ಬೆಂಗಳೂರು: ಪಕ್ಷ ಸಂಘಟನೆಗೆ ಹೊಸ ಚೈತನ್ಯ ನೀಡುವ ನಿಟ್ಟಿನಲ್ಲಿ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿಗೆ (ಕೆಪಿಸಿಸಿ) ಶೀಘ್ರದಲ್ಲೇ ಭರ್ಜರಿ ಸರ್ಜರಿ ಮಾಡಲು ಹೈಕಮಾಂಡ್ ಮುಂದಾಗಿದೆ. ರಾಜ್ಯದ ಎಲ್ಲಾ ಜಿಲ್ಲಾಧ್ಯಕ್ಷರನ್ನು ಬದಲಾಯಿಸಲು ನಿರ್ಧರಿಸಲಾಗಿದ್ದು, ಈ ಪ್ರಕ್ರಿಯೆಗಾಗಿ ಅಖಿಲ ಭಾರತ ಕಾಂಗ್ರೆಸ್ ಸಮಿತಿ (ಎಐಸಿಸಿ) ವೀಕ್ಷಕರನ್ನು ನೇಮಕ ಮಾಡಿದೆ.
ಈ ವೀಕ್ಷಕರು ಪ್ರತಿ ಜಿಲ್ಲೆಗೂ ಖುದ್ದಾಗಿ ಭೇಟಿ ನೀಡಿ, ಸ್ಥಳೀಯ ಮುಖಂಡರು ಹಾಗೂ ಕಾರ್ಯಕರ್ತರಿಂದ ಸಮಗ್ರ ಮಾಹಿತಿಯನ್ನು ಕಲೆಹಾಕಲಿದ್ದಾರೆ. ಕಾಂಗ್ರೆಸ್ ಇತಿಹಾಸದಲ್ಲಿ ಇದೇ ಪ್ರಥಮ ಬಾರಿಗೆ ಎಐಸಿಸಿ ವತಿಯಿಂದ ಜಿಲ್ಲಾಧ್ಯಕ್ಷರ ಆಯ್ಕೆ ಪ್ರಕ್ರಿಯೆಯನ್ನು ನೇರವಾಗಿ ಜಿಲ್ಲಾ ಮಟ್ಟದಿಂದಲೇ ನಡೆಸಲಾಗುತ್ತಿರುವುದು ವಿಶೇಷವಾಗಿದೆ. ಈ ಬಾರಿ ಯಾವುದೇ ನಾಯಕರ ಒತ್ತಡಕ್ಕೆ ಮಣಿಯದೆ, ಕೇವಲ ಪಕ್ಷನಿಷ್ಠೆ ಹಾಗೂ ತಳಮಟ್ಟದಿಂದ ದುಡಿಯುತ್ತಿರುವ ನಿಷ್ಠವಂತ ಕಾರ್ಯಕರ್ತರನ್ನು ಮಾತ್ರ ಈ ಹುದ್ದೆಗಳಿಗೆ ಆಯ್ಕೆ ಮಾಡಲು ಎಐಸಿಸಿ ಕಟ್ಟುನಿಟ್ಟಿನ ನಿರ್ಧಾರ ಕೈಗೊಂಡಿದೆ.
ಜಿಲ್ಲಾಧ್ಯಕ್ಷರ ಬದಲಾವಣೆ ಪ್ರಕ್ರಿಯೆ ಸಂಪೂರ್ಣಗೊಂಡ ಬಳಿಕ, ಮುಂದಿನ ಹಂತದಲ್ಲಿ ಕೆಪಿಸಿಸಿ ಉಪಾಧ್ಯಕ್ಷರು ಮತ್ತು ಪ್ರಧಾನ ಕಾರ್ಯದರ್ಶಿಗಳ ಬದಲಾವಣೆ ಪ್ರಕ್ರಿಯೆಗೂ ಚಾಲನೆ ಸಿಗಲಿದೆ.
ಈ ಎಲ್ಲಾ ಮಹತ್ವದ ಬೆಳವಣಿಗೆಗಳ ಕುರಿತು ಚರ್ಚಿಸಿ ಅಂತಿಮ ರೂಪುರೇಷೆ ಸಿದ್ಧಪಡಿಸಲು ಇದೇ ಜುಲೈ 24ರಂದು ಬೆಂಗಳೂರಿನಲ್ಲಿ ಉನ್ನತ ಮಟ್ಟದ ಸಭೆ ಆಯೋಜಿಸಲಾಗಿದೆ. ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ. ಸಿ. ವೇಣುಗೋಪಾಲ್ ಅವರ ನೇತೃತ್ವದಲ್ಲಿ ನಡೆಯಲಿರುವ ಈ ಮಹತ್ವದ ಸಭೆಯಲ್ಲಿ ಹಿರಿಯ ಕಾಂಗ್ರೆಸ್ ನಾಯಕ ಬಿ. ಕೆ. ಹರಿಪ್ರಸಾದ್ ಸೇರಿದಂತೆ ರಾಜ್ಯದ ಪ್ರಮುಖ ನಾಯಕರು ಸಕ್ರಿಯವಾಗಿ ಪಾಲ್ಗೊಳ್ಳಲಿದ್ದಾರೆ.
