S Shorts

Trailer Out: ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಚಿತ್ರದಲ್ಲಿ ನೈಜ ರೋಬೋಟ್ ನಟನೆ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ!

Trailer Out: ಸಿಂಪಲ್ ಸುನಿ ನಿರ್ದೇಶನದ ‘ಲಂಬೋದರ 2.0’ ಚಿತ್ರದಲ್ಲಿ ನೈಜ ರೋಬೋಟ್ ನಟನೆ, ಭಾರತೀಯ ಚಿತ್ರರಂಗದಲ್ಲೇ ಹೊಸ ದಾಖಲೆ!
Author: Sagaradventure
Posted By: Sagaradventure
Updated: Nov 2, 2026 | 12:34 PM

ಬೆಂಗಳೂರು: ಸ್ಯಾಂಡಲ್‌ವುಡ್‌ನ ಪ್ರತಿಭಾವಂತ ನಿರ್ದೇಶಕ ಸಿಂಪಲ್ ಸುನಿ ಇದೀಗ ಸೈನ್ಸ್ ಫಿಕ್ಷನ್ (Sci-Fi) ಜಗತ್ತಿಗೆ ಅಡಿಯಿಟ್ಟಿದ್ದು, ಅವರ ನಿರ್ದೇಶನದ ಬಹುನಿರೀಕ್ಷಿತ ‘ಲಂಬೋದರ 2.0’ ಸಿನಿಮಾದ ಟ್ರೇಲರ್ ಕನ್ನಡ ಹಾಗೂ ಹಿಂದಿ ಭಾಷೆಗಳಲ್ಲಿ ಅದ್ಧೂರಿಯಾಗಿ ಬಿಡುಗಡೆಯಾಗಿದೆ. ಸಿನಿಮಾ ಪ್ರೇಮಿಗಳಲ್ಲಿ ಭಾರಿ ಕುತೂಹಲ ಮೂಡಿಸಿರುವ ಈ ಟ್ರೇಲರ್ ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದ್ದು, ಚಿತ್ರವು ಇದೇ ನವೆಂಬರ್ 13ರಂದು ಬೆಳ್ಳಿತೆರೆಗೆ ಬರಲು ಸಜ್ಜಾಗಿದೆ.

ಚಿತ್ರರಂಗದಲ್ಲೇ ಹೊಸ ಮೈಲಿಗಲ್ಲು: 

ರೆಗ್ಯುಲರ್‌ ಸಿಜಿ ಗ್ರಾಫಿಕ್ಸ್ ತಂತ್ರಜ್ಞಾನವನ್ನು ಸಂಪೂರ್ಣವಾಗಿ ಬದಿಗೊತ್ತಿ, ಭಾರತೀಯ ಚಿತ್ರರಂಗದಲ್ಲೇ ಮೊದಲ ಬಾರಿಗೆ ನೈಜ ಭೌತಿಕ ಹ್ಯೂಮನಾಯ್ಡ್ ರೋಬೋಟ್‌ಗೆ ಪ್ರಮುಖ ಪಾತ್ರ ನೀಡಿ ಚಿತ್ರೀಕರಿಸಿರುವುದು ಈ ಸಿನಿಮಾದ ಅತಿ ದೊಡ್ಡ ಹೆಗ್ಗಳಿಕೆಯಾಗಿದೆ. ಬೆಂಗಳೂರು ಮೂಲದ ತಂತ್ರಜ್ಞಾನ ಸಂಸ್ಥೆ ‘ಮಚಾನಿ ರೋಬೋಟಿಕ್ಸ್’ ಅಭಿವೃದ್ಧಿಪಡಿಸಿರುವ ಅತ್ಯಾಧುನಿಕ ಹ್ಯೂಮನಾಯ್ಡ್ ರೋಬೋಟ್ ‘ಜಿಯಾ’ಳನ್ನು ಈ ಚಿತ್ರದಲ್ಲಿ ಬಳಸಿಕೊಳ್ಳಲಾಗಿದೆ. ಯಾವುದೇ ಡಿಜಿಟಲ್ ಎಫೆಕ್ಟ್ಸ್ ಅಥವಾ ಪ್ರಾಸ್ಥೆಟಿಕ್ಸ್ ಮೇಕಪ್‌ನ ಹಂಗಿಲ್ಲದೆ, ಜಿಯಾ ನೇರವಾಗಿ ಸೆಟ್‌ನಲ್ಲೇ ರಿಯಲ್‌ ಟೈಮ್‌ನಲ್ಲಿ ನಟಿಸಿದ್ದು, ಕೃತಕ ಬುದ್ಧಿಮತ್ತೆ ನಟನಾ ಕ್ಷೇತ್ರವನ್ನು ಹೇಗೆ ಬದಲಾಯಿಸಬಲ್ಲದು ಎಂಬುದಕ್ಕೆ ಈ ಪ್ರಯೋಗ ಸಾಕ್ಷಿಯಾಗಿದೆ.

