ಕರ್ನಾಟಕ ಲೋಕಸೇವಾ ಆಯೋಗದ (KPSC) ಅಕ್ರಮ ನೇಮಕಾತಿ ಹಗರಣದ ತನಿಖೆ ನಡೆಸುತ್ತಿರುವ ಸಿಐಡಿ (CID) ಅಧಿಕಾರಿಗಳಿಗೆ ದಿನೇ ದಿನೇ ಸ್ಫೋಟಕ ಮಾಹಿತಿ ಲಭ್ಯವಾಗುತ್ತಿದೆ. ಪ್ರಕರಣದ ಪ್ರಮುಖ ಆರೋಪಿ ಬಸವರಾಜ್ ಕನ್ನಾಳೆಯ ಮೊಬೈಲ್ ಫೋನ್ ಹಾಗೂ ಕರೆಗಳ ವಿವರ (CDR) ಪರಿಶೀಲಿಸಿದ ಅಧಿಕಾರಿಗಳಿಗೆ ಆತನ ಹೈ-ಫೈ ರಾಜಕೀಯ ಸಂಪರ್ಕ ಜಾಲ ಕಂಡುಬಂದು ತೀವ್ರ ಆಘಾತವಾಗಿದೆ.
ಕನ್ನಾಳೆಯ ಮೊಬೈಲ್‌ನಲ್ಲಿ ಶಾಸಕರು, ಸಂಸದರು ಸೇರಿದಂತೆ ದೇಶ ಹಾಗೂ ರಾಜ್ಯದ 50ಕ್ಕೂ ಹೆಚ್ಚು ಪ್ರಭಾವಿ ರಾಜಕೀಯ ನಾಯಕರ ಅಸಲಿ ದೂರವಾಣಿ ಸಂಖ್ಯೆಗಳು ಪತ್ತೆಯಾಗಿವೆ. ಇಷ್ಟೊಂದು ಪ್ರಭಾವಿ ರಾಜಕಾರಣಿಗಳ ಸಂಪರ್ಕ ಹೇಗೆ ಸಿಕ್ಕಿತು ಎಂಬ ಸಿಐಡಿ ಅಧಿಕಾರಿಗಳ ಪ್ರಶ್ನೆಗೆ ಉತ್ತರಿಸಿದ ಕನ್ನಾಳೆ, ತಾನೊಬ್ಬ ಬ್ಯುಸಿನೆಸ್‌ಮ್ಯಾನ್ ಹಾಗೂ ರಾಜಕಾರಣಿಯಾಗಿದ್ದು, ಟ್ರಾವೆಲ್ಸ್ ಸೇರಿದಂತೆ ಹಲವು ಉದ್ದಿಮೆಗಳನ್ನು ಹೊಂದಿರುವುದರಿಂದ ದೆಹಲಿಯಿಂದ ಭಾಲ್ಕಿಯವರೆಗೆ ಎಲ್ಲರೂ ತನಗೆ ಪರಿಚಿತರು ಎಂದು ಜಾರಿಕೊಳ್ಳಲು ಯತ್ನಿಸಿದ್ದಾನೆ.
ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನವನಾಗಿದ್ದರೂ ಬಸವರಾಜ್ ಕನ್ನಾಳೆ ಪ್ರಸ್ತುತ ತುಮಕೂರು ವಿಶ್ವವಿದ್ಯಾಲಯದ ಸಿಂಡಿಕೇಟ್ ಸದಸ್ಯನಾಗಿರುವುದು ತನಿಖೆಯಲ್ಲಿ ಬಯಲಾಗಿದೆ. ಬಿಜೆಪಿಯ ತುಮಕೂರಿನ ಪ್ರಭಾವಿ ನಾಯಕರೊಬ್ಬರ ನಿಕಟ ಸಂಪರ್ಕ ಬಳಸಿಕೊಂಡು ಈತ ಈ ಸ್ಥಾನ ಗಿಟ್ಟಿಸಿಕೊಂಡಿದ್ದನು ಎಂಬುದು ವಿಚಾರಣೆ ವೇಳೆ ಬೆಳಕಿಗೆ ಬಂದಿದೆ. ಇದಲ್ಲದೆ, ಕೆಪಿಎಸ್‌ಸಿ ಅಕ್ರಮದ ಜೊತೆಗೆ ರಾಜ್ಯದಲ್ಲಿ ನಡೆದಿದ್ದ ಸಹಾಯಕ ಪ್ರಾಧ್ಯಾಪಕರ ಹುದ್ದೆಗಳ ನೇಮಕಾತಿಯಲ್ಲೂ ದೊಡ್ಡ ಮಟ್ಟದ ಅಕ್ರಮ ನಡೆದಿದೆ ಎಂಬ ಆಘಾತಕಾರಿ ಮಾಹಿತಿ ಸಿಐಡಿಗೆ ಲಭ್ಯವಾಗಿದೆ.
ಈ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಮಹತ್ವದ ಸಾಕ್ಷ್ಯಗಳು ಸಿಕ್ಕಿದ್ದು, ಆ ಆಧಾರದ ಮೇಲೆ ದಾಖಲೆಗಳನ್ನು ಕಲೆಹಾಕಲಾಗುತ್ತಿದೆ. ಬಸವರಾಜ್ ಕನ್ನಾಳೆ ಬಂಧನದ ಬೆನ್ನಲ್ಲೇ ಆತನ ಸಂಪರ್ಕ ಜಾಲದಲ್ಲಿದ್ದ ಹಲವು ಪ್ರಭಾವಿಗಳು ಹಾಗೂ ಅಕ್ರಮದ ಫಲಾನುಭವಿಗಳ ಎದೆಯಲ್ಲಿ ಇದೀಗ ನಡುಕ ಶುರುವಾಗಿದೆ.
