S Shorts

ರಾಜ್ಯಕ್ಕೂ ತಟ್ಟಿದ S.I.R ಬಿಸಿ: 80 ಲಕ್ಷಕ್ಕೂ ಅಧಿಕ ಮತದಾರರ ಹೆಸರಿಗೆ ಕೊಕ್ ಬೀಳುವ ಸಾಧ್ಯತೆ?

ರಾಜ್ಯಕ್ಕೂ ತಟ್ಟಿದ S.I.R ಬಿಸಿ: 80 ಲಕ್ಷಕ್ಕೂ ಅಧಿಕ ಮತದಾರರ ಹೆಸರಿಗೆ ಕೊಕ್ ಬೀಳುವ ಸಾಧ್ಯತೆ?
Author: Sagaradventure
Posted By: Sagaradventure
Updated: Jul 30, 2026 | 9:43 AM

ಪಶ್ಚಿಮ ಬಂಗಾಳ ಹಾಗೂ ಬಿಹಾರ ರಾಜ್ಯಗಳ ಬೆನ್ನಲ್ಲೇ ಇದೀಗ ಕರ್ನಾಟಕದಲ್ಲೂ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್.ಐ.ಆರ್) ಪ್ರಕ್ರಿಯೆಯ ಬಿಸಿ ಜೋರಾಗಿ ತಟ್ಟಿದೆ. ಜೂನ್ 30ರಂದು ರಾಜ್ಯಾದ್ಯಂತ ಆರಂಭಗೊಂಡಿದ್ದ ಈ ಮಹತ್ವದ ಕಾರ್ಯವು ಅಂತಿಮ ಹಂತ ತಲುಪಿದ್ದು, ಆಗಸ್ಟ್ 8ರಂದು ಮುಕ್ತಾಯಗೊಳ್ಳಲಿದೆ.

ರಾಜ್ಯದಲ್ಲಿರುವ ಒಟ್ಟು 5.54 ಕೋಟಿ ಮತದಾರರ ಪೈಕಿ 59,050 ಮತಗಟ್ಟೆಗಳ ವ್ಯಾಪ್ತಿಯಲ್ಲಿ ಪರಿಶೀಲನೆ ನಡೆಸಲಾಗಿದ್ದು, ಈ ವೇಳೆ ಬರೋಬ್ಬರಿ 86.64 ಲಕ್ಷಕ್ಕೂ ಅಧಿಕ ಮತದಾರರನ್ನು ‘ಎಎಸ್‌ಡಿಡಿಒ’ (ಗೈರುಹಾಜರು, ಸ್ಥಳಾಂತರ, ಮೃತ, ದ್ವಿಪ್ರತಿ ಮತ್ತು ಇತರರು) ವರ್ಗಕ್ಕೆ ಸೇರಿಸಲಾಗಿದೆ. ಇದರಿಂದಾಗಿ ಲಕ್ಷಾಂತರ ನೈಜ ಮತದಾರರು ಪಟ್ಟಿಯಿಂದ ಹೊರಗುಳಿಯುವ ಆತಂಕ ಎದುರಾಗಿದ್ದು, ಮತದಾರರ ಹೆಸರು ಕೈಬಿಟ್ಟು ಹೋಗುತ್ತಿರುವ ಬಗ್ಗೆ ಖುದ್ದು ರಾಜ್ಯದ ಮುಖ್ಯ ಚುನಾವಣಾ ಆಯುಕ್ತರು ಮಾಹಿತಿ ಹಂಚಿಕೊಂಡಿದ್ದಾರೆ.

ಚುನಾವಣಾ ಆಯೋಗ ನೀಡಿರುವ ಎಎಸ್‌ಡಿಡಿಒ (ASDDO) ವರ್ಗೀಕರಣದ ನಿಖರ ವಿವರಗಳ ಪ್ರಕಾರ, ರಾಜ್ಯದಲ್ಲಿ ಶಾಶ್ವತವಾಗಿ ಕ್ಷೇತ್ರ ಬದಲಾಯಿಸಿದ ಸ್ಥಳಾಂತರಗೊಂಡ ಮತದಾರರ ಸಂಖ್ಯೆ 53.39 ಲಕ್ಷ (ಶೇಕಡಾ 9.63) ತಲುಪಿದೆ. ಇನ್ನು ಮರಣ ಪ್ರಮಾಣಪತ್ರ ಹಾಗೂ ಸ್ಥಳ ಮಹಜರು ಆಧಾರದ ಮೇಲೆ ಗುರುತಿಸಲಾದ ಮೃತ ಮತದಾರರ ಸಂಖ್ಯೆ 15.14 ಲಕ್ಷ (ಶೇಕಡಾ 2.73) ತಲುಪಿದ್ದರೆ, ನೀಡಿದ ವಿಳಾಸದಲ್ಲಿ ಪತ್ತೆಯಾಗದವರ ಸಂಖ್ಯೆ 11.92 ಲಕ್ಷ (ಶೇಕಡಾ 2.15) ಇದೆ.