ಡಿಜಿಟಲ್ ಜಗತ್ತಿನ ಕರಾಳ ಮುಖದ ಅನಾವರಣ: 

ಬೆಂಗಳೂರಿನ ಹಿನ್ನೆಲೆಯಲ್ಲೇ ಸಾಗುವ ‘ಲಂಬೋದರ 2.0’ ಇಂದಿನ ಆನ್‌ಲೈನ್ ಬದುಕಿನ ಸಂಕೀರ್ಣ ಮುಖಗಳನ್ನು ಅನಾವರಣಗೊಳಿಸುವ ಹೈ-ಕಾನ್ಸೆಪ್ಟ್ ಸೈಂಟಿಫಿಕ್ ಸೋಶಿಯಲ್ ಥ್ರಿಲ್ಲರ್ ಆಗಿದೆ. ಸದಾ ಸ್ಕ್ರೀನ್ ಟೈಮ್‌ನಲ್ಲಿ ಮುಳುಗಿರುವ, ಎಲ್ಲರೊಂದಿಗೆ ಸಂಪರ್ಕದಲ್ಲಿದ್ದರೂ ಒಂಟಿತನ ಅನುಭವಿಸುವ ಹಾಗೂ ಅದೃಶ್ಯ ಡಿಜಿಟಲ್ ಕಣ್ಗಾವಲಿನಲ್ಲಿ ಸಿಲುಕಿರುವ ಇಂದಿನ ಯುವಜನತೆಯ ಮಾನಸಿಕ ತುಮುಲಗಳ ಸುತ್ತ ಕಥೆ ಹೆಣೆಯಲಾಗಿದೆ.

ನಾಯಕ ನಟನದೇ ಸ್ಕ್ರಿಪ್ಟ್: 

ಈ ಚಿತ್ರದ ಮೂಲಕ ಅನಿಲ್ ಶೆಟ್ಟಿ ನಾಯಕನಾಗಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡುತ್ತಿದ್ದು, ಸ್ವತಃ ಅವರೇ ಸ್ಕ್ರಿಪ್ಟ್‌ ಬರೆದಿದ್ದಾರೆ. ಈವರೆಗೆ ತಮ್ಮದೇ ಕಥೆಗಳಿಗೆ ಆ್ಯಕ್ಷನ್ ಕಟ್ ಹೇಳುತ್ತಿದ್ದ ನಿರ್ದೇಶಕ ಸುನಿ, ಇದೇ ಮೊದಲ ಬಾರಿಗೆ ಬೇರೆಯವರ ಸ್ಕ್ರಿಪ್ಟ್‌ಗೆ ನಿರ್ದೇಶನ ಮಾಡಿದ್ದಾರೆ. ಅನಿಲ್ ಶೆಟ್ಟಿಗೆ ನಾಯಕಿಯಾಗಿ ಸಾಚಿ ಬಿಂದ್ರಾ ಸಾಥ್ ನೀಡಿದ್ದಾರೆ.

ಬಾಲಿವುಡ್ ನಟನ ಎಂಟ್ರಿ: 

‘ರಂಗ್ ದೇ ಬಸಂತಿ’, ‘ಡಾನ್ 2’ ಖ್ಯಾತಿಯ ಬಾಲಿವುಡ್ ನಟ ಕುನಾಲ್ ಕಪೂರ್ ಈ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದು, ಅವರ ಪಾತ್ರವೇ ಕಥೆಗೆ ದೊಡ್ಡ ತಿರುವು ನೀಡಲಿದೆ ಎನ್ನಲಾಗಿದೆ. ನಟಿ ಮೇಘನಾ ಗಾವಂಕರ್ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಚಿತ್ರದಲ್ಲಿ ರಹಸ್ಯವಾಗಿರುವ ಕೃಷ್ಣನ ಪಾತ್ರವೊಂದಿದ್ದು, ಅದರ ಸುತ್ತ ತೀವ್ರ ಸಸ್ಪೆನ್ಸ್ ಕಾಯ್ದುಕೊಳ್ಳಲಾಗಿದೆ. ಬಾಲಿವುಡ್‌ನ ಖ್ಯಾತ ಮಹಾವೀರ್ ಜೈನ್ ಫಿಲಮ್ಸ್ ಈ ಸಿನಿಮಾಗೆ ಸಾಥ್ ನೀಡಿದೆ.