶೇಷ ತೀವ್ರ ಮತದಾರರ ಪಟ್ಟಿ ಪರಿಷ್ಕರಣೆ (SIR) ಪ್ರಕ್ರಿಯೆ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿದ ಅವರು, ಅಲ್ಪಸಂಖ್ಯಾತ ಸಮುದಾಯದ ಮತದಾರರನ್ನು ಪಟ್ಟಿಯಿಂದ ಅಳಿಸಿಹಾಕುವ ದೊಡ್ಡ ಮಟ್ಟದ ಸಂಚು ನಡೆಯುತ್ತಿದೆ. ಯುವಕರು ಮತ್ತು ಅಲ್ಪಸಂಖ್ಯಾತರು ಈ ಬಗ್ಗೆ ತಕ್ಷಣ ಎಚ್ಚೆತ್ತುಕೊಂಡು, ತಮ್ಮ ಬದುಕಿನ ಹಕ್ಕಾದ ಮತದಾನದ ಹಕ್ಕನ್ನು ಕಡ್ಡಾಯವಾಗಿ ರಕ್ಷಿಸಿಕೊಳ್ಳಬೇಕು ಎಂದು ಎಚ್ಚರಿಕೆ ನೀಡಿದರು.
ಇದೇ ಬಾರಿಯ ಮೈಸೂರು ದಸರಾ ಮಹೋತ್ಸವಕ್ಕೆ ಬೈಲುಕುಪ್ಪೆಯ ಬೌದ್ಧ ಧರ್ಮೀಯರು ಸೇರಿದಂತೆ ರಾಜ್ಯದ ಎಲ್ಲಾ ಸಮುದಾಯದವರಿಗೂ ಸರ್ಕಾರದಿಂದ ವಿಶೇಷ ಆಹ್ವಾನ ನೀಡಲಾಗಿದೆ. ಅಲ್ಪಸಂಖ್ಯಾತರು ಮತ್ತು ಯುವಕರ ವಿದ್ಯಾಭ್ಯಾಸ ಹಾಗೂ ಕೌಶಲ್ಯ ಅಭಿವೃದ್ಧಿಗೆ ಉತ್ತೇಜನ ನೀಡಲು ಸರ್ಕಾರ ಹಲವು ವಿಶಿಷ್ಟ ಯೋಜನೆಗಳನ್ನು ರೂಪಿಸಿದೆ. ಯುವಕರು ಕೇವಲ ಉದ್ಯೋಗ ಅರಸುವವರಾಗದೆ, ನೀವೇ ಸ್ವತಃ ಹತ್ತಾರು ಜನರಿಗೆ ಉದ್ಯೋಗ ನೀಡುವ ಮಟ್ಟಕ್ಕೆ ಬೆಳೆಯಬೇಕು.
ಅದೇ ರೀತಿ ಮಹಿಳೆಯರು ಕೂಡ ಸ್ವಾವಲಂಬಿಗಳಾಗಿ, ಯಶಸ್ವಿ ಉದ್ಯಮಿಗಳಾಗಿ ಹೊರಹೊಮ್ಮಿ ಆರ್ಥಿಕವಾಗಿ ಸಬಲರಾಗಬೇಕು. ಸಮಾಜದ ಎಲ್ಲಾ ವರ್ಗದ ಜನರ ಬದುಕಿಗೆ ಆರ್ಥಿಕ ಶಕ್ತಿ ತುಂಬುವ ಬದ್ಧತೆಯೊಂದಿಗೆ ನಮ್ಮ ಸರ್ಕಾರವು ಪ್ರತಿ ವರ್ಷ ಬರೋಬ್ಬರಿ 1.20 ಲಕ್ಷ ಕೋಟಿ ರೂಪಾಯಿಗಳನ್ನು ಗ್ಯಾರಂಟಿ ಹಾಗೂ ಕಲ್ಯಾಣ ಯೋಜನೆಗಳಿಗಾಗಿ ವಿನಿಯೋಗಿಸುತ್ತಿದೆ. ಆ ಮೂಲಕ ಪ್ರತಿಯೊಬ್ಬರ ಬದುಕಿನಲ್ಲಿ ಶಕ್ತಿ ತುಂಬುವ ಕೆಲಸ ಮಾಡಲಾಗುತ್ತಿದೆ ಎಂದು ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.