ಇದಲ್ಲದೆ ಒಂದಕ್ಕಿಂತ ಹೆಚ್ಚು ಕಡೆಗಳಲ್ಲಿ ಹೆಸರಿರುವ ದ್ವಿಪ್ರತಿ ಮತದಾರರ ಸಂಖ್ಯೆ 5.74 ಲಕ್ಷ (ಶೇಕಡಾ 1.04) ಹಾಗೂ ನಮೂನೆ ಭರ್ತಿ ಮಾಡಲು ಒಪ್ಪದವರ ಸಂಖ್ಯೆ 42,725 (ಶೇಕಡಾ 0.08) ಎಂದು ದಾಖಲಾಗಿದೆ. ನಿಖರ ಮಾಹಿತಿಯ ಕೊರತೆಯಿಂದ ಈ ಪಟ್ಟಿಗೆ ಸೇರಿರುವ ಇವರೆಲ್ಲರೂ ಸದ್ಯಕ್ಕೆ ಅಂತಿಮ ಪಟ್ಟಿಯಿಂದ ಹೊರಗುಳಿಯುವ ಭೀತಿಯಲ್ಲಿದ್ದಾರೆ.

ಜಿಲ್ಲಾವಾರು ವಿವರಗಳನ್ನು ಗಮನಿಸಿದರೆ, ರಾಜಧಾನಿ ಬೆಂಗಳೂರಿನ ಜಿಬಿಎ ವ್ಯಾಪ್ತಿಯ 28 ವಿಧಾನಸಭಾ ಕ್ಷೇತ್ರಗಳಲ್ಲಿ ಬರೋಬ್ಬರಿ 40.39 ಲಕ್ಷ ಎಎಸ್‌ಡಿಡಿಒ ಮತದಾರರನ್ನು ಗುರುತಿಸಲಾಗಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಕಡಿತ ಭೀತಿ ಬೆಂಗಳೂರಿಗೆ ಎದುರಾಗಿದೆ. ಉಳಿದಂತೆ ಮೈಸೂರು ಜಿಲ್ಲೆಯಲ್ಲಿ 4.31 ಲಕ್ಷ, ಕಲಬುರಗಿಯಲ್ಲಿ 3.86 ಲಕ್ಷ, ಬೆಳಗಾವಿಯಲ್ಲಿ 3.65 ಲಕ್ಷ, ವಿಜಯಪುರದಲ್ಲಿ 2.27 ಲಕ್ಷ, ಧಾರವಾಡದಲ್ಲಿ 2.18 ಲಕ್ಷ ಹಾಗೂ ರಾಯಚೂರು ಜಿಲ್ಲೆಯಲ್ಲಿ 2.16 ಲಕ್ಷ ಮತದಾರರು ಈ ವರ್ಗಕ್ಕೆ ಸೇರಿದ್ದಾರೆ.

ಆಯೋಗದ ಈ ವರದಿಯಿಂದ ರಾಜ್ಯಾದ್ಯಂತ ಆತಂಕ ಸೃಷ್ಟಿಯಾಗಿದ್ದರೂ, ಸೂಕ್ತ ದಾಖಲೆಗಳ ಹೊಂದಾಣಿಕೆ ಹಾಗೂ ತೀವ್ರ ಪರಿಶೀಲನೆಯ ನಂತರ ನೈಜ ಮತದಾರರಿಗೆ ಮರಳಿ ಪಟ್ಟಿಗೆ ಸೇರ್ಪಡೆಯಾಗಲು ಅವಕಾಶ ಸಿಗಲಿದೆ.