ಬೆಂಗಳೂರು: ಅಕ್ಟೋಬರ್ 30ರ ಬೆಳಿಗ್ಗೆ 8 ಗಂಟೆವರೆಗಿನ ಹವಾಮಾನ ಮುನ್ಸೂಚನೆಯಂತೆ, ರಾಜ್ಯಾದ್ಯಂತ ಚಳಿಯ ಪ್ರಮಾಣ ಕಡಿಮೆಯಾಗಿದೆ. ‘ಅರ್ನಬ್’ ಚಂಡಮಾರುತದ ಪರಿಣಾಮದಿಂದಾಗಿ ಅಲ್ಲಲ್ಲಿ ಮೋಡ ಕವಿದ ವಾತಾವರಣ ನಿರ್ಮಾಣವಾಗಿದ್ದು, ಅಕ್ಟೋಬರ್ 31ರಿಂದ ರಾಜ್ಯದ ವಿವಿಧೆಡೆ ಮಳೆಯಾಗುವ ನಿರೀಕ್ಷೆಗಳಿವೆ.
ಕರಾವಳಿ ಹಾಗೂ ಮಲೆನಾಡಲ್ಲಿ ತುಂತುರು ಮಳೆ:
ಕರಾವಳಿಯ ಕಾಸರಗೋಡು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಸಂಜೆ ವೇಳೆಗೆ ಮೋಡದ ಪ್ರಮಾಣ ಹೆಚ್ಚಿರುವ ಸಾಧ್ಯತೆಗಳಿವೆ. ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳ ಘಟ್ಟದ ಕೆಳಗಿನ ಪ್ರದೇಶಗಳ ಒಂದೆರಡು ಕಡೆ ತುಂತುರು ಮಳೆಯಾಗುವ ಸಾಧ್ಯತೆಯಿದೆ. ಮಲೆನಾಡಿನ ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ ಸುತ್ತಮುತ್ತ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ, ಬಾಳೆಹೊನ್ನೂರು, ಶೃಂಗೇರಿ ಭಾಗಗಳಲ್ಲಿ ಸಂಜೆ ಅಥವಾ ರಾತ್ರಿ ಒಂದೆರಡು ಕಡೆ ತುಂತುರು ಮಳೆಯಾಗುವ ಮುನ್ಸೂಚನೆ ಇದೆ.
ನ.2ಕ್ಕೆ ಆಂಧ್ರ ಕರಾವಳಿಗೆ ಹೊಸ ಚಂಡಮಾರುತ:
ಒಂದೆಡೆ ‘ಅರ್ನಬ್’ ಚಂಡಮಾರುತವು ಉತ್ತರ ದಿಕ್ಕಿನತ್ತ ಚಲಿಸುತ್ತಿರುವಾಗಲೇ, ದಕ್ಷಿಣ ಥೈಲ್ಯಾಂಡ್‌ನ ಪಶ್ಚಿಮ ತೀರದಲ್ಲಿ ಹೊಸದಾಗಿ ಸುಳಿಗಾಳಿ (ತಿರುಗುವಿಕೆ) ಆರಂಭವಾಗಿದೆ. ಇದು ನವೆಂಬರ್ 2ರಂದು ಆಂಧ್ರಪ್ರದೇಶದ ವಿಶಾಖಪಟ್ಟಣಂ ಕರಾವಳಿಗೆ ಚಂಡಮಾರುತವಾಗಿ ಪರಿವರ್ತನೆಗೊಂಡು ಅಪ್ಪಳಿಸುವ ನಿರೀಕ್ಷೆಯಿದೆ.
ಇದರ ಪರಿಣಾಮವಾಗಿ ಅರಬ್ಬಿ ಸಮುದ್ರ ಹಾಗೂ ಹಿಂದೂ ಮಹಾಸಾಗರದ ಕಡೆಯಿಂದ ತೇವಾಂಶ ಭರಿತ ಗಾಳಿ ಸೆಳೆಯಲ್ಪಟ್ಟು, ಆಂಧ್ರದ ಮೂಲಕ ರಾಜ್ಯದ ಕಡೆಗೆ ಬೀಸುವ ಸಾಧ್ಯತೆಗಳಿವೆ. ಈ ಬದಲಾವಣೆಗಳಿಂದಾಗಿ ಅಕ್ಟೋಬರ್ 31ರಿಂದಲೇ ರಾಜ್ಯದಲ್ಲಿ ಮತ್ತೆ ವರ್ಷಧಾರೆ ಆರಂಭವಾಗಲಿದೆ ಎಂದು ಹವಾಮಾನ ವರದಿ ತಿಳಿಸಿದೆ.
