ಬೆಂಗಳೂರು: ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವರದಿಯಾಗಿದ್ದ ಮಹಿಳೆಯೊಬ್ಬರ ನಿಗೂಢ ಸಾವು ಈಗ ಭೀಕರ ತಿರುವು ಪಡೆದುಕೊಂಡಿದೆ. ಮೊದಲು ಇದೊಂದು ಕೊಲೆ ಎಂದು ಶಂಕಿಸಲಾಗಿತ್ತಾದರೂ, ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಆಟೋ ಚಾಲಕನೊಬ್ಬನ ಅತಿಮಾನುಷ ವರ್ತನೆ ಬೆಳಕಿಗೆ ಬಂದಿದೆ.
ಮೃತ ದುರ್ದೈವಿಯನ್ನು ಕೆಂಗೇರಿ ಉಪನಗರದ ನಿವಾಸಿ ಕೆಂಪಮ್ಮ (50) ಎಂದು ಗುರುತಿಸಲಾಗಿದೆ. ಕಳೆದ ಭಾನುವಾರ ರಾತ್ರಿ ಕೆಂಪಮ್ಮ ಅವರು ರಸ್ತೆ ದಾಟುತ್ತಿದ್ದಾಗ ವೇಗವಾಗಿ ಬಂದ ಆಟೋವೊಂದು ಅವರಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕೆಂಪಮ್ಮ ಅವರು ಗಂಭೀರವಾಗಿ ಗಾಯಗೊಂಡಿದ್ದರು. ಅಪಘಾತದ ಬಳಿಕ ಸ್ಥಳೀಯರು ಸೇರುತ್ತಿದ್ದಂತೆ, ತಾನೇ ಆಸ್ಪತ್ರೆಗೆ ಕರೆದೊಯ್ಯುವುದಾಗಿ ಹೇಳಿ ಕೆಂಪಮ್ಮ ಅವರನ್ನು ಆಟೋ ಚಾಲಕ ಹತ್ತಿಸಿಕೊಂಡಿದ್ದಾನೆ.
ಆಸ್ಪತ್ರೆಗೆ ಕರೆದೊಯ್ಯುವ ಬದಲು, ಮಾರ್ಗಮಧ್ಯೆ ಕೆಂಪಮ್ಮ ಅವರು ಮೃತಪಟ್ಟಿರಬಹುದು ಎಂದು ಭಾವಿಸಿದ ಅಥವಾ ಚಿಕಿತ್ಸಾ ವೆಚ್ಚ ಮತ್ತು ಕೇಸಿಗೆ ಹೆದರಿದ ಚಾಲಕ, ಅವರನ್ನು ಮೈಲಸಂದ್ರದ ಬಳಿಯ ರಸ್ತೆ ಬದಿಯ ಕಸದ ರಾಶಿಯಲ್ಲಿ (Garbage)ಎಸೆದು ಪರಾರಿಯಾಗಿದ್ದಾನೆ. ರಸ್ತೆ ಬದಿಯಲ್ಲಿ ಶವ ಪತ್ತೆಯಾದಾಗ ಪೊಲೀಸರು ಕೊಲೆ ಇರಬಹುದೆಂದು ಶಂಕಿಸಿ ತನಿಖೆ ಆರಂಭಿಸಿದ್ದರು. ಆದರೆ, ಸುತ್ತಮುತ್ತಲಿನ ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸಿದಾಗ ಆಟೋ ಅಪಘಾತ ಸಂಭವಿಸಿರುವುದು ಮತ್ತು ನಂತರ ಚಾಲಕ ಶವವನ್ನು ಕಸದ ರಾಶಿಗೆ ಎಸೆಯುತ್ತಿರುವ ದೃಶ್ಯ ಪತ್ತೆಯಾಗಿದೆ.
ಕೆಂಗೇರಿ ಪೊಲೀಸರು ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದು, ಸದ್ಯ ತಲೆಮರೆಸಿಕೊಂಡಿರುವ ಕಿರಾತಕ ಆಟೋ ಚಾಲಕನಿಗಾಗಿ ಬಲೆ ಬೀಸಿದ್ದಾರೆ. ಮೃತ ಕೆಂಪಮ್ಮ ಅವರ ಕುಟುಂಬಸ್ಥರ ಆಕ್ರೋಶ ಮುಗಿಲು ಮುಟ್ಟಿದ್ದು, ಆರೋಪಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಒತ್ತಾಯಿಸಿದ್ದಾರೆ.
