ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (ಕೆಐಎ) ಪ್ರಯಾಣಿಕರನ್ನು ಸಂಪರ್ಕಿಸಿ ಭಿಕ್ಷೆ ಕೇಳುವ ನೆಪದಲ್ಲಿ ಡಿಜಿಟಲ್ ಪೇಮೆಂಟ್ ಮೂಲಕ ಹಣ ವಸೂಲಿ ಮಾಡುತ್ತಿದ್ದ ಖತರ್ನಾಕ್ ವ್ಯಕ್ತಿಯೊಬ್ಬನನ್ನು ಭದ್ರತಾ ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ. ದೇವನಹಳ್ಳಿ ಸಮೀಪದ ವಿಮಾನ ನಿಲ್ದಾಣದ ಟರ್ಮಿನಲ್-1ರ ಬಫೆಲೋ ವಿಂಗ್ಸ್ ಬಳಿ ಈ ಘಟನೆ ನಡೆದಿದ್ದು, ಆರೋಪಿಯನ್ನು ಅಮಿನ್ ಎಂದು ಗುರುತಿಸಲಾಗಿದೆ.
ಮೊಬೈಲ್ ಪರಿಶೀಲಿಸಿದಾಗ ಬಯಲಾಯ್ತು ಅಸಲಿಯತ್ತು
ಅಮಿನ್ ಎಂಬಾತ ವಿಮಾನ ನಿಲ್ದಾಣದಲ್ಲಿ ವಿಮಾನಕ್ಕಾಗಿ ಕಾಯುತ್ತಿದ್ದ ಪ್ರಯಾಣಿಕರ ಬಳಿ ತೆರಳಿ ಕರುಣೆ ಗಿಟ್ಟಿಸುವ ಮೂಲಕ ಹಣಕ್ಕೆ ಬೇಡಿಕೆ ಇಡುತ್ತಿದ್ದ. ಈತನ ವರ್ತನೆ ಹಾಗೂ ಚಟುವಟಿಕೆಗಳ ಬಗ್ಗೆ ಅನುಮಾನಗೊಂಡ ವಿಮಾನ ನಿಲ್ದಾಣದ ಭದ್ರತಾ ಸಿಬ್ಬಂದಿ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಈ ವೇಳೆ ಆತನ ಮೊಬೈಲ್ ಪರಿಶೀಲಿಸಿದಾಗ ಅಧಿಕಾರಿಗಳೇ ದಂಗಾಗಿದ್ದಾರೆ. ವಿವಿಧ ಪೇಮೆಂಟ್ ಸ್ಕ್ಯಾನರ್‌ಗಳ ಮೂಲಕ ಆತ ಪ್ರಯಾಣಿಕರಿಂದ ಹಣ ಪಡೆದಿರುವ ಮಾಹಿತಿ ಹಾಗೂ ಆನ್‌ಲೈನ್ ಮೂಲಕ ನಡೆದಿರುವ ಹಲವು ಹಣಕಾಸಿನ ವಹಿವಾಟುಗಳು ಪತ್ತೆಯಾಗಿವೆ.
ದೆಹಲಿ, ಮುಂಬೈನಲ್ಲೂ ವಸೂಲಿ!
ವಿಚಾರಣೆ ವೇಳೆ, ಈತ ಕೇವಲ ಬೆಂಗಳೂರು ಮಾತ್ರವಲ್ಲದೆ ಮುಂಬೈ, ದೆಹಲಿ ಸೇರಿದಂತೆ ದೇಶದ ವಿವಿಧ ಪ್ರಮುಖ ವಿಮಾನ ನಿಲ್ದಾಣಗಳಲ್ಲಿಯೂ ಇದೇ ರೀತಿ ಹೈಟೆಕ್ ಭಿಕ್ಷಾಟನೆ ಹಾಗೂ ಹಣ ವಸೂಲಿಗೆ ಯತ್ನಿಸಿದ್ದಾನೆ ಎಂಬ ಗಂಭೀರ ಆರೋಪ ಕೇಳಿಬಂದಿದೆ. ಆತನ ಬಳಿ ಮುಂಬೈನಿಂದ ಬೆಂಗಳೂರಿಗೆ ಇಂಡಿಗೋ ವಿಮಾನದಲ್ಲಿ ಪ್ರಯಾಣಿಸಲು ಟಿಕೆಟ್ ಬುಕ್ ಮಾಡಿರುವ ದಾಖಲೆ ಕೂಡ ಪತ್ತೆಯಾಗಿದೆ. ವಿಮಾನಗಳಲ್ಲಿಯೇ ಓಡಾಡಿಕೊಂಡು ಈತ ಈ ಕೃತ್ಯ ಎಸಗುತ್ತಿದ್ದಾನೆ ಎಂಬ ಅನುಮಾನ ವ್ಯಕ್ತವಾಗಿದೆ.
ಪೊಲೀಸರ ವಶಕ್ಕೆ ಆರೋಪಿ, ತನಿಖೆ ಚುರುಕು
ಪ್ರಾಥಮಿಕ ವಿಚಾರಣೆ ನಡೆಸಿದ ಸಿಐಎಸ್‌ಎಫ್ (CISF) ಸಿಬ್ಬಂದಿಯು ಆರೋಪಿ ಅಮಿನ್‌ನನ್ನು ಹೆಚ್ಚಿನ ತನಿಖೆಗಾಗಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ (KIA) ಪೊಲೀಸರಿಗೆ ಹಸ್ತಾಂತರಿಸಿದ್ದಾರೆ. ಆತನ ಮೊಬೈಲ್‌ನಲ್ಲಿ ಪತ್ತೆಯಾಗಿರುವ ಹಣಕಾಸಿನ ವಹಿವಾಟುಗಳ ಹಿಂದಿನ ಅಸಲಿ ಉದ್ದೇಶವೇನು? ಈವರೆಗೆ ಮುಗ್ಧ ಪ್ರಯಾಣಿಕರಿಂದ ಆತ ಎಷ್ಟು ಹಣ ಲಪಟಾಯಿಸಿದ್ದಾನೆ? ಮತ್ತು ಈತನ ಚಟುವಟಿಕೆಗಳ ಹಿಂದೆ ಬೇರೆ ಯಾವುದಾದರೂ ಜಾಲವಿದೆಯೇ ಎಂಬ ಬಗ್ಗೆ ಪೊಲೀಸರು ತೀವ್ರ ತನಿಖೆ ಮುಂದುವರಿಸಿದ್ದಾರೆ.
