S Shorts

ಲಂಚವಾಗಿ 10 ಸಾವಿರ ನಗದು, 9 ಸೀರೆ, ಜೀನ್ಸ್ ಪ್ಯಾಂಟ್ ಕೇಳಿದ್ದ APP ಲೋಕಾಯುಕ್ತ ಬಲೆಗೆ!

ಲಂಚವಾಗಿ 10 ಸಾವಿರ ನಗದು, 9 ಸೀರೆ, ಜೀನ್ಸ್ ಪ್ಯಾಂಟ್ ಕೇಳಿದ್ದ APP ಲೋಕಾಯುಕ್ತ ಬಲೆಗೆ!
Author: Sagaradventure
Posted By: Sagaradventure
Updated: Jul 18, 2026 | 10:03 AM

ಕಲಬುರಗಿ ಜಿಲ್ಲಾ ನ್ಯಾಯಾಲಯದ 5ನೇ ಜೆಎಂಎಫ್‌ಸಿ (JMFC) ಕೋರ್ಟ್‌ನ ಸಹಾಯಕ ಸರ್ಕಾರಿ ಅಭಿಯೋಜಕ (APP) ಸಂತೋಷ್ ಕುಮಾರ್ ಲೋಖಂಡೆ ಅವರು ಲಂಚ ಸ್ವೀಕರಿಸುವಾಗ ಲೋಕಾಯುಕ್ತ ಅಧಿಕಾರಿಗಳ ಬಲೆಗೆ ರೆಡ್‌ಹ್ಯಾಂಡ್ ಆಗಿ ಬಿದ್ದಿದ್ದಾರೆ.

ಪ್ರಕರಣವೊಂದರಲ್ಲಿ ನ್ಯಾಯಾಲಯಕ್ಕೆ ರಾಜಿ ಅರ್ಜಿ ಸಲ್ಲಿಸಲು ದೂರುದಾರ ರಾಹುಲ್ ಹೈದರಾಬಾದ್ ಎಂಬುವರ ಬಳಿ ಇವರು ವಿಚಿತ್ರ ರೀತಿಯ ಲಂಚಕ್ಕೆ ಬೇಡಿಕೆಯಿಟ್ಟಿದ್ದರು. ಕೇವಲ ಹಣ ಮಾತ್ರವಲ್ಲದೆ, ಬಟ್ಟೆ ಹಾಗೂ ಚಪ್ಪಲಿಗಳನ್ನು ಸಹ ಲಂಚವಾಗಿ ನೀಡುವಂತೆ ಪೀಡಿಸಿದ್ದರು ಎಂಬ ಆಘಾತಕಾರಿ ವಿಚಾರ ಬೆಳಕಿಗೆ ಬಂದಿದೆ.

10 ಸಾವಿರ ನಗದು, ಸೀರೆ, ಜೀನ್ಸ್, ಚಪ್ಪಲಿಗೆ ಡಿಮ್ಯಾಂಡ್!

​ದೂರುದಾರ ರಾಹುಲ್ ಬಳಿ ಎಪಿಪಿ ಸಂತೋಷ್ ಲೋಖಂಡೆ ಅವರು 10,000 ರೂಪಾಯಿ ನಗದು ಹಣದ ಜೊತೆಗೆ 9 ಸೀರೆಗಳು, 4 ಶರ್ಟ್, 4 ಲಂಡನ್ ಜೀನ್ಸ್ ಪ್ಯಾಂಟ್, 1 ಜೊತೆ ಶೂ, 4 ಮಹಿಳೆಯರ ಡ್ರೆಸ್ ಹಾಗೂ 6 ಜೊತೆ ಮಹಿಳೆಯರ ಚಪ್ಪಲಿಗೆ ಬೇಡಿಕೆಯಿಟ್ಟಿದ್ದರು. ಲಂಚದ ರೂಪದಲ್ಲಿ ಈ ಭಾರಿ ಪ್ರಮಾಣದ ವಸ್ತುಗಳನ್ನು ತಂದುಕೊಡುವಂತೆ ತಾಕೀತು ಮಾಡಿದ್ದರು. ಈ ಬಗ್ಗೆ ಬೇಸತ್ತ ದೂರುದಾರರು ಭ್ರಷ್ಟಾಚಾರ ನಿಗ್ರಹ ದಳದ ಲೋಕಾಯುಕ್ತ ಅಧಿಕಾರಿಗಳಿಗೆ ರಹಸ್ಯವಾಗಿ ದೂರು ನೀಡಿದ್ದರು.

ನ್ಯಾಯಾಲಯದ ಆವರಣದಲ್ಲೇ ರೆಡ್‌ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ

​ದೂರಿನ ಅನ್ವಯ ಕಾರ್ಯಾಚರಣೆಗಿಳಿದ ಲೋಕಾಯುಕ್ತ ಅಧಿಕಾರಿಗಳು, ಪಕ್ಕಾ ಸ್ಕೆಚ್ ಹಾಕಿ ನ್ಯಾಯಾಲಯದ ಆವರಣದಲ್ಲಿಯೇ ಬಲೆ ಹೆಣೆದಿದ್ದರು. ದೂರುದಾರನಿಂದ 10 ಸಾವಿರ ರೂಪಾಯಿ ನಗದು ಲಂಚ ಸ್ವೀಕರಿಸುವಾಗಲೇ ಎಪಿಪಿ ಸಂತೋಷ್ ಲೋಖಂಡೆ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಹಿಡಿದಿದ್ದಾರೆ. ಬಲೆಗೆ ಬಿದ್ದ ಎಪಿಪಿ ಅಧಿಕಾರಿಯನ್ನು ತಕ್ಷಣವೇ ಬಂಧಿಸಲಾಗಿದ್ದು, ಲೋಕಾಯುಕ್ತ ಇನ್ಸ್‌ಪೆಕ್ಟರ್ ಅರುಣ್ ನೇತೃತ್ವದ ತಂಡ ಈ ಯಶಸ್ವಿ ಕಾರ್ಯಾಚರಣೆ ನಡೆಸಿದೆ.