ಬೆಂಗಳೂರು: ನವೆಂಬರ್ 1ರ ಕನ್ನಡ ರಾಜ್ಯೋತ್ಸವದಂದು ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಪರಭಾಷಾ ಚಿತ್ರಗಳನ್ನು ನಿಷೇಧಿಸಿ, ಕಡ್ಡಾಯವಾಗಿ ಕನ್ನಡ ಸಿನಿಮಾಗಳನ್ನೇ ಪ್ರದರ್ಶಿಸಬೇಕು ಎಂದು ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಆಗ್ರಹಿಸಿದ್ದಾರೆ.
ನವೆಂಬರ್ 1ರಿಂದ ತಿಂಗಳ ಪೂರ್ತಿ ರಾಜ್ಯದ ಎಲ್ಲಾ ಚಿತ್ರಮಂದಿರಗಳಲ್ಲಿ ಕನ್ನಡ ಚಿತ್ರಗಳನ್ನೇ ಬಿಡುಗಡೆ ಹಾಗೂ ಪ್ರದರ್ಶನ ಮಾಡಬೇಕು. ಈ ಕುರಿತು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಸರ್ಕಾರವು ಚಿತ್ರಮಂದಿರಗಳಿಗೆ ಕೂಡಲೇ ಕಡ್ಡಾಯ ಆದೇಶ ಹೊರಡಿಸಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಬೆಂಗಳೂರು ನಗರದ ಅನೇಕ ಚಿತ್ರಮಂದಿರಗಳಲ್ಲಿ ನವೆಂಬರ್ 1ರಂದೂ ಸಹ ಪರಭಾಷೆ ಚಿತ್ರಗಳನ್ನು ಪ್ರದರ್ಶಿಸುವ ಮೂಲಕ ಕನ್ನಡಕ್ಕೆ ಗೌರವ ನೀಡುತ್ತಿಲ್ಲ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನವೆಂಬರ್ 1ರಂದು ಎಲ್ಲಾ ಶೋಗಳಲ್ಲೂ ಕನ್ನಡ ಚಿತ್ರವೇ ಪ್ರದರ್ಶನಗೊಳ್ಳಬೇಕು. ಒಂದು ವೇಳೆ ಪರಭಾಷಾ ಚಿತ್ರಗಳನ್ನು ಪ್ರದರ್ಶಿಸಿದರೆ ಆ ಶೋಗಳನ್ನು ರದ್ದುಪಡಿಸಲಾಗುವುದು ಮತ್ತು ಮುಂದೆ ಉಂಟಾಗುವ ಅನಾಹುತಗಳಿಗೆ ಸರ್ಕಾರವೇ ನೇರ ಹೊಣೆಯಾಗಬೇಕಾಗುತ್ತದೆ ಎಂದು ಕರವೇ ಎಚ್ಚರಿಕೆ ನೀಡಿದೆ.
