ಕೊಡಗು: ಧಾರಾಕಾರ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿರುವ ಕೊಡಗು ಜಿಲ್ಲೆಯ ಜಲಪಾತಗಳಲ್ಲಿ ಪ್ರವಾಸಿಗರ ಹುಚ್ಚಾಟ ಮಿತಿಮೀರಿದೆ. ಅಪಾಯದ ಮುನ್ಸೂಚನೆಗಳನ್ನು ಲೆಕ್ಕಿಸದೆ ಪ್ರವಾಸಿಗರು ಮೋಜು-ಮಸ್ತಿಯಲ್ಲಿ ತೊಡಗಿದ್ದು, ಇದು ಸ್ಥಳೀಯ ಗ್ರಾಮಸ್ಥರ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಜಲಪಾತದ ಬುಡದಲ್ಲೇ ಅಪಾಯಕಾರಿ ಈಜಾಟ
ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಾದ ಕೋಟೆ ಅಬ್ಬಿ ಜಲಪಾತ ಹಾಗೂ ಮೇಧುರ/ಸೂರ್ಲಬ್ಬಿ ಫಾಲ್ಸ್‌ಗಳು ಮಳೆಯಿಂದಾಗಿ ಭೋರ್ಗರೆಯುತ್ತಿವೆ. ನೀರಿನ ಹರಿವು ರಭಸವಾಗಿದ್ದರೂ, ಪ್ರವಾಸಿಗರು ಜಲಪಾತದ ಬುಡದಲ್ಲೇ ಈಜಾಟವಾಡುತ್ತಾ ಜೀವದ ಜೊತೆ ಚೆಲ್ಲಾಟವಾಡುತ್ತಿದ್ದಾರೆ. ಯಾವುದೇ ಸುರಕ್ಷತಾ ಕ್ರಮಗಳಿಲ್ಲದೆ, ಸೆಲ್ಫಿ ಹಾಗೂ ರೀಲ್ಸ್‌ಗಳಿಗಾಗಿ ಅಪಾಯಕಾರಿ ಸ್ಥಳಗಳಿಗೆ ತೆರಳಿ ಹುಚ್ಚಾಟ ಮೆರೆಯುತ್ತಿದ್ದಾರೆ.
ಹಿಂದಿನ ದುರಂತಗಳಿಂದ ಕಲಿಯದ ಪಾಠ
ಇದೇ ಜಲಪಾತಗಳಲ್ಲಿ ಈ ಹಿಂದೆ ಹಲವು ಬಾರಿ ಪ್ರವಾಸಿಗರು ಕಾಲು ಜಾರಿ ನೀರಿನಲ್ಲಿ ಮುಳುಗಿ ಮೃತಪಟ್ಟ ಕಹಿ ಘಟನೆಗಳು ನಡೆದಿವೆ. ಅಲ್ಲದೆ, ನೀರಿನಲ್ಲಿ ಕೊಚ್ಚಿಹೋಗಿ ಅಪಾಯದಲ್ಲಿ ಸಿಲುಕಿದ್ದ ಹಲವರನ್ನು ಸ್ಥಳೀಯರೇ ತಮ್ಮ ಪ್ರಾಣದ ಹಂಗು ತೊರೆದು ರಕ್ಷಿಸಿದ ಉದಾಹರಣೆಗಳಿವೆ. ಇಷ್ಟೆಲ್ಲಾ ಅನಾಹುತಗಳು ಸಂಭವಿಸಿದ್ದರೂ, ಹಿಂದಿನ ದುರಂತಗಳಿಂದ ಪಾಠ ಕಲಿಯದ ಪ್ರವಾಸಿಗರು ಮತ್ತೆ ಅದೇ ಅಪಾಯಕಾರಿ ಸ್ಥಳಗಳಲ್ಲಿ ಮೋಜು ಮಸ್ತಿಯಲ್ಲಿ ತೊಡಗಿರುವುದು ವಿಪರ್ಯಾಸ.
ಪ್ರವಾಸಿಗರ ಈ ಬೇಜವಾಬ್ದಾರಿಯುತ ವರ್ತನೆಗೆ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದು, ಅನಾಹುತಗಳು ಸಂಭವಿಸುವ ಮುನ್ನವೇ ಸಂಬಂಧಪಟ್ಟ ಇಲಾಖಾ ಅಧಿಕಾರಿಗಳು ಹಾಗೂ ಪೊಲೀಸರು ಎಚ್ಚೆತ್ತುಕೊಂಡು ಜಲಪಾತದ ಬಳಿ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
