ಬೆಂಗಳೂರು: ಯುವ ಉದ್ಯಮಿ ಕೃತಿಕಾ ರೆಡ್ಡಿ (Kritika Reddy) ಕೊಲೆ ಪ್ರಕರಣದ ತನಿಖೆಯನ್ನು ಪೊಲೀಸರು ತೀವ್ರಗೊಳಿಸಿದ್ದು, ಕೊಲೆ ಆರೋಪಿ ಮಹೇಂದ್ರ ರೆಡ್ಡಿ ಸಂಪರ್ಕದಲ್ಲಿದ್ದ ಎಂಟಕ್ಕೂ ಹೆಚ್ಚು ಜನರ ವಿಚಾರಣೆ ನಡೆಸಿದ್ದಾರೆ. ಈ ಪೈಕಿ ಮುಂಬೈನಿಂದ ಕರೆಸಲಾದ ಮಹೇಂದ್ರನ ಪ್ರೇಯಸಿ ಸೇರಿ ಐದಕ್ಕೂ ಹೆಚ್ಚು ಮಹಿಳೆಯರೇ ಪ್ರಮುಖರಾಗಿದ್ದಾರೆ ಎಂದು ತಿಳಿದುಬಂದಿದೆ.
ಮುಂಬೈ ಮಹಿಳೆಯರ ವಿಚಾರಣೆ: ಮುಂಬೈನಲ್ಲಿ ವಾಸವಿದ್ದ ಮಹೇಂದ್ರ ರೆಡ್ಡಿ ಅಲ್ಲಿ ಅನೇಕ ಮಹಿಳೆಯರೊಂದಿಗೆ ಸಂಪರ್ಕ ಹೊಂದಿದ್ದ. ಇದೇ ಹಿನ್ನೆಲೆಯಲ್ಲಿ ಪೊಲೀಸರು ಇಲ್ಲಿಯವರೆಗೂ ಮಹೇಂದ್ರನ ಪ್ರೇಯಸಿ ಸೇರಿದಂತೆ ಐದಕ್ಕೂ ಹೆಚ್ಚು ಮಹಿಳೆಯರನ್ನು ಮುಂಬೈನಿಂದ ಕರೆಸಿ ಹೇಳಿಕೆಗಳನ್ನು (Statement) ದಾಖಲಿಸಿಕೊಂಡಿದ್ದಾರೆ.
ವೈದ್ಯ ಸ್ನೇಹಿತನಿಗೆ ಶಾಕ್!: ಪ್ರಕರಣದಲ್ಲಿ ಪ್ರಮುಖ ತಿರುವು ನೀಡುವಂತೆ, ಮಹೇಂದ್ರನ ಆಪ್ತ ಸ್ನೇಹಿತನಾದ ಅರಿವಳಿಕೆ ತಜ್ಞ (Anaesthesia Expert) ವೈದ್ಯರೊಬ್ಬರನ್ನು ಸಹ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ. ನಿರಂತರವಾಗಿ ಮಹೇಂದ್ರನ ಸಂಪರ್ಕದಲ್ಲಿದ್ದ ಈ ವೈದ್ಯರಿಗೆ, ಪೊಲೀಸರ ತೀಕ್ಷ್ಣ ಪ್ರಶ್ನೆಗಳಿಗೆ ತಬ್ಬಿಬ್ಬಾಗಿದ್ದಾರೆ. “ನನಗೇನೂ ಗೊತ್ತಿಲ್ಲ ಸರ್, ನನ್ನನು ಬಿಟ್ಟು ಬಿಡಿ, ನಾನು ಯಾವುದನ್ನೂ ಆತನಿಗೆ ಹೇಳಿಕೊಟ್ಟಿಲ್ಲ,” ಎಂದು ವೈದ್ಯರು ಪೊಲೀಸರ ಮುಂದೆ ಹೇಳಿದ್ದಾರೆ ಎನ್ನಲಾಗಿದೆ.
ಫೋನ್ ರಿಟ್ರೀವ್ ಮಾಡಿದ ಸಂದರ್ಭದಲ್ಲಿ ಮುಂಬೈ ಮಹಿಳೆಯರು ಮತ್ತು ವೈದ್ಯನೊಂದಿಗೆ ಮಹೇಂದ್ರನ ಸಂಪರ್ಕದ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿತ್ತು. ಆದರೆ, ಈವರೆಗೂ ವಿಚಾರಣೆಗೊಳಪಟ್ಟ ಯಾರ ಬಳಿಯೂ ಕೊಲೆಯ ವಿಚಾರವನ್ನು ಮಹೇಂದ್ರ ಹಂಚಿಕೊಂಡಿಲ್ಲ ಎಂಬುದು ಸ್ಪಷ್ಟವಾಗಿದೆ.
ಐಫೋನ್ ಡಾಟಾ ಚೇತರಿಕೆಗೆ ಹರಸಾಹಸ: ಕೊಲೆಯ ಪ್ರಮುಖ ಸುಳಿವು ಐಫೋನ್‌ನಲ್ಲಿರುವ ಡಿಲೀಟ್ ಆಗಿರುವ ಡಾಟಾದಲ್ಲಿದೆ ಎಂದು ಶಂಕಿಸಿರುವ ಪೊಲೀಸರು, ಆ ಡೇಟಾವನ್ನು ಹಿಂಪಡೆಯಲು ಹರಸಾಹಸ ಪಡುತ್ತಿದ್ದಾರೆ. ಐಫೋನ್‌ನಲ್ಲಿ ಡಿಲೀಟ್ ಆಗಿರುವ ಅಂಶಗಳ ಹಿಂದೆ ಬಿದ್ದಿರುವ ಪೊಲೀಸರು, ಹೈದರಾಬಾದ್‌ನ ಟೆಕ್ನಿಕಲ್ ಸೆಲ್ (Technical Cell) ಗೆ ಕಳುಹಿಸಿ ಡಾಟಾ ಮರುಪಡೆಯುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿದ್ದಾರೆ.
