S Shorts

ಪೋಷಕರ ಕಣ್ಣೀರಿಗೂ ಡೋಂಟ್ ಕೇರ್: ವಿವಾಹಿತ ಧರ್ಮಗುರುವಿನೊಂದಿಗೆ ಹೋದ 22 ವರ್ಷದ ಯುವತಿ!

ಪೋಷಕರ ಕಣ್ಣೀರಿಗೂ ಡೋಂಟ್ ಕೇರ್: ವಿವಾಹಿತ ಧರ್ಮಗುರುವಿನೊಂದಿಗೆ ಹೋದ 22 ವರ್ಷದ ಯುವತಿ!
Author: Sagaradventure
Posted By: Sagaradventure
Updated: Oct 29, 2026 | 12:20 PM

ಕುಮಟಾ: ಈಗಾಗಲೇ ಮದುವೆಯಾಗಿ ಮಕ್ಕಳಿರುವ ಧರ್ಮಗುರುವೊಬ್ಬರೊಂದಿಗೆ 22 ವರ್ಷದ ಯುವತಿ ಊರು ಬಿಟ್ಟು ತೆರಳಿದ ಘಟನೆ ಮಂಗಳೂರು ಭಾಗದಲ್ಲಿ ನಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ಬೆಟ್ಕುಳಿ ನಿವಾಸಿ ಯುವತಿ, ಪೋಷಕರು ಹಾಗೂ ಕುಟುಂಬಸ್ಥರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಅವರೊಂದಿಗೆ ಮರಳಲು ನಿರಾಕರಿಸಿ, ಧರ್ಮಗುರುವಿನೊಂದಿಗೇ ತೆರಳಿದ್ದಾಳೆ.

ಮಂಗಳೂರಿನ ಅಸೈಗೋಳಿ ನಿವಾಸಿ 40 ವರ್ಷದ ಅಶ್ರಫ್ ಸ-ಅದಿ ಎಂಬವರು ಈಗಾಗಲೇ ವಿವಾಹಿತರಾಗಿದ್ದು, ಮಕ್ಕಳನ್ನೂ ಹೊಂದಿದ್ದಾರೆ. ಇವರು ಹಲವು ವರ್ಷಗಳ ಕಾಲ ಕುಮಟಾದ ಮದರಸಾವೊಂದರಲ್ಲಿ ಧರ್ಮಗುರುವಾಗಿ ಕಾರ್ಯನಿರ್ವಹಿಸಿದ್ದರು. ಇದೇ ವೇಳೆ ಕುಮಟಾದ ಬೆಟ್ಕುಳಿ ನಿವಾಸಿ ದಾವುದ್ ಖಾಸಿಂ ಅವರ ಪುತ್ರಿ ಮಗದುಮ್ಮ ದಾವುದ್ ಬುದ್ವನ್ (22) ಅವರೊಂದಿಗೆ ಪರಿಚಯವಾಗಿ, ಅದು ಪ್ರೇಮಕ್ಕೆ ತಿರುಗಿತ್ತು ಎನ್ನಲಾಗಿದೆ. ಬಳಿಕ ಇಬ್ಬರೂ ಊರು ಬಿಟ್ಟು ಮಂಗಳೂರಿಗೆ ತೆರಳಿದ್ದರು.

ಠಾಣೆಯಲ್ಲೇ ಕಣ್ಣೀರಿಟ್ಟ ಕುಟುಂಬಸ್ಥರು

ಮಗಳು ಕಾಣೆಯಾಗಿರುವ ಹಿನ್ನೆಲೆಯಲ್ಲಿ ಆಕೆಯನ್ನು ಹುಡುಕಿಕೊಂಡು ಮಂಗಳೂರಿಗೆ ಬಂದ ಕುಟುಂಬಸ್ಥರು ಕೋಣಾಜೆ ಪೊಲೀಸ್ ಠಾಣೆಗೆ ತೆರಳಿದ್ದಾರೆ. ಯುವತಿ ವಯಸ್ಕಳಾಗಿರುವುದರಿಂದ ಪೊಲೀಸರು ಅಶ್ರಫ್ ಹಾಗೂ ಯುವತಿಯನ್ನು ಠಾಣೆಗೆ ಕರೆಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ ತಂದೆ, ತಾಯಿ, ಸಹೋದರ ಹಾಗೂ ಇತರ ಸಂಬಂಧಿಕರು ಆಕೆಯನ್ನು ಮನೆಗೆ ಮರಳುವಂತೆ ಕಣ್ಣೀರಿಟ್ಟು ಮನವಿ ಮಾಡಿದ್ದಾರೆ. ಆದರೆ, ಯುವತಿ ಕುಟುಂಬದವರೊಂದಿಗೆ ವಾಪಸ್ ಹೋಗಲು ಸ್ಪಷ್ಟವಾಗಿ ನಿರಾಕರಿಸಿದ್ದಾಳೆ ಎನ್ನಲಾಗಿದೆ.

ಧರ್ಮಗುರುವಿನೊಂದಿಗೇ ತೆರಳಲು ನಿರ್ಧಾರ

ಕುಟುಂಬಸ್ಥರು ಎಷ್ಟೇ ಮನವೊಲಿಸಲು ಪ್ರಯತ್ನಿಸಿದರೂ ಯುವತಿ ತನ್ನ ನಿರ್ಧಾರ ಬದಲಿಸದೆ, ಅಶ್ರಫ್ ಅವರೊಂದಿಗೇ ತೆರಳುವುದಾಗಿ ತಿಳಿಸಿದ್ದಾಳೆ. ಬಳಿಕ ಪೊಲೀಸರ ಮುಂದೆ ತನ್ನ ಹೇಳಿಕೆ ದಾಖಲಿಸಿ ಅವರೊಂದಿಗೇ ತೆರಳಿದ್ದಾಳೆ ಎಂದು ತಿಳಿದುಬಂದಿದೆ. ಕಣ್ಣೆದುರೇ ಮಗಳು ತಮ್ಮೊಂದಿಗೆ ಮರಳದೆ ತೆರಳುತ್ತಿರುವುದನ್ನು ಕಂಡು ತಂದೆ-ತಾಯಿ ಠಾಣೆಯ ಆವರಣದಲ್ಲೇ ಬಿಕ್ಕಿ ಬಿಕ್ಕಿ ಅತ್ತ ಘಟನೆ ಅಲ್ಲಿದ್ದವರ ಗಮನ ಸೆಳೆದಿದೆ.