S Shorts

ರಾಜ್ಯದಲ್ಲಿ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ: ಸೆಪ್ಟೆಂಬರ್ 20ರ ನಂತರ ಮತ್ತಷ್ಟು ಚುರುಕು!

ರಾಜ್ಯದಲ್ಲಿ ಹಲವೆಡೆ ಗುಡುಗು ಸಹಿತ ಮಳೆ ಸಾಧ್ಯತೆ: ಸೆಪ್ಟೆಂಬರ್ 20ರ ನಂತರ ಮತ್ತಷ್ಟು ಚುರುಕು!
Author: Sagaradventure
Posted By: Sagaradventure
Updated: Sep 16, 2026 | 3:29 PM

ಸೆಪ್ಟೆಂಬರ್ 17ರ ಬೆಳಿಗ್ಗೆ 8 ಗಂಟೆಯವರೆಗಿನ ಹವಾಮಾನ ಮುನ್ಸೂಚನೆಯಂತೆ ರಾಜ್ಯದ ಹಲವು ಜಿಲ್ಲೆಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ. ಶ್ರೀಲಂಕಾ ಕರಾವಳಿಯಲ್ಲಿ ಉಂಟಾಗಿದ್ದ ವಾಯುಭಾರ ಕುಸಿತವು ಅಂಡಮಾನ್ ಸಮೀಪ ದುರ್ಬಲಗೊಳ್ಳುವ ಲಕ್ಷಣಗಳಿದ್ದು, ಸೆಪ್ಟೆಂಬರ್ 19 ರಂದು ಮ್ಯಾನ್ಮಾರ್ ಪಶ್ಚಿಮ ಕರಾವಳಿಯಲ್ಲಿ ಮತ್ತೊಂದು ವಾಯುಭಾರ ಕುಸಿತ ಉಂಟಾಗುವ ನಿರೀಕ್ಷೆಯಿದೆ. ಈ ವ್ಯವಸ್ಥೆಯು ಚಂಡಮಾರುತವಾಗಿ ಪರಿವರ್ತನೆಗೊಂಡು ಒಡಿಶಾ ಕರಾವಳಿಯತ್ತ ಸಾಗಲಿದ್ದು, ಇದರ ಪ್ರಭಾವದಿಂದ ರಾಜ್ಯದಲ್ಲಿ ಸೆಪ್ಟೆಂಬರ್ 20 ರ ನಂತರ ಮಳೆಯ ಪ್ರಮಾಣ ಹೆಚ್ಚಾಗುವ ಮುನ್ಸೂಚನೆಯಿದೆ.

ಕರಾವಳಿ ಭಾಗದಲ್ಲಿ ಕಾಸರಗೋಡು ಸೇರಿದಂತೆ ರಾಜ್ಯದ ಕರಾವಳಿ ಜಿಲ್ಲೆಗಳಲ್ಲಿ ತೀವ್ರ ಸೆಖೆ ಮತ್ತು ಬಿಸಿಲಿನ ವಾತಾವರಣದ ಜೊತೆಗೆ ಅಲ್ಲಲ್ಲಿ ಮೋಡ ಕವಿಯಲಿದೆ. ಸಂಜೆಯ ವೇಳೆಗೆ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳಲ್ಲಿ ಗುಡುಗು ಸಹಿತ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ಮ್ಯಾನ್ಮಾರ್ ಕರಾವಳಿಯಲ್ಲಿ ಚಂಡಮಾರುತ ರೂಪುಗೊಂಡರೆ ಕರಾವಳಿ ಜಿಲ್ಲೆಗಳಲ್ಲಿ ಸೆಪ್ಟೆಂಬರ್ 21 ರಿಂದ ಉತ್ತಮ ಮಳೆ ಆರಂಭವಾಗುವ ಲಕ್ಷಣಗಳಿವೆ. 

ಇನ್ನು ಮಲೆನಾಡು ಭಾಗದ ಕೊಡಗು, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಸಂಜೆ ವೇಳೆ ಅಲ್ಲಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಸಕಲೇಶಪುರ ಭಾಗದಲ್ಲಿ ತುಂತುರು ಮಳೆಯ ಮುನ್ಸೂಚನೆ ನೀಡಲಾಗಿದೆ. ಸೆಪ್ಟೆಂಬರ್ 20ರ ತನಕ ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಬಳಿಕ ಮಳೆಯ ಅಬ್ಬರ ಹೆಚ್ಚಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಹಾವೇರಿ, ಗದಗ, ಬಾಗಲಕೋಟೆ, ವಿಜಯಪುರ, ಕಲಬುರ್ಗಿ, ರಾಯಚೂರು ಹಾಗೂ ಬೀದರ್ ಜಿಲ್ಲೆಗಳಲ್ಲಿ ಸಂಜೆ ಅಥವಾ ರಾತ್ರಿಯ ವೇಳೆ ಗುಡುಗು ಸಹಿತ ಸಾಧಾರಣ ಮಳೆಯಾಗಲಿದೆ. ಉಳಿದ ಜಿಲ್ಲೆಗಳಲ್ಲಿ ಗಾಳಿಯ ಒತ್ತಡ ಹೆಚ್ಚಿದ್ದರೆ ಮಾತ್ರ ಮಳೆಯ ನಿರೀಕ್ಷೆಯಿದ್ದು, ಸೆಪ್ಟೆಂಬರ್ 18 ರಿಂದಲೇ ಉತ್ತರ ಒಳನಾಡಿನಲ್ಲಿ ಮಳೆಯ ವ್ಯಾಪ್ತಿ ವಿಸ್ತರಿಸಲಿದೆ. 

ದಕ್ಷಿಣ ಒಳನಾಡಿನ ಮೈಸೂರಿನ ಒಂದೆರಡು ಕಡೆ ಹಾಗೂ ಹಾಸನ, ಚಾಮರಾಜನಗರದ ಕೊಳ್ಳೇಗಾಲ, ಬೆಂಗಳೂರು ನಗರ ಮತ್ತು ಗ್ರಾಮಾಂತರ, ಕೋಲಾರ, ಚಿಕ್ಕಬಳ್ಳಾಪುರ ಜಿಲ್ಲೆಗಳಲ್ಲಿ ಸಂಜೆ ಮತ್ತು ರಾತ್ರಿ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ದಕ್ಷಿಣ ಒಳನಾಡಿನಲ್ಲಿ ಮುಂದಿನ ಕೆಲವು ದಿನಗಳು ಇದೇ ರೀತಿಯ ವಾತಾವರಣ ಮುಂದುವರಿಯಲಿದ್ದು, ಸೆಪ್ಟೆಂಬರ್ 20 ರಿಂದ ಮಳೆಯ ಪ್ರಮಾಣ ತೀವ್ರಗೊಳ್ಳುವ ನಿರೀಕ್ಷೆಯಿದೆ. ಆದರೆ, ಬಂಗಾಳಕೊಲ್ಲಿ ಹಾಗೂ ಮ್ಯಾನ್ಮಾರ್ ಭಾಗದಲ್ಲಿ ಉಂಟಾಗುವ ವಾಯುಭಾರ ಕುಸಿತ ಅಥವಾ ಚಂಡಮಾರುತವು ನಿರೀಕ್ಷೆಗಿಂತ ಮುಂಚಿತವಾಗಿಯೇ ದುರ್ಬಲಗೊಂಡಲ್ಲಿ ರಾಜ್ಯದಲ್ಲಿ ಮಳೆಯ ಪ್ರಮಾಣ ಕಡಿಮೆಯಾಗುವ ಸಾಧ್ಯತೆಯೂ ಇರಲಿದೆ ಎಂದು ಹವಾಮಾನ ವರದಿ ತಿಳಿಸಿದೆ.