S Shorts

ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಚಿನ್ನದ ಕಳುವು: ಇಒ ಅಮಾನತು, ಸಮಗ್ರ ತನಿಖೆಗೆ ರಾಮಲಿಂಗಾ ರೆಡ್ಡಿ ಆದೇಶ

ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಚಿನ್ನದ ಕಳುವು: ಇಒ ಅಮಾನತು, ಸಮಗ್ರ ತನಿಖೆಗೆ ರಾಮಲಿಂಗಾ ರೆಡ್ಡಿ ಆದೇಶ
Author: Devaraj Naik
Posted By: Devaraj Naik
Updated: Feb 4, 2026 | 12:34 PM

ಬೆಂಗಳೂರು: ಇತಿಹಾಸ ಪ್ರಸಿದ್ಧ ಧರ್ಮರಾಯ ಸ್ವಾಮಿ ದೇವಸ್ಥಾನದಲ್ಲಿ ಚಿನ್ನಾಭರಣ ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಮುಜರಾಯಿ ಸಚಿವ ರಾಮಲಿಂಗಾ ರೆಡ್ಡಿ ಅವರು ಕಟ್ಟುನಿಟ್ಟಿನ ಕ್ರಮಕ್ಕೆ ಸೂಚಿಸಿದ್ದಾರೆ. ಕೆಂಗಲ್ ಗೇಟ್ ಬಳಿ ಮಾತನಾಡಿದ ಅವರು, ಈಗಾಗಲೇ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದ್ದು, ತನಿಖೆಯಿಂದ ಸತ್ಯ ಹೊರಬರಲಿದೆ ಎಂದಿದ್ದಾರೆ.

ದೇವಸ್ಥಾನದಲ್ಲಿನ ಭದ್ರತಾ ಲೋಪ ಮತ್ತು ಕಳುವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಇಒ (Executive Officer) ನಾಗರಾಜ್ ಅವರನ್ನು ಅಮಾನತುಗೊಳಿಸಲಾಗಿದೆ. “ಕಮಿಷನರ್ ವರದಿ ಪ್ರಕಾರ 120 ಗ್ರಾಂ ಚಿನ್ನಾಭರಣ ಕಳುವಾಗಿತ್ತು. ಆದರೆ ಈಗ 69 ಗ್ರಾಂ ಎನ್ನಲಾಗುತ್ತಿದೆ. ಈ ವ್ಯತ್ಯಾಸದ ಬಗ್ಗೆ ಮತ್ತು ಕಳ್ಳತನ ಹೇಗೆ ನಡೆಯಿತು ಎಂಬುದರ ಕುರಿತು ಸಮಗ್ರ ತನಿಖೆಗೆ ಆದೇಶಿಸಿದ್ದೇನೆ” ಎಂದು ಸಚಿವರು ತಿಳಿಸಿದರು.

 ಕಳೆದ 20 ವರ್ಷಗಳಿಂದ ಬಿಬಿಎಂಪಿ ಕರಗ ಉತ್ಸವಕ್ಕೆ ಸುಮಾರು 2 ಕೋಟಿ ರೂ. ಅನುದಾನ ನೀಡುತ್ತಿದೆ. ಇನ್ಮೇಲೆ ಬಿಬಿಎಂಪಿ ನೀಡುವ ಹಣವನ್ನು ಅವರೇ ನೇರವಾಗಿ ಖರ್ಚು ಮಾಡಬೇಕು. ಪಾಲಿಕೆಯವರೇ ಟೆಂಡರ್ ಕರೆದು ಬಿಲ್ ಪಾವತಿಸಲಿ ಎಂದು ಸೂಚನೆ ನೀಡುವುದಾಗಿ ತಿಳಿಸಿದರು. ದೇವಸ್ಥಾನದ ಹುಂಡಿ ಎಣಿಕೆ ಸಮಯದಲ್ಲಿ ವ್ಯವಸ್ಥಾಪನಾ ಮಂಡಳಿ ಇರಬೇಕು ಮತ್ತು ಕಡ್ಡಾಯವಾಗಿ ಸಿಸಿಟಿವಿ ಕ್ಯಾಮೆರಾ ಕಣ್ಣಾವಲಿನಲ್ಲಿ ನಡೆಯಬೇಕು. ಇಷ್ಟೆಲ್ಲಾ ಭದ್ರತೆಯಿದ್ದರೂ ಕಳ್ಳತನ ಆಗಿದ್ದು ಹೇಗೆ ಎಂಬುದು ತನಿಖೆಯಾಗಬೇಕಿದೆ.

ಎ ಮತ್ತು ಬಿ ಗ್ರೇಡ್ ದೇವಸ್ಥಾನಗಳಲ್ಲಿ ಕಡ್ಡಾಯವಾಗಿ ಲಾಕರ್ ವ್ಯವಸ್ಥೆ ಇರಬೇಕು. ಈ ದೇವಸ್ಥಾನದಲ್ಲಿ ಲಾಕರ್ ಇತ್ತೋ ಇಲ್ಲವೋ ಎಂಬ ಬಗ್ಗೆಯೂ ಮಾಹಿತಿ ಪಡೆಯಲಾಗುವುದು ಎಂದರು.