S Shorts

Mangaluru | ಅಕ್ರಮ ಬಾಂಗ್ಲಾದೇಶಿಗರ ನುಸುಳುವಿಕೆ ಜಾಲ ಪತ್ತೆ, ಇಬ್ಬರ ಬಂಧನ: ಕೋಲ್ಕತ್ತಾದಲ್ಲಿ ಮತ್ತೊಬ್ಬನ ಸೆರೆ!

Mangaluru | ಅಕ್ರಮ ಬಾಂಗ್ಲಾದೇಶಿಗರ ನುಸುಳುವಿಕೆ ಜಾಲ ಪತ್ತೆ, ಇಬ್ಬರ ಬಂಧನ: ಕೋಲ್ಕತ್ತಾದಲ್ಲಿ ಮತ್ತೊಬ್ಬನ ಸೆರೆ!
Author: Sagaradventure
Posted By: Sagaradventure
Updated: Jul 14, 2026 | 1:11 PM

ಮಂಗಳೂರಿನಲ್ಲಿ ಅಕ್ರಮ ಬಾಂಗ್ಲಾದೇಶಿ ಪ್ರಜೆಗಳ ನುಸುಳುವಿಕೆ ಪ್ರಕರಣಗಳು ಸತತವಾಗಿ ಬೆಳಕಿಗೆ ಬರುತ್ತಿದ್ದು, ಕರಾವಳಿ ಭಾಗದಲ್ಲಿ ತೀವ್ರ ಆತಂಕ ಮಡುಗಟ್ಟಿದೆ. ಕಟ್ಟಡ ಕಾಮಗಾರಿಗಳಿಗೆ ಇರುವ ಕಾರ್ಮಿಕರ ಕೊರತೆಯನ್ನೇ ಬಂಡವಾಳವಾಗಿಸಿಕೊಂಡು, ದಲ್ಲಾಳಿಗಳ ಮೂಲಕ ಅಕ್ರಮ ವಲಸಿಗರನ್ನು ಮಂಗಳೂರಿಗೆ ಕರೆತರುವ ಬೃಹತ್ ಜಾಲವೊಂದನ್ನು ಪೊಲೀಸರು ಬೇಧಿಸಿದ್ದಾರೆ. ಕೇವಲ ದಲ್ಲಾಳಿಗಳ ಮಾತನ್ನು ನಂಬಿ ಕಾರ್ಮಿಕರನ್ನು ನೇಮಿಸಿಕೊಳ್ಳುವ ಗುತ್ತಿಗೆದಾರರು (ಕಾಂಟ್ರಾಕ್ಟರ್‌ಗಳು) ಇನ್ಮುಂದೆ ಅವರ ಹಿನ್ನೆಲೆ ಪರಿಶೀಲಿಸಿ ತೀವ್ರ ಎಚ್ಚರಿಕೆ ವಹಿಸುವುದು ಅನಿವಾರ್ಯವಾಗಿದೆ.

ಉತ್ತರ ಭಾರತದಿಂದ ಕೇವಲ ಕಾರ್ಮಿಕರನ್ನು ಕರೆತರುವ ನೆಪದಲ್ಲಿ, ನಕಲಿ ದಾಖಲೆಗಳೊಂದಿಗೆ ಬಾಂಗ್ಲಾದೇಶಿ ಪ್ರಜೆಗಳನ್ನು ಅಕ್ರಮವಾಗಿ ಮಂಗಳೂರಿಗೆ ಕರೆತಂದು ಕೆಲಸ ಕೊಡಿಸುತ್ತಿದ್ದ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. ಪಶ್ಚಿಮ ಬಂಗಾಳ ಮೂಲದ ಮೊಯಿದಿನ್ ಇಸ್ಲಾಂ, ರಸೂಲ್ ಇಸ್ಲಾಂ ಹಾಗೂ ದಿಲ್ವಾರ್ ಹುಸೇನ್ ಎಂಬುವವರೇ ಈ ಕೃತ್ಯದ ಪ್ರಮುಖ ರೂವಾರಿಗಳು. ಈ ಪೈಕಿ ಮೊಯಿದಿನ್ ಇಸ್ಲಾಂ ಮತ್ತು ದಿಲ್ವಾರ್ ಹುಸೇನ್‌ನನ್ನು ಮಂಗಳೂರು ಪೊಲೀಸರು ಕಾರ್ಯಾಚರಣೆ ನಡೆಸಿ ಈಗಾಗಲೇ ಬಂಧಿಸಿದ್ದಾರೆ.

ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದ ಮತ್ತೊಬ್ಬ ಪ್ರಮುಖ ಆರೋಪಿ ರಸೂಲ್ ಇಸ್ಲಾಂನನ್ನು ಕೋಲ್ಕತ್ತಾ ಪೊಲೀಸರೊಂದಿಗೆ ಸಮನ್ವಯ ಸಾಧಿಸಿ ಇದೀಗ ಬಂಧಿಸಲಾಗಿದೆ. ಆತನನ್ನು ವಶಕ್ಕೆ ಪಡೆಯಲು ಮಂಗಳೂರು ಪೊಲೀಸ್ ತಂಡವೊಂದು ಈಗಾಗಲೇ ಪಶ್ಚಿಮ ಬಂಗಾಳಕ್ಕೆ ತೆರಳಿದೆ. ಕೋಲ್ಕತ್ತಾದಿಂದ ಆರೋಪಿಯನ್ನು ಮಂಗಳೂರಿಗೆ ಕರೆತಂದು ತೀವ್ರ ವಿಚಾರಣೆಗೆ ಒಳಪಡಿಸಿದ ಬಳಿಕ, ಈ ಅಕ್ರಮ ಜಾಲದಲ್ಲಿ ಭಾಗಿಯಾಗಿರುವ ಇತರರ ಬಗ್ಗೆ ಮತ್ತು ನುಸುಳುಕೋರರ ಬಗ್ಗೆ ನಿಖರ ಮಾಹಿತಿ ಲಭ್ಯವಾಗುವ ಸಾಧ್ಯತೆಯಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.