ನವದೆಹಲಿ: ಗಣರಾಜ್ಯೋತ್ಸವದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರವು ದೇಶಾದ್ಯಂತ ಒಟ್ಟು 982 ಪೊಲೀಸ್ ಸಿಬ್ಬಂದಿಗೆ ಸೇವಾ ಪದಕಗಳನ್ನು ಘೋಷಿಸಿದ್ದು, ಇದರಲ್ಲಿ ಕರ್ನಾಟಕ ಪೊಲೀಸ್ ಇಲಾಖೆಯ ದಕ್ಷ ಅಧಿಕಾರಿಗಳಿಗೆ ವಿಶೇಷ ಗೌರವ ಲಭಿಸಿದೆ.
ರಾಜ್ಯದ ಇಬ್ಬರು ಹಿರಿಯ ಅಧಿಕಾರಿಗಳಾದ ಐಪಿಎಸ್ ದೇವಜ್ಯೋತಿ ರೇ ಮತ್ತು ಎಸಿಪಿ ರಂಗಪ್ಪ ಅವರು ತಮ್ಮ ಅತ್ಯುತ್ತಮ ಹಾಗೂ ವಿಶಿಷ್ಟ ಸೇವೆಗಾಗಿ ಪ್ರತಿಷ್ಠಿತ ‘ರಾಷ್ಟ್ರಪತಿ ವಿಶಿಷ್ಟ ಸೇವಾ ಪದಕ’ಕ್ಕೆ (PSM) ಭಾಜನರಾಗಿದ್ದಾರೆ. ಇವರೊಂದಿಗೆ ರಾಜ್ಯದ ಇತರ 20 ಅಧಿಕಾರಿಗಳಿಗೆ ‘ಶ್ಲಾಘನೀಯ ಸೇವಾ ಪದಕ’ (MSM) ಘೋಷಿಸಲಾಗಿದ್ದು, ಈ ಮೂಲಕ ಒಟ್ಟು 22 ಅಧಿಕಾರಿಗಳು ಈ ಬಾರಿ ಪದಕದ ಗೌರವಕ್ಕೆ ಪಾತ್ರರಾಗಿದ್ದಾರೆ.
ರಾಷ್ಟ್ರೀಯ ಮಟ್ಟದಲ್ಲಿ ಜಮ್ಮು ಮತ್ತು ಕಾಶ್ಮೀರ ಅತಿ ಹೆಚ್ಚು ಶೌರ್ಯ ಪದಕಗಳನ್ನು ಪಡೆದಿದ್ದರೆ, ಕರ್ನಾಟಕದ ಅಧಿಕಾರಿಗಳು ತಮ್ಮ ಶಿಸ್ತುಬದ್ಧ ಸೇವೆಯ ಮೂಲಕ ಇಲಾಖೆಯ ಹೆಸರನ್ನು ರಾಷ್ಟ್ರಮಟ್ಟದಲ್ಲಿ ಬೆಳಗಿಸಿದ್ದಾರೆ. ಕರ್ತವ್ಯನಿಷ್ಠೆಗೆ ಸಂದ ಈ ಅತ್ಯುನ್ನತ ಪುರಸ್ಕಾರವು ಇಡೀ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
