ಹೊಸಪೇಟೆ (ವಿಜಯನಗರ): ಕನ್ನಡ ರಾಜ್ಯೋತ್ಸವದ ಸಂಭ್ರಮದಂದೇ ವಿಜಯನಗರ ಉಸ್ತುವಾರಿ ಸಚಿವರಾದ ಜಮೀರ್ ಅಹ್ಮದ್ ಖಾನ್ ಅವರು ಕನ್ನಡ ನಾಡು-ನುಡಿಯ ಇತಿಹಾಸದ ಬಗ್ಗೆ ತಪ್ಪು ಮಾಹಿತಿ ನೀಡಿ ಭಾರೀ ಯಡವಟ್ಟು ಮಾಡಿಕೊಂಡಿದ್ದಾರೆ. ಸಚಿವರ ಈ ಹೇಳಿಕೆ ಕನ್ನಡದ ಬಗ್ಗೆ ತಪ್ಪು ಸಂದೇಶ ರವಾನಿಸಿದೆ ಎಂದು ವ್ಯಾಪಕ ಟೀಕೆಗೆ ಗುರಿಯಾಗಿದೆ.
ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವ ಜಮೀರ್ ಅವರು ಕನ್ನಡದ ಇತಿಹಾಸ ಮತ್ತು ಕರ್ನಾಟಕದ ನಾಮಕರಣದ ಬಗ್ಗೆ ತಪ್ಪಾಗಿ ಭಾಷಣ ಮಾಡಿದ್ದಾರೆ.
2 ಸಾವಿರಕ್ಕೂ ಹೆಚ್ಚು ವರ್ಷಗಳ ಇತಿಹಾಸವನ್ನು ಹೊಂದಿರುವ ಕನ್ನಡಕ್ಕೆ, “ಕನ್ನಡ ಭಾಷೆಗೆ 200 ವರ್ಷಗಳ ಇತಿಹಾಸವಿದೆ” ಎಂದು ಜಮೀರ್ ಹೇಳಿದ್ದಾರೆ. ಜೊತೆಗೆ, “1993ರಲ್ಲಿ ರಾಜ್ಯಕ್ಕೆ ಕರ್ನಾಟಕ ಎಂದು ಕರೆಯಲಾಯಿತು” ಎಂದು ಸಚಿವರು ಹೇಳಿದ್ದಾರೆ.
ಕನ್ನಡ ರಾಜ್ಯೋತ್ಸವದಂದೇ ಕನ್ನಡದ ಹಿರಿಮೆಯ ಬಗ್ಗೆ ತಪ್ಪು ಮತ್ತು ಆಧಾರರಹಿತ ಹೇಳಿಕೆ ನೀಡಿರುವುದು ಕನ್ನಡ ಭಾಷೆ ಮತ್ತು ಇತಿಹಾಸಕ್ಕೆ ಮಾಡಿದ ಅವಮಾನ ಎಂದು ಅನೇಕ ಕನ್ನಡಪರ ಸಂಘಟನೆಗಳು ಮತ್ತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಜವಾಬ್ದಾರಿಯುತ ಸ್ಥಾನದಲ್ಲಿರುವ ಉಸ್ತುವಾರಿ ಸಚಿವರು ಇಂತಹ ಸಾರ್ವಜನಿಕ ವೇದಿಕೆಗಳಲ್ಲಿ ಮಾತನಾಡುವ ಮುನ್ನ ಸರಿಯಾದ ಮಾಹಿತಿಯನ್ನು ತಿಳಿದುಕೊಳ್ಳಬೇಕು ಎಂಬ ಒತ್ತಾಯ ಕೇಳಿಬಂದಿದೆ.
