S Shorts

‘ಬಿಜೆಪಿ-ಜೆಡಿಎಸ್‌ನವರಿಗೆ ಸ್ವಲ್ಪವಾದ್ರು ನಾಚಿಕೆ ಇದ್ರೆ….’

‘ಬಿಜೆಪಿ-ಜೆಡಿಎಸ್‌ನವರಿಗೆ ಸ್ವಲ್ಪವಾದ್ರು ನಾಚಿಕೆ ಇದ್ರೆ….’
Author: Devaraj Naik
Posted By: Devaraj Naik
Updated: Feb 4, 2026 | 12:41 PM

ಬೆಂಗಳೂರು: ಕೇಂದ್ರ ಸರ್ಕಾರದಿಂದ ನರೇಗಾ (MNREGA) ಯೋಜನೆಯಲ್ಲಿ ಆಗುತ್ತಿರುವ ಅನ್ಯಾಯದ ಕುರಿತು ನಡೆಯಬೇಕಿದ್ದ ಚರ್ಚೆಯನ್ನು ಹಳ್ಳ ಹಿಡಿಸಲು ಬಿಜೆಪಿ ಮತ್ತು ಜೆಡಿಎಸ್ ಸಂಚು ರೂಪಿಸಿವೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.

“ಈ ಅಧಿವೇಶನ ಕರೆದಿದ್ದೇ ನರೇಗಾ ವಿಚಾರದಲ್ಲಿ ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಚರ್ಚಿಸಲು. ಆದರೆ, ಈ ಚರ್ಚೆಯಲ್ಲಿ ಭಾಗಿಯಾಗಬಾರದು ಮತ್ತು ಕೇಂದ್ರದ ವಿರುದ್ಧ ನಿರ್ಣಯ (Resolution) ಕೈಗೊಳ್ಳಬಾರದು ಎಂಬ ಉದ್ದೇಶದಿಂದ ವಿರೋಧ ಪಕ್ಷಗಳು ಅಹೋರಾತ್ರಿ ಧರಣಿ ನಡೆಸುತ್ತಿವೆ” ಎಂದು ಸಚಿವರು ಕಿಡಿಕಾರಿದರು.

ರಾಜ್ಯಪಾಲರು ಸರ್ಕಾರ ಸಿದ್ಧಪಡಿಸಿದ ಭಾಷಣವನ್ನು ಓದಬಾರದು ಎಂದು ಬಿಜೆಪಿ ಹೈಕಮಾಂಡ್ ಒತ್ತಡ ಹೇರುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಇದು ಸರಿಯಲ್ಲ ಎಂದು ಅವರು ಆಕ್ಷೇಪಿಸಿದರು.

ಅಬಕಾರಿ ಸಚಿವ ತಿಮ್ಮಾಪುರ ಅವರ ವಿರುದ್ಧದ ಆರೋಪಗಳ ಬಗ್ಗೆ ಈಗಾಗಲೇ ಸದನದಲ್ಲಿ ಚರ್ಚೆಯಾಗಿ ಉತ್ತರವೂ ದೊರೆತಿದೆ. ಆದರೂ ಬಿಎಸಿ (BAC) ಸಮಿತಿಯಲ್ಲಿ ತೀರ್ಮಾನವಾದಂತೆ ನಿರ್ಣಯ ಮಂಡಿಸಲು ಬಿಡದೆ ಪ್ರತಿಭಟನೆ ಮಾಡುತ್ತಿರುವುದು ರಾಜಕೀಯ ಪ್ರೇರಿತ ಎಂದರು.

“ಬಿಜೆಪಿ ಮತ್ತು ಜೆಡಿಎಸ್‌ನವರಿಗೆ ಸ್ವಲ್ಪವಾದರೂ ನಾಚಿಕೆಯಾಗಬೇಕು. ಕರ್ನಾಟಕದಿಂದ ಲೋಕಸಭೆಗೆ ಹೋಗಿ ಮಂತ್ರಿಯಾದವರಿಗೆ ಸ್ವಲ್ಪವಾದರೂ ಗೌರವವಿದ್ದರೆ, ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಧ್ವನಿ ಎತ್ತಲಿ” ಎಂದು ಸವಾಲು ಹಾಕಿದರು.